ಸಾರಾಂಶ
ಕರ್ನಾಟಕ ರಾಜ್ಯ ಸರ್ಕಾರ 9 ವಿಶ್ವವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಮುರಳಿ ಹೊಸಮಜಲು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯ ಸರ್ಕಾರ 9 ವಿಶ್ವವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಮುರಳಿ ಹೊಸಮಜಲು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಿದ 10 ಹೊಸ ವಿವಿಗಳ ಪೈಕಿ ಹಾಸನ, ಚಾಮರಾಜನಗರ, ಕೊಡಗು ಸಹಿತ 9 ವಿವಿಗಳನ್ನು ಮುಚ್ಚುವ ಪ್ರಯತ್ನ ನಡೆಸಲಾಗುತ್ತಿದ್ದು, ಬೀದರ್ ವಿವಿಯನ್ನು ಮಾತ್ರ ಉಳಿಸಲು ಸರ್ಕಾರ ನಿರ್ಧರಿಸಿದೆ. ಸೂಕ್ತ ಸೌಲಭ್ಯಗಳ ಕೊರತೆ ಹಾಗೂ ಹಣಕಾಸಿನ ಮುಗ್ಗಟ್ಟು ವಿವಿಗಳನ್ನು ಮುಚ್ಚಲು ಕಾರಣ ಎಂದು ಸಮಿತಿ ತಿಳಿಸಿರುವುದು ನಾಚಿಕೆಗೇಡು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಕಲ್ಪನೆಯಂತೆ ಜಿಲ್ಲೆಗೊಂದು ವಿವಿ ಆರಂಭಿಸಲಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಶಿಕ್ಷಣದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ ಎಂದು ಆರೋಪಿಸಿದರು.ವಿವಿಗಳನ್ನು ಆದಾಯ ತರುವ ದೇಗುಲಗಳಂತೆ ನೋಡದೆ ಸಾಮಾಜಿಕ ಬೆಳವಣಿಗೆಗೆ ವಿದ್ಯಾಭ್ಯಾಸದ ಮಟ್ಟವನ್ನು ಉನ್ನತೀಕರಿಸುವ ವಿದ್ಯಾ ದೇಗುಲಗಳನ್ನಾಗಿ ನೋಡಬೇಕು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಸರ್ಕಾರ ನಿರಾಕರಿಸಬಾರದು ಎಂದು ಕ್ಯಾ.ಕಾರ್ಣಿಕ್ ಆಗ್ರಹಿಸಿದರು. ಬಿಜೆಪಿ ಜಿಲ್ಲಾ ವಕ್ತಾರ ರಾಜ್‌ಗೋಪಾಲ ರೈ ಇದ್ದರು.