ಮಡಿಕೇರಿ ದಸರಾ ಸಂಭ್ರಮದ ಆಚರಣೆಗೆ ನಿರ್ಧಾರ

| Published : Aug 30 2025, 01:01 AM IST

ಸಾರಾಂಶ

ಮಡಿಕೇರಿ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶಾಸಕ ಡಾ.ಮಂತರ್ ಗೌಡ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಇತರರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ನಿಯೋಗ ಭೇಟಿ: ಡಾ.ಮಂತರ್ ಗೌಡ

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ಜನೋತ್ಸವ ದಸರಾವನ್ನು ಸಂಭ್ರಮ, ಸಡಗರ, ಸುರಕ್ಷತೆ ಹಾಗೂ ಸ್ವಚ್ಛತೆಯಿಂದ ಆಚರಿಸಲು ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶಾಸಕ ಡಾ.ಮಂತರ್ ಗೌಡ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಇತರರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.ಸುರಕ್ಷತೆಗೆ ಒತ್ತು:

ಸಭೆಯಲ್ಲಿ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಸಂಪ್ರದಾಯದಂತೆ ಹಿಂದಿನಿಂದ ನಡೆದುಕೊಂಡು ಬಂದಿರುವ ಮಡಿಕೇರಿ ದಸರಾವನ್ನು ವ್ಯವಸ್ಥಿತವಾಗಿ ಆಚರಿಸುವಂತಾಗಬೇಕು. ಸುರಕ್ಷತೆಗೆ ಒತ್ತು ನೀಡಬೇಕು. ಪ್ರತೀ ಮಂಟಪದಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಕರಗ ಹಾಗೂ ದಶಮಂಟಪಗಳು ಸಾಗುವ ಮಾರ್ಗದ ಗುಂಡಿ ಮುಚ್ಚುವ ಕಾರ್ಯವಾಗಬೇಕು ಎಂದರು.

ಹಣ ಬಿಡುಗಡೆ ಸಂಬಂಧ ಮುಖ್ಯಮಂತ್ರಿಯವರು, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಭೇಟಿ ಮಾಡಲು ನಿಯೋಗ ತೆರಳಲಾಗುವುದು ಎಂದು ಡಾ.ಮಂತರ್ ಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮಡಿಕೇರಿ ದಸರಾವು ನಾಡಿನ ಸಂಸ್ಕೃತಿ ಬಿಂಬಿಸುತ್ತದೆ. ಒಳ್ಳೆಯ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವುದು, ಮಹಿಳಾ, ಮಕ್ಕಳ, ಯುವ ಮತ್ತು ಕ್ರೀಡಾ ದಸರಾ ಆಚರಿಸುವುದು ಸೇರಿದಂತೆ ವಿವಿಧ ರೀತಿಯ ದಸರಾ ಆಚರಿಸುವುದು ವಿಶೇಷವಾಗಿದ್ದು, ಆ ದಿಸೆಯಲ್ಲಿ ಎಲ್ಲರೂ ಸಹಕರಿಸುವಂತೆ ಕೋರಿದರು.

ಅರ್ಥಪೂರ್ಣವಾಗಿ ಆಚರಿಸಿ:

ಮಡಿಕೇರಿ ದಸರಾದಲ್ಲಿ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ ಸಲ್ಲಿಸಿ ಕರಗ ಉತ್ಸವ ಮೂಲಕ ದಸರಾ ಆಚರಿಸುವುದು ವಿಶೇಷವಾಗಿದೆ. ವೇದಿಕೆ, ಬೆಳಕು, ಧ್ವನಿ ವ್ಯವಸ್ಥೆ ಹೀಗೆ ಹಲವು ರೀತಿಯ ಕಾರ್ಯಕ್ರಮಗಳು ಮಡಿಕೇರಿ ದಸರಾದಲ್ಲಿ ನಡೆಯುತ್ತಿರುವುದು ವಿಶೇಷ. ಆ ನಿಟ್ಟಿನಲ್ಲಿ ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಮಡಿಕೇರಿ ದಸರಾಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.ಪೊಲೀಸ್‌ ಇಲಾಖೆ ಕ್ರಮ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ರಾತ್ರಿ ವೇಳೆಯಲ್ಲಿ ನಡೆಯುವ ಮಡಿಕೇರಿ ದಸರಾಗೆ ಹೆಚ್ಚಿನ ಜನರು ಆಗಮಿಸುತ್ತಾರೆ. ಆ ನಿಟ್ಟಿನಲ್ಲಿ ಜನರ ಸುರಕ್ಷತೆ ಅತೀ ಮುಖ್ಯ. ಆಸ್ತಿ ಪಾಸ್ತಿ ಹಾನಿಯಾಗದಂತೆ ಗಮನಹರಿಸುವುದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು, ಸಾರಿಗೆ ಸಂಚಾರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವುದು, ಮತ್ತಿತರ ಕ್ರಮಗಳನ್ನು ಪೊಲೀಸ್ ಇಲಾಖೆ ವಹಿಸಲಿದೆ ಎಂದು ಹೇಳಿದರು.

ದಶ ಮಂಟಪಗಳ ಪ್ರದರ್ಶನಕ್ಕೆ ತೆರಳುವಾಗ ಸುರಕ್ಷತೆ ಅತೀ ಮುಖ್ಯವಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ಅನುಮತಿ ಪಡೆಯುವಂತಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಲಹೆ ನೀಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರಾದ ಡಾ.ಮಂತರ್ ಗೌಡ, ಇದುವರೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಂದ ಪ್ರಮಾಣ ಪತ್ರ ಪಡೆದಿಲ್ಲ. ಈಗಾಗಲೇ ದಶಮಂಟಪ ಸಮಿತಿಯವರಿಗೆ ಅನುಭವ ಇರುವುದರಿಂದ ಹಿಂದಿನಂತೆಯೇ ನಡೆಸಿಕೊಂಡು ಹೋಗುವಂತಾಗಬೇಕು. ಯಾವುದೇ ರೀತಿ, ಯಾರಿಗೂ ತೊಂದರೆಯಾಗದಂತೆ ಗಮನಹರಿಸಬೇಕು. ಸುರಕ್ಷತೆಗೆ ಒತ್ತು ನೀಡಬೇಕು ಎಂದು ಹೇಳಿದರು.ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜನ ಸಂದಣಿ ಇರುವ ಕಡೆಗಳಲ್ಲಿ ಪಟಾಕಿ ಸಿಡಿಸಬಾರದು. ಸುರಕ್ಷಿತ ಸ್ಥಳದಲ್ಲಿ ಪಟಾಕಿ ಸಿಡಿಸಬೇಕು. ರಕ್ಷಣೆ ಸಂಬಂಧ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು. ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು. ಸಹಾಯವಾಣಿ ಕೇಂದ್ರ ಆರಂಭಿಸಲಾಗುವುದು ಎಂದರು. ಮಡಿಕೇರಿ ದಸರಾದಲ್ಲಿ ಕೊಡಗು ಜಿಲ್ಲೆಯ ಕಲೆಗಳ ಪ್ರದರ್ಶನಕ್ಕೆ ಅವಕಾಶ ಆಗಬೇಕು. ಕಸವನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ದಶಮಂಟಪಗಳ ಸ್ಪರ್ಧೆ ಇರುವುದರಿಂದ ಪೈಪೋಟಿ ಹೆಚ್ಚಾಗಿದೆ. ಸ್ಪರ್ಧೆ ಇಲ್ಲದಿದ್ದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು. ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರ ಹೆಚ್ಚಿನದ್ದಾಗಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಕೋರಿದರು.

ದಸರಾ ಸಮಿತಿಯ ಧನಂಜಯ ಮಾತನಾಡಿ, ಹಿಂದಿನಿಂದಲೂ ದಶಮಂಟಪಗಳ ಸಂಬಂಧ ಆರ್‌ಟಿಒ ಕಚೇರಿಯಿಂದ ಅನುಮತಿ ಪಡೆದಿರುವುದಿಲ್ಲ. ಈ ಹಿಂದಿನಂತೆ ದಸರಾವನ್ನು ಆಚರಿಸಲು ಅವಕಾಶ ಮಾಡಬೇಕು ಎಂದರು. ದಸರಾ ಸಮಿತಿಯ ರಾಜೇಶ್ ಮಾತನಾಡಿ, ಮಂಟಪಗಳಿಗೆ ಸಂಬಂಧ ನಿಯಮಗಳನ್ನು ಪಾಲಿಸಲಾಗುವುದು. ಆದರೆ ಒತ್ತಡ ಹೇರಬಾರದು. ಕಥಾ ಸಾರಾಂಶವನ್ನು ನೀಡಲು ಡಿ.ಜೆ. ಅತ್ಯಗತ್ಯ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ. ಹೆಚ್ಚು ನಿಬಂಧನೆಗಳನ್ನು ಹೇರಬಾರದು ಎಂದು ಕೋರಿದರು.ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ ಮಾತನಾಡಿ, ಮಂಟಪಗಳ ವೀಕ್ಷಣೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರ ಅನುಮತಿ ಬೇಡ. ಮಡಿಕೇರಿ ದಸರಾದ ವೈಭವ ಕಡಿಮೆ ಮಾಡುವುದು ಬೇಡ, ಹೆಚ್ಚಿನ ನಿಬಂಧನೆಗಳನ್ನು ಅಳವಡಿಸುವುದರಿಂದ ಮಡಿಕೇರಿ ದಸರಾ ವೈಭವಕ್ಕೆ ತೊಂದರೆಯಾಗಲಿದೆ ಎಂದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸರ್ಕಾರದಿಂದ ಬಿಡುಗಡೆಯಾಗಿರುವ ಹಣವನ್ನು ಖರ್ಚು ಮಾಡಲಾಗಿದೆ. ಆರ್‌ಟಿಜಿಎಸ್ ಮೂಲಕ ಅವರವರ ಖಾತೆಗೆ ಹಣ ಪಾವತಿಯಾಗಿದೆ. ಯಾವುದೇ ಗೋಲ್ಡ್ ಕಾರ್ಡ್ ಮಾಡಿಸಿಲ್ಲ. ಸಾರ್ವಜನಿಕರಿಂದ ವಂತಿಗೆ ಪಡೆದಿರುವುದಿಲ್ಲ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್, ಪೊಲೀಸ್ ಇಲಾಖೆ ಅಧಿಕಾರಿಗಳು, ದಸರಾ ಸಮಿತಿ ಪದಾಧಿಕಾರಿಗಳು ಇತರರು ಇದ್ದರು.