ರಾಮನಗರ: ನಗರದ 3 ರಸ್ತೆ ಹಾಗೂ 27 ಪ್ರಮುಖ ವೃತ್ತಗಳಿಗೆ ದೇಶ, ರಾಜ್ಯ ಹಾಗೂ ಜಿಲ್ಲೆಗಾಗಿ ಶ್ರಮಿಸಿದ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಿ ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ನಗರಸಭೆಯ ಪ್ರಶಸ್ತಿ ಭವನದಲ್ಲಿ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ಮಂಡಿಪೇಟೆ, ಕೇಕ್ ವರ್ಲ್ಡ್‌ ಪಕ್ಕದ ರಸ್ತೆ, ವಿದ್ಯಾಪೀಠ ರಸ್ತೆ ಹಾಗೂ ವಿವಿಧ ಬಡಾವಣೆಗಳ ರಸ್ತೆಗಳಲ್ಲಿರುವ ವೃತ್ತಗಳಿಗೆ ಮಹನೀಯರ ಹೆಸರುಗಳನ್ನು ನಾಮಕರಣ ಮಾಡಿದಾಗ ಸರ್ವ ಸದಸ್ಯರು ಮೇಜು ಕುಟ್ಟಿ ಒಪ್ಪಿಗೆ ಸೂಚಿಸಿದರು.

ರೈಲ್ವೆ ನಿಲ್ದಾಣ ವೃತ್ತಕ್ಕೆ ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್, ಚರ್ಚ್ ವೃತ್ತಕ್ಕೆ ಲೂರ್ದು ಮಾತಾ ಸರ್ಕಲ್, ವಾಟರ್ ಟ್ಯಾಂಕ್ ಸರ್ಕಲ್ ಗೆ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್, ಶಾಂತಿಲಾಲ್ ಲೇ ಔಟ್ ವೃತ್ತಕ್ಕೆ ಶ್ರೀ ಬಿಜಿಎಸ್ ಸರ್ಕಲ್, ರಾಯರದೊಡ್ಡಿ ವೃತ್ತಕ್ಕೆ ಛತ್ರಪತಿ ಶಿವಾಜಿ ಸರ್ಕಲ್, ಎಪಿಎಂಸಿ ಬಳಿಯ ವೃತ್ತಕ್ಕೆ ಎಚ್.ಡಿ.ದೇವೇಗೌಡ ಸರ್ಕಲ್, ಐದು ಮೂಲೆ ವೃತ್ತಕ್ಕೆ ಬಹರ್ ಷಾ ವಲಿ ಸರ್ಕಲ್, ಅರ್ಕೇಶ್ವರ ಕಾಲೋನಿ ಮೇಲಿರುವ ವೃತ್ತಕ್ಕೆ ಹೈದರ್ ಆಲಿ ಸರ್ಕಲ್ ಎಂದು ಹೆಸರಿಡಲು ತೀರ್ಮಾನಿಸಲಾಯಿತು.

ಬೀಡಿ ಕಾಲೋನಿ ವೃತ್ತಕ್ಕೆ ಹಾಜಿ ಸೈಯದ್ ಜಿಯಾವುಲ್ಲಾ ಸರ್ಕಲ್, ಇಂದಿರಾ ಕ್ಯಾಂಟಿನ್ ವೃತಕ್ಕೆ ಸೈಯದ್ ಅಹಮದ್ ಆಗಾ ಸರ್ಕಲ್, ಜಯಭಾರತ್ ಟೆಂಟ್ ವೃತ್ತಕ್ಕೆ ಎಪಿಜೆ ಅಬ್ದುಲ್ ಕಲಾಂ ಸರ್ಕಲ್, ಹಾಜಿನಗರಕ್ಕೆ ಸೈಯದ್ ಹಾಜಿ ಮುನೀರ್, ಆಂಜನೇಯ ಆರ್ಚ್ ವೃತ್ತಕ್ಕೆ ಸಿ.ಎಂ.ಲಿಂಗಪ್ಪ ಸರ್ಕಲ್, ಪ್ಯಾರಿ ಫಯಾಜ್ ಮನೆ ರಸ್ತೆಯ ವೃತ್ತಕ್ಕೆ ಬಿಸ್ಮಿಲ್ಲಾ ಸರ್ಕಲ್, ಬಿಳಗುಂಬ ರಸ್ತೆ ವೃತ್ತಕ್ಕೆ ಮಂಜುನಾಥ ಸರ್ಕಲ್, ನೂರಿ ಸರ್ಕಲ್ ಗೆ ನೂರಾನಿ ಸರ್ಕಲ್ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಲಾಯಿತು.

ಭವಾನಿ ನರ್ಸಿಂಗ್ ಹೋಮ್ ವೃತ್ತಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್, ಶೋಭಾ ಹೋಟೆಲ್ ವೃತ್ತಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಲ್, ಕನಕಪುರ ವೃತ್ತಕ್ಕೆ ಭಕ್ತ ಕನಕದಾಸ ಸರ್ಕಲ್, ಮೈನ್ ಸ್ಕೂಲ್ ರಸ್ತೆಯ ವೃತ್ತಕ್ಕೆ ಜಿ.ಬಿ.ರಾಜರತ್ನಂ ಸರ್ಕಲ್, ಚಾಮುಂಡೇಶ್ವರಿ ದೇವಾಲಯ ಬಳಿಯ ವೃತ್ತಕ್ಕೆ ಎ.ಎಂ.ವೆಂಕಟರಾಮಯ್ಯ ಸರ್ಕಲ್, ಸಂತು ಬಾರ್ ಪಕ್ಕದ ರಸ್ತೆಯ ವೃತ್ತಕ್ಕೆ ಕುವೆಂಪು ಸರ್ಕಲ್ ಎಂದು ಹೆಸರಿಡಲು ತೀರ್ಮಾನಿಲಾಯಿತು.


ಐಜೂರು ವೃತ್ತಕ್ಕೆ ಜಗಜ್ಯೋತಿ ಬಸವಣ್ಣ ಸರ್ಕಲ್, ಪಿಡಬ್ಲ್ಯೂಡಿ ವೃತ್ತಕ್ಕೆ ದೇವರಾಜ ಅರಸು ಸರ್ಕಲ್, ರೋಟರಿ ವೃತ್ತಕ್ಕೆ ಸ್ವಾಮಿ ವಿವೇಕಾನಂದ ಸರ್ಕಲ್, ಗಾಂಧಿನಗರದ ವೃತ್ತಕ್ಕೆ ದಲಿತ ಕವಿ ಸಿದ್ದಲಿಂಗಯ್ಯ, ವಾಟರ್ ಟ್ಯಾಂಕ್ ವೃತ್ತಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರನ್ನು ನಾಮಕರಣ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.

ಇನ್ನು ಪೊಲೀಸ್ ಠಾಣೆಯ ಮಂಡಿಪೇಟೆ ರಸ್ತೆಯಿಂದ ಹಳೇ ಸರ್ಕಾರಿ ಆಸ್ಪತ್ರೆ ರಸ್ತೆಗೆ ಎ.ಕೆ.ಅಬ್ದುಲ್ ಸಮದ್ ರಸ್ತೆ,

ಕೇಕ್ ವಲ್ಡ್ ಪಕ್ಕದ ರಸ್ತೆಗೆ ಮಲ್ಲೇಶ್ವರಿ ಸ್ವಾಮಿ ರಸ್ತೆ, ವಿದ್ಯಾಪೀಠ ಪಕ್ಕದ ರಸ್ತೆಗೆ ನಾಗೇಶ್ ಹತ್ವಾರ್ ರಸ್ತೆ ಎಂದು ನಾಮಕರಣ ಮಾಡಲು ಸರ್ವ ಸದಸ್ಯರು ಸಮ್ಮತಿ ಸೂಚಿಸಿದರು.