ಸಾರಾಂಶ
ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಡಾ. ಎಚ್. ಗಣಪತಿಯಪ್ಪ ಸ್ಥಾಪಿತ ರೈತ ಸಂಘ, ಮಲೆನಾಡು ರೈತ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಲೆನಾಡು ರೈತರ ಭೂಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ ಒಂಬತ್ತನೇ ದಿನಕ್ಕೆ ಕಾಲಿರಿಸಿದೆ.
ಕನ್ನಡಪ್ರಭ ವಾರ್ತೆ ಸಾಗರ
ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಡಾ. ಎಚ್. ಗಣಪತಿಯಪ್ಪ ಸ್ಥಾಪಿತ ರೈತ ಸಂಘ, ಮಲೆನಾಡು ರೈತ ಹೋರಾಟ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಲೆನಾಡು ರೈತರ ಭೂಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ ಒಂಬತ್ತನೇ ದಿನಕ್ಕೆ ಕಾಲಿರಿಸಿದೆ. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಮಲೆನಾಡಿನ ಭೂಹಕ್ಕು ವಂಚಿತರ ಪರ ಹೋರಾಟ ಆರಂಭಿಸಿ ಒಂಬತ್ತು ದಿನ ಕಳೆದಿದೆ. ಸರ್ಕಾರ ಈ ತನಕ ಮಾತುಕತೆಗೆ ಬರಲು ಲಿಖಿತವಾಗಿ ಆಹ್ವಾನ ನೀಡಿಲ್ಲ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ದೆಹಲಿ ಮಾದರಿಯಲ್ಲಿ ವರ್ಷಗಟ್ಟಲೆ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ್ ಮಾತನಾಡಿ, ಮಲೆನಾಡು ರೈತರು ತ್ಯಾಗ ಮಾಡದೆ ಹೋಗಿದ್ದರೆ ರಾಜ್ಯಕ್ಕೆ ವಿದ್ಯುತ್ ಜತೆಗೆ ಹೊಸಪೇಟೆವರೆಗೆ ಕೃಷಿಯೂ ಅಭಿವೃದ್ದಿಯಾಗುತ್ತಿರಲಿಲ್ಲ. ದೇವರಾಜ ಅರಸು, ಕಾಗೋಡು ತಿಮ್ಮಪ್ಪ ಅವರು ಕೊಟ್ಟ ಹಕ್ಕುಪತ್ರವನ್ನು ರದ್ದುಮಾಡಲು ಹಾಲಿ ಅರಣ್ಯ ಸಚಿವರು ನೋಟಿಸ್ ನೀಡಲು ಸೂಚನೆ ನೀಡಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಮಲೆನಾಡು ರೈತರನ್ನು ದರೋಡೆಕೋರರು, ಕಳ್ಳರಂತೆ ನೋಡುತ್ತಿದ್ದಾರೆ. ಮಲೆನಾಡು ರೈತರ ಭೂಹಕ್ಕಿನ ಸಮಸ್ಯೆ ಬಗೆಹರಿಸುವ ತನಕ ಕಾಗೋಡು ಚಳವಳಿ ಮಾದರಿಯಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಏಳು ದಶಕಗಳಿಂದ ಹಕ್ಕುಪತ್ರ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಸ್ಸು ಮಾಡಿದರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದು ದೊಡ್ಡ ವಿಷಯವಲ್ಲ. ಆಳುವವರಿಗೆ ಕಾನೂನು ಬದಲಾವಣೆ ಮಾಡುವ ಇಚ್ಛಾಸಕ್ತಿ ಇಲ್ಲ. ಈ ಹಿನ್ನೆಲೆಯಲ್ಲಿ ರೈತ ಹೋರಾಟಕ್ಕೆ ನಮ್ಮ ಸಂಘ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಹೇಳಿದರು. ಪ್ರಮುಖರಾದ ಸುಂದರ ಸಿಂಗ್, ಪರಶುರಾಮ್ ಸಿದ್ದಿಹಳ್ಳಿ, ರಾಘವೇಂದ್ರ ಸಂಪಳ್ಳಿ, ರಾಜೇಶ್ ಬುಕ್ಕಿಬರೆ, ಚಕ್ರಪಾಣಿ, ಇಂದ್ರಕುಮಾರ್, ವೀರಣ್ಣ ಗೌಡ, ಜಿ.ಟಿ. ಸತ್ಯನಾರಾಯಣ, ಗಣೇಶ್ ತುಮರಿ ಹಾಜರಿದ್ದರು.