ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪಂಚಮಸಾಲಿ ಹೋರಾಟಕ್ಕೆ ಸ್ಪಂದಿಸದ ಕಾರಣ ಡಿ.10ರಂದು ಟ್ರ್ಯಾಕ್ಟರ್ ರ್‍ಯಾಲಿ ಮೂಲಕ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ವಿ.ಎಚ್.ಬಿರಾದಾರ ತಿಳಿಸಿದರು.ಸರ್ಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸತತ 3 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಸುವರ್ಣ ವಿಧಾನಸೌಧಕ್ಕೂ ಮುತ್ತಿಗೆ ಹಾಕಲಾಗಿದೆ. ಬಿಜೆಪಿಯವರು ನಮ್ಮ ಹೋರಾಟಕ್ಕೆ ಸ್ಪಂದಿಸಲಿಲ್ಲ. ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕೂಡ ಸ್ಪಂದಿಸುತ್ತಿಲ್ಲ ಎಂದು ದೂರಿದರು.ನಮ್ಮ ಹೋರಾಟ ತಡೆಯಲು ಸರ್ಕಾರ ಮುಂದಾಗಿದೆ. ಪಂಚಮಸಾಲಿ ಸಮಾಜದ ಶಾಸಕರು, ಸಚಿವರು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಇನ್ನೂ ಕಾಲಾವಕಾಶ ಇದೆ. ಚರ್ಚಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದ ಅವರು, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರಾಗಿರುವ ವಿಜಯಾನಂದ ಕಾಶಪ್ಪನವರು ನಮ್ಮ ಸಮುದಾಯದ ಜಗದ್ಗುರುಗಳು ಇಲ್ಲದ ಸಮಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಶ್ರೀಗಳಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರು ಟಿಕೇಟ್‌ಗಾಗಿ ಜಗದ್ಗುರುಗಳನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದರು. ಇದನ್ನು ನೆನಪಿಸಿಕೊಳ್ಳಬೇಕು. ಟಿಕೇಟ್ ಬೇಡುವಾಗ ಶ್ರೀಗಳ ಹಾಗೂ ಸಮಾಜದ ನೆನಪಾಗುತ್ತದೆ. ಮೀಸಲಾತಿ ಹೋರಾಟ ಬಂದಾಗ ಸಮಾಜ, ಶ್ರೀಗಳನ್ನು ಕಡೆಗಣಿಸುವುದು ಸರಿಯಲ್ಲ. ಜಗದ್ಗುರುಗಳ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಪಂಚಮಸಾಲಿ ಸಮುದಾಯದಲ್ಲಿಯೂ ಬಹಳಷ್ಟು ಜನ ಬಡವರಿದ್ದಾರೆ. ಬಡವರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ. ಹೀಗಾಗಿ ಸಮುದಾಯದ ಎಲ್ಲ ಶಾಸಕರು, ಸಚಿವರು ಪಕ್ಷಬೇಧ ಮರೆತು ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಟೀಕೆ-ಟಿಪ್ಪಣೆ ಮಾಡದೇ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ನ್ಯಾಯವಾದಿ ಬಿ.ಬಿ.ಬಿರಾದಾರ ಮಾತನಾಡಿ, ಸಮಾಜದ ಶಾಸಕರು, ಸಚಿವರು ಸಮಾಜದ ಪರವಾಗಿ ಇರಬೇಕು. ಸಮಾಜಕ್ಕೆ ಬೆನ್ನೆಲುಬಾಗಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಶ್ರೀಗಳಿಗೆ ನೋವಾಗುವಂತೆ ವರ್ತಿಸಬಾರದು ಎಂದು ಹೇಳಿದರು.ಪಂಚಮಸಾಲಿ ಸಮುದಾಯದ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ ಚಾಳಿಕಾರ ಮಾತನಾಡಿ, ಮೀಸಲಾತಿ ಹೋರಾಟ ಮಾಡುವುದಿಲ್ಲ. ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಿಲ್ಲ ಎಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಕೂಡಲೇ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಂಬರುವ ದಿನದಲ್ಲಿ ಸಮಾಜ ನಿಮಗೆ ತಕ್ಕ ಪಾಠ ಕಲಿಸುತ್ತದೆ. ರಾಜಕೀಯಕ್ಕಾಗಿ ಸಮಾಜವನ್ನು ಬಳಕೆ ಮಾಡಿಕೊಂಡು, ಅಧಿಕಾರ ಬಂದ ಮೇಲೆ ಸಮಾಜವನ್ನು ಕಡೆಗಣಿಸಬಾರದು ಎಂದು ಆಕ್ರೋಶ ಹೊರಹಾಕಿದರು.
ಈ ವೇಳೆ ಅನೀಲಗೌಡ ಬಿರಾದಾರ, ಬಾಳು ಮುಳಜಿ, ಸೋಮಶೇಖರ ದೇವರ, ಎಸ್.ಆರ್.ಬಿರಾದಾರ, ಡಿ.ಜಿ.ಜೊತಗೊಂಡ, ಶರಣಗೌಡ ಬಂಡಿ, ಶ್ರೀಶೈಲಗೌಡ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.