ಏಕನಾಥ ಮೆದಿಕೇರಿ

ಹನುಮಸಾಗರ: ಹನುಮಸಾಗರ ಪಟ್ಟಣದ ಹೃದಯ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ (ಎಪಿಎಂಸಿ) ಕಚೇರಿ ಎದುರು ಅನಧಿಕೃತವಾಗಿ ನಿರ್ಮಾಣಗೊಂಡಿರುವ ಗೂಡಂಗಡಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.

ನಿತ್ಯ ಅಪಘಾತ ಸಂಭವಿಸುತ್ತಿದ್ದರೂ ಅಂಗಡಿಕಾರರು ತೆರವುಗೊಳಿಸಲು ಮುಂದಾಗದ ಹಿನ್ನೆಲೆಯಲ್ಲಿ ಎಪಿಎಂಸಿ ಆಡಳಿತ ಮಂಡಳಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಮೂರು ಬಾರಿ ಲಿಖಿತ ನೋಟಿಸ್ ನೀಡಿರುವ ಇಲಾಖೆ, ಪಪಂ (ಪಪಂ) ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಶೀಘ್ರದಲ್ಲೇ ತೆರವು ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ.

ಗುಳ್ಳಿ ಬಸವೇಶ್ವರ ವೃತ್ತದಿಂದ ಡಾ. ಅಂಬೇಡ್ಕರ್ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರೆಗೆ ಇರುವ ಮುಖ್ಯ ರಸ್ತೆಯ ತಂತಿ ಬೇಲಿಗೆ ಹೊಂದಿಕೊಂಡಂತೆ ಸುಮಾರು 33 ಗೂಡಂಗಡಿ ನಿರ್ಮಾಣಗೊಂಡಿವೆ. ಎಪಿಎಂಸಿಗೆ ದಿನನಿತ್ಯ ನೂರಾರು ರೈತರು ತಮ್ಮ ಕೃಷಿ ಉತ್ಪನ್ನ ಮಾರಾಟಕ್ಕೆ ತರಲು ಬರುತ್ತಾರೆ. ಆದರೆ ಕಚೇರಿ ಮುಂಭಾಗವೇ ಅತಿಕ್ರಮಣಗೊಂಡಿರುವುದರಿಂದ ರೈತರಿಗೆ ವಾಹನ ನಿಲುಗಡೆಗೆ ಹಾಗೂ ಸರಕು ಇಳಿಸಲು ತೊಂದರೆಯಾಗಿದೆ. ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗಿದೆ.

ಅಪಘಾತಗಳ ಸರಮಾಲೆ: ಚಿಕನ್ ಮತ್ತು ಮಟನ್ ಅಂಗಡಿಗಳಿಂದ ಉಂಟಾಗುವ ತ್ಯಾಜ್ಯ ಸರಿಯಾಗಿ ವಿಲೇವಾರಿ ಮಾಡದ ಕಾರಣ ನಾಯಿಗಳ ಹಾವಳಿ ಹೆಚ್ಚಾಗಿದೆ. ರಸ್ತೆಯ ಮಧ್ಯೆ ಅಲೆದಾಡುವ ನಾಯಿಗಳಿಂದ ವಾರದಲ್ಲಿ ಎರಡು-ಮೂರು ಬಾರಿ ಬೈಕ್ ಹಾಗೂ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗುತ್ತಿರುವ ಘಟನೆಗಳು ವರದಿಯಾಗಿವೆ. ಕೆಲವರು ಕೈ-ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವ ಉದಾಹರಣೆಗಳೂ ಇವೆ.


ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಸಂಚಾರ ಮಾಡುವ ಪ್ರದೇಶವಾಗಿರುವುದರಿಂದ ತಕ್ಷಣ ಕ್ರಮ ಅಗತ್ಯ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ತೆರಿಗೆ ಕಟ್ಟದೆ ವ್ಯವಹಾರ: ಅಂಗಡಿಕಾರರು ಎಪಿಎಂಸಿ ಅಥವಾ ಪಪಂಗೆ ಯಾವುದೇ ತೆರಿಗೆ ಪಾವತಿಸುತ್ತಿಲ್ಲ. ಕೆಲವರು ತಗಡಿನ ಶೆಡ್‌ ನಿರ್ಮಿಸಿ, ಬೇರೆಯವರಿಗೆ ಬಾಡಿಗೆಗೆ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ನಷ್ಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತ ಮಳಿಗೆ ಬಾಡಿಗೆಗೆ ಪಡೆದುಕೊಂಡಿರುವ ವ್ಯಾಪಾರಿಗಳು ನಿಯಮಬದ್ಧವಾಗಿ ತೆರಿಗೆ ಕಟ್ಟುತ್ತಿರುವಾಗ, ಅನಧಿಕೃತ ಅಂಗಡಿಕಾರರಿಂದ ಅವರು ನಷ್ಟ ಅನುಭವಿಸುತ್ತಿದ್ದಾರೆ.

ಜನಪ್ರತಿನಿಧಿಗಳ ಒತ್ತಡ?: ಕೆಲವು ಜನಪ್ರತಿನಿಧಿಗಳ ರಾಜಕೀಯ ಒತ್ತಡದಿಂದಲೇ ಈ ವರೆಗೆ ತೆರವು ಕಾರ್ಯಾಚರಣೆ ಮುಂದೂಡಲ್ಪಟ್ಟಿತ್ತು ಎಂಬುದು ಸಾರ್ವಜನಿಕರ ದೂರು. ಆದರೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆ ಇಲಾಖೆ ಈಗ ರಚನಾತ್ಮಕ ಹೆಜ್ಜೆ ಇಡಲು ಮುಂದಾಗಿದೆ.

ಆದಷ್ಟು ಬೇಗ ತೆರವು: ಈಗಾಗಲೇ ಎಪಿಎಂಸಿ ಮುಂದಿನ ಅನಧಿಕೃತ ಎಲ್ಲ ಅಂಗಡಿ ಮುಂಗಟ್ಟುಗಾರರಿಗೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಇನ್ನೂವರೆಗೆ ಯಾರೂ ಖಾಲಿ ಮಾಡಿಲ್ಲ. ಆದ್ದರಿಂದ ಪಪಂಗೆ ಹಾಗೂ ಪೊಲೀಸ್ ಇಲಾಖೆಗೆ ಅನಧಿಕೃತ ಅಂಗಡಿ ತೆರವುಗೊಳಿಸಲು ಸಹಾಯ ಮಾಡುವಂತೆ ಮನವಿ ನೀಡಲಾಗಿದೆ. ಆದಷ್ಟು ಬೇಗನೆ ಕಾರ್ಯ ಪ್ರವೃತ್ತಿಯಾಗಿ ತೆರವುಗೊಳಿಸಲಾಗುತ್ತದೆ ಎಂದು ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿ ಸುರೇಶ ತಂಗನೂರು ಹೇಳಿದರು.

ಸರ್ಕಾರಿ ಕಚೇರಿ ಮುಂದೆ ಅಂಗಡಿ ಹಾಕಬಾರದು. ಪಪಂದಿಂದ ಮೌಖಿಕವಾಗಿ ಅನಧಿಕೃತ ಗೂಡಂಗಡಿಕಾರರಿಗೆ ತಿಳಿಸಲಾಗಿದೆ. ಅವುಗಳು ತೆರವು ಕಾರ್ಯಾಚರಣೆ ವೇಳೆ ನಮ್ಮ ಸಿಬ್ಬಂದಿ ಎಪಿಎಂಸಿಯವರೊಂದಿಗೆ ಸಹಕರಿಸಲಿದ್ದಾರೆ ಎಂದು ಹನುಮಸಾಗರ ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.