ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರಿಗೆ ಭಿಕ್ಷೆ ರೂಪದಲ್ಲಿ ₹2 ಸಾವಿರ ಬೆಳೆಹಾನಿ ಪರಿಹಾರ ನೀಡಲು ಮುಂದಾಗಿದೆ. ಹೀಗಾಗಿ ಈ ಆದೇಶ ಪ್ರತಿಯನ್ನು ರೈತರು ಆಯಾ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿ ಮುಂದೆ ಸುಡಲು ನಿರ್ಧರಿಸಿದ್ದೇವೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ತಿಳಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಮಳೆಯಿಲ್ಲದೇ ಲಕ್ಷಾಂತರ ಎಕರೆ ಬೆಳೆ ನಾಶವಾಗಿದ್ದು, ಆಹಾರ ಧಾನ್ಯ ಉತ್ಪಾದನೆ ಕುಂಠಿತವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈಗಾಗಲೇ ಆಹಾರ ಧಾನ್ಯಗಳ ರಫ್ತನ್ನು ನಿಲ್ಲಿಸಿದೆ. ಆಹಾರ ಉತ್ಪಾದನೆ ಮಾಡುವ ರೈತರ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬೆಳೆಹಾನಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ರೈತರು ಮೋಜು- ಮಸ್ತಿ ಮಾಡಲು ಸಾಲ ಮಾಡಿಲ್ಲ. ಆಹಾರ ಉತ್ಪಾದನೆಗಾಗಿ ಸಾಲ ಮಾಡಿದ್ದಾರೆ. ಆದ್ದರಿಂದ ಕೂಡಲೇ ರೈತರ ಸಾಲಮನ್ನಾ ಮಾಡಬೇಕಿದೆ. ದೇಶದ ಉದ್ದಿಮೆಗಳಿಗೆ ಸೇರಿದ್ದ ₹12 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಈ ಕುರಿತು ದೇಶದ ಎಲ್ಲ ರಾಜ್ಯಗಳಲ್ಲಿಯೂ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಕೃಷಿ ಕ್ಷೇತ್ರ ದುರ್ಬಲವಾಗುತ್ತಿವೆ. ರೈತರ ಮಕ್ಕಳು ಕೃಷಿ ಬಿಟ್ಟು ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆ ದಿನಗಳಲ್ಲಿ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಬೇಕಾಗುತ್ತಿದೆ. ಆದ್ದರಿಂದ ರೈತರ ಮಕ್ಕಳ ಮದುವೆಯಾಗುವ ಮಹಿಳೆಗೆ ಸರ್ಕಾರಿ ನೌಕರಿಯಲ್ಲಿ ಶೇ. 10ರಷ್ಟು ಮೀಸಲಾತಿ ನೀಡಬೇಕಿದೆ. ಜತೆಗೆ 60 ವರ್ಷದವರೆಗೂ ಕೃಷಿ ಕ್ಷೇತ್ರದಲ್ಲೇ ಕೆಲಸ ಮಾಡಿರುವ ರೈತರಿಗೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನೀಡಿರುವ ವಿದ್ಯುತ್‌ನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಡಬೇಕಿದೆ. ಇಂತಹ ಹಲವು ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಡಿ. 23ರಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದಲ್ಲಿ ರೈತರ ಅಧಿವೇಶನ ನಡೆಯಲಿದೆ. ಆ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ್, ಹಾಲೇಶ ಬೆನ್ನೂರು ಸೇರಿದಂತೆ ಇತರರಿದ್ದರು.