ಸಾರಾಂಶ
ರಾಣಿಬೆನ್ನೂರು: ನಗರದ ವಿವಿಧ ಕಡೆಗಳಲ್ಲಿ ಅನಧಿಕೃತ ಬಡಾವಣೆಗಳು ತಲೆ ಎತ್ತದ ಹಾಗೆ ಕಡಿವಾಣ ಹಾಕುವುದು ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಜಾರಿಗೆ ತರಲು ಶನಿವಾರ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ವೀರೇಶ ಮೋಟಗಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಗರದ ಎಲ್ಲಾ ಬಡಾವಣೆ ಮಾಲೀಕರು ಬಡಾವಣೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ (ರೇರಾ)ಯನ್ವಯ ನೋಂದಣಿ ಮಾಡಿಸಬೇಕು. ಪ್ರಾಧಿಕಾರದಿಂದ ನಗರದಲ್ಲಿ ಕೆಲವೊಂದು ವೃತ್ತ (ಸರ್ಕಲ್)ಗಳ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿ ಕ್ರಮ ಕೈಗೊಳ್ಳುವುದು. ಶಾಸಕರ ಆದೇಶ ಹಾಗೂ ನಿಯಮಾನುಸಾರ ಪ್ರಾಧಿಕಾರದಿಂದ ಸರ್ಕಾರದ ಅನುಮೋದನೆ ಪಡೆದು ಕೆರೆ ಪುರುಜೀವನ ಶುಲ್ಕದಡಿಯಲ್ಲಿ ನಗರದ ಗಂಗಾಜಲ ಕೆರೆ (ದೊಡ್ಡಕೆರೆ)ಯನ್ನು ಅಭಿವೃದ್ಧಿಪಡಿಸುವುದು ಹಾಗೂ ನಿರ್ವಹಣೆ ಮಾಡಲು ಪ್ರಾಧಿಕಾರದಿಂದ ಸೂಕ್ತ ಕ್ರಮ ಕೈಗೊಳ್ಳುವುದು. ನಗರದ ಬಡಾವಣೆಗಳಲ್ಲಿನ ನಾಗರೀಕ ಸೌಲಭ್ಯ ಮತ್ತು ಉದ್ಯಾನವನ/ಬಯಲು ಜಾಗೆಗೆ ಕಾಯ್ದಿರಿಸಿದ ನಿವೇಶನಗಳನ್ನು ಒತ್ತುವರಿಯಾಗದಂತೆ ಕ್ರಮವಹಿಸುವುದು. ಖಾಸಗಿ ಬಡಾವಣೆದಾರರು ಬಡಾವಣೆಯ ಅಭಿವೃದ್ಧಿ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲು ಮಾಲೀಕರಿಗೆ ಸೂಚಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನೂರುಜಾನ್ ನಂದ್ಯಾಲ, ಬಸವರಾಜ ಕಡೆಮನಿ, ಗುರುನಾಥ ಕಂಬಳಿ, ಪ್ರಭಾರ ಆಯುಕ್ತ ಎಫ್.ಐ. ಇಂಗಳಗಿ, ನಗರ ಯೋಜಕ ಸದಸ್ಯರಾದ ರವಿಕಿರಣ ಬಿ.ಆರ್., ಹೆಸ್ಕಾಂ ಸಹಾಯಕ ಅಭಿಯಂತ ರಮೇಶ ನಾಯ್ಕ, ಒಳಚರಂಡಿ ಮಂಡಳಿ ಸಹಾಯಕ ಅಭಿಯಂತ ಅಬ್ದುಲ್ ರಶೀದ್ ಸಭೆಯಲ್ಲಿ ಭಾಗವಹಿಸಿದ್ದರು.