ಸಾರಾಂಶ
ಗಂಟೆಗಣಪತಿ ದೇವಾಲಯದ ಅಷ್ಟಬಂಧ ಮಹೋತ್ಸವ ಹಾಗೂ ಶಿಖರ ಪ್ರತಿಷ್ಠಾಪನ ಮಹೋತ್ಸವ ಮತ್ತು ನೂತನ ಕಟ್ಟಡ ಲೋಕಾರ್ಪಣೆಗೆ ಎಲ್ಲ ಸಿದ್ಧತೆಗಳನ್ನು ಆರಂಭಿಸಲಾಗಿದೆ.
ಯಲ್ಲಾಪುರ: ತಾಲೂಕಿನ ಚಂದಗುಳಿಯ ಪ್ರಸಿದ್ಧ ಶ್ರೀ ಕ್ಷೇತ್ರ ಸಿದ್ಧಿವಿನಾಯಕ(ಗಂಟೆಗಣಪತಿ) ದೇವಸ್ಥಾನದ ಅಷ್ಟಬಂಧ ಮಹೋತ್ಸವ ಹಾಗೂ ಶಿಖರ ಪ್ರತಿಷ್ಠಾ ಮಹೋತ್ಸವ, ದೇವಾಲಯದ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮವು ೨೦೨೫ ಫೆ. ೨೮ರಿಂದ ಮಾ. ೩ರ ವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ದೇವಾಲಯದ ಸಭಾಭವನದಲ್ಲಿ ಇತ್ತೀಚೆಗೆ ಸಮಾಲೋಚನಾ ಸಭೆಯಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವಿ. ಲಕ್ಷ್ಮಿನಾರಾಯಣ ಭಟ್ಟ ತಾರೀಮಕ್ಕಿ ಮಾತನಾಡಿ, ಗಂಟೆಗಣಪತಿ ದೇವಾಲಯದ ಅಷ್ಟಬಂಧ ಮಹೋತ್ಸವ ಹಾಗೂ ಶಿಖರ ಪ್ರತಿಷ್ಠಾಪನ ಮಹೋತ್ಸವ ಮತ್ತು ನೂತನ ಕಟ್ಟಡ ಲೋಕಾರ್ಪಣೆಗೆ ಎಲ್ಲ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಫೆ. ೨೮ರಂದು ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಾ. ೨ರಂದು ಸ್ವರ್ಣವಲ್ಲೀ ಶ್ರೀಗಳ ಅಮೃತಹಸ್ತದಿಂದ ಶಿಖರ ಪ್ರತಿಷ್ಠೆ ನಡೆಯಲಿದೆ ಎಂದರು.
ಪ್ರತಿದಿನ ಧರ್ಮಸಭೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.ಫೆ. ೨೮ರಿಂದ ಮಾ. ೨ರ ವರೆಗೆ ದೇವರ ದರ್ಶನ ಹೊರತುಪಡಿಸಿ, ಗಂಟೆ ಗಣಪತಿ ದೇವರಿಗೆ ಹಣ್ಣು- ಕಾಯಿ ಸೇವೆ ಸೇರಿದಂತೆ ಯಾವುದೇ ಸೇವಾ ಸಮರ್ಪಣೆ ಇರುವುದಿಲ್ಲ. ಮಾ. ೨ರ ಅಷ್ಟಬಂಧ ಮಹೋತ್ಸವದ ನಂತರ ಎಂದಿನಂತೆ ಸೇವೆಗಳು ನಡೆಯಲಿವೆ. ಅಷ್ಟಬಂಧ ಮಹೋತ್ಸವ ಹಾಗೂ ಶಿಖರ ಪ್ರತಿಷ್ಠಾಪನ ಮಹೋತ್ಸವದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಶಾಸಕ ಶಿವರಾಮ ಹೆಬ್ಬಾರರ ಗೌರವಾಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಧಾರ್ಮಿಕ ಸಮಿತಿ, ಸ್ವಾಗತ ಸಮಿತಿ, ಊಟೋಪಚಾರ ಸಮಿತಿ, ಪ್ರಚಾರ ಸಮಿತಿ, ಉಗ್ರಾಣ ಸಮಿತಿ, ವಿದ್ಯುತ್ ಹಾಗೂ ನೀರಾವರಿ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ಸಭಾ ನಿರ್ವಹಣಾ ಸಮಿತಿ, ಸ್ವಯಂಸೇವಕ ಸಮಿತಿ, ಪಡಚಾಕರಿ ಸಮಿತಿ, ಕೌಂಟರ್ ಸಮಿತಿ, ಊಟೋಪಚಾರ ಸಮಿತಿ ಮುಂತಾದ ೧೫ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಪ್ರಮುಖರಾದ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಪ್ರಮೋದ ಹೆಗಡೆ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಲ್.ಪಿ. ಭಟ್ಟ ಗುಂಡ್ಕಲ್, ನರಸಿಂಹ ಭಟ್ಟ ಗುಂಡ್ಕಲ್, ಸುಬ್ರಾಯ ಭಟ್ಟ ಗುಂಡ್ಕಲ್, ಟಿ.ಆರ್. ಹೆಗಡೆ ತೊಂಡೆಕೆರೆ ಹಾಗೂ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.