ಸಾರಾಂಶ
ಸೋಮವಾರಪೇಟೆ : ಅನೇಕ ಕಾಫಿ ಬೆಳೆಗಾರರು ದಶಕಗಳ ಹಿಂದೆಯೇ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ, ಕಾಳುಮೆಣಸು ಉತ್ಪಾದನೆ ಮಾಡುತ್ತಿದ್ದಾರೆ. ಈ ಜಾಗದಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. 5 ಎಕರೆಯಷ್ಟು ಭೂಮಿ ಹೊಂದಿರುವ ಸಣ್ಣ ಕಾಫಿ ಬೆಳೆಗಾರರಿಗೆ ಭೂ ಮಂಜೂರಾತಿ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ ಅಧ್ಯಕ್ಷತೆಯಲ್ಲಿ ಬೆಳೆಗಾರರ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಬರೆಯಲು ಬೆಳೆಗಾರರು ತೀರ್ಮಾನಿಸಿದರು.
ವ್ಯವಸಾಯಕ್ಕೆ ಯೋಗ್ಯವಾಗಿರುವ ಭೂಮಿಯನ್ನು ಸಿ ಆ್ಯಂಡ್ ಡಿ(ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ) ಭೂಮಿ ಎಂದು ಪರಿಗಣಿಸಿ ಅರಣ್ಯ ಇಲಾಖೆಗೆ ವರ್ಗಾಯಿಸುವುದು ಸರಿಯಲ್ಲ. ವ್ಯವಸಾಯಕ್ಕೆ ಯೋಗ್ಯ ಭೂಮಿಯನ್ನು ಸಿ ಆ್ಯಂಡ್ ಡಿ ಕ್ಲಾಸ್‌ನಿಂದ ತೆಗೆದು ಅರಣ್ಯ ಇಲಾಖೆಯಿಂದ ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರ ಪಡೆಯಲು ಕಾಫಿ ಬೆಳೆಗಾರರು ಹೋರಾಟ ಮಾಡಬೇಕಾಗಿದೆ. ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಪಡೆದು ಕಾಫಿ ಬೆಳೆಗಾರರ ಸಂಘದ ನೇತೃತ್ವದಲ್ಲಿ ಹೋರಾಟ ಮುಂದುವರಿಸಲು ತೀರ್ಮಾನಿಸಲಾಯಿತು.
ಸರ್ಕಾರಿ ಒತ್ತುವರಿ ಭೂಮಿಯನ್ನು ಪ್ಲಾಂಟೇಶನ್ ಉದ್ದೇಶಕ್ಕೆ ಲೀಸ್‌ಗೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸಿ ಆ್ಯಂಡ್ ಡಿ ಎಂದು ಪರಿಗಣಿಸದೆ ಸರ್ಕಾರ ಎಲ್ಲರಿಂದಲೂ ಅರ್ಜಿ ತೆಗೆದುಕೊಳ್ಳಲು ಮನವಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಯಿತು.
ತಾಲೂಕಿನಲ್ಲಿ ಕಾಫಿ ಕೊಯ್ಲು ಪ್ರಾರಂಭವಾಗಿದೆ. ಬೆಳೆಗಾರರು ಕೆ.ಜಿ.ಲೆಕ್ಕದಲ್ಲೇ ಕೂಲಿ ಕೊಡಬೇಕು. ಬುಷೆಲ್ ನಲ್ಲಿ ಅಳೆದರೆ ಸರಿಯಾದ ಲೆಕ್ಕ ಸಿಗುವುದಿಲ್ಲ. ಕಾರ್ಮಿಕರ ಕೆಲಸ ಅವಧಿಯನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ಗಂಟೆಯ ವರೆಗೆ ನಿರ್ಧರಿಸಬೇಕು. ಬೆಳೆಗಾರರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಯಿತು.
ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗಿದೆ. ಈಗ ಕಾಫಿಗೆ ಉತ್ತಮ ಬೆಲೆ ಸಿಗುತ್ತಿದೆ. ಕಳ್ಳತನ ಹೆಚ್ಚಾಗುವ ಸಂಭವವಿದ್ದು, ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂದರ್ಭ, ಪೊಲೀಸ್ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬೆಳೆಗಾರರಿಗೆ ತಿಳಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಎಚ್.ಕೆ.ಪ್ರಸಿ, ಕಾರ್ಯದರ್ಶಿ ಎ.ಎಂ.ಮನೋಹರ್, ಖಜಾಂಚಿ ಎಸ್.ಎಂ.ಕೃಷ್ಣ ಇದ್ದರು.