ಸಾರಾಂಶ
ಮಡಿಕೇರಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಕೊಡಗಿನ ಸೌಲಭ್ಯಗಳನ್ನು ಕಸಿದುಕೊಳ್ಳುವ ಮೂಲಕ ಪುಟ್ಟ ಜಿಲ್ಲೆಯ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ವಿಶ್ವ ವಿದ್ಯಾಲಯವನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಕೊಡಗು ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ವಿವಿಯನ್ನು ಸ್ಥಾಪಿಸಿತು. ಇದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಶಿಕ್ಷಣದ ಗುರಿ ಸಾಧನೆಗೆ ಹೆಚ್ಚು ಉಪಯುಕ್ತವಾಗಿತ್ತು. ಅಲ್ಲದೆ ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ವಿವಿಯನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾಗ್ಯಗಳನ್ನು ಅನುಷ್ಠಾನಗೊಳಿಸುವ ಭರದಲ್ಲಿ ಕಾಲಹರಣ ಮಾಡುತ್ತಿದೆ. ಐದು ಗ್ಯಾರಂಟಿಗಳನ್ನು ಪೂರೈಸುವುದಕ್ಕಷ್ಟೇ ತನ್ನ ಅಧಿಕಾರವನ್ನು ಬಳಸಿಕೊಳ್ಳುತ್ತಿರುವ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ನೀಡುತ್ತಿಲ್ಲ. ಇದೀಗ ಖರ್ಚು ವೆಚ್ಚವನ್ನು ಕುಗ್ಗಿಸಿ ಭಾಗ್ಯಗಳಿಗೆ ಹಣವನ್ನು ವಿನಿಯೋಗಿಸಲು ಶಿಕ್ಷಣ ಮಂದಿರಕ್ಕೆ ಕೈಹಾಕಿದೆ ಎಂದು ಆರೋಪಿಸಿದ್ದಾರೆ.