ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಶ್ರೀ ಕೋಟೆ ಮಹಾಗಣಪತಿ ಮಂಟಪಕ್ಕೆ ಐದು ಅಂಕ ಕಡಿತಗೊಳಿಸಿರುವ ನಿರ್ಧಾರವನ್ನು ದಶಮಂಟಪ ಸಮಿತಿ ಸಮರ್ಥಿಸಿಕೊಂಡಿದೆ. ನಿಯಮ ಉಲ್ಲಂಘನೆ ಹಾಗೂ ಮತ್ತೊಂದು ಮಂಟಪಕ್ಕೆ ಪ್ರದರ್ಶನದ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಪಾಂಡಿರ ಪೂಣಚ್ಚ ತಿಳಿಸಿದ್ದಾರೆ.
ಮಡಿಕೇರಿ : ಮಡಿಕೇರಿ ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಶ್ರೀ ಕೋಟೆ ಮಹಾಗಣಪತಿ ಮಂಟಪಕ್ಕೆ ಐದು ಅಂಕ ಕಡಿತಗೊಳಿಸಿರುವ ನಿರ್ಧಾರವನ್ನು ದಶಮಂಟಪ ಸಮಿತಿ ಸಮರ್ಥಿಸಿಕೊಂಡಿದೆ. ನಿಯಮ ಉಲ್ಲಂಘನೆ ಹಾಗೂ ಮತ್ತೊಂದು ಮಂಟಪಕ್ಕೆ ಪ್ರದರ್ಶನದ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಪಾಂಡಿರ ಪೂಣಚ್ಚ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಮಂಟಪಕ್ಕೆ ನಿಗದಿತ ಸಮಯದಲ್ಲಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸದ ಕಾರಣ ಕೋಟೆ ಮಹಾಗಣಪತಿ ಮಂಟಪದ ಐದು ಅಂಕಗಳನ್ನು ಕಡಿತಗೊಳಿಸಲಾಗಿದೆ. ಈ ನಿರ್ಧಾರವನ್ನು ಹತ್ತು ಮಂಟಪಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಪ್ರಕಟಿಸಲಾಗಿತ್ತು. ಕೋಟೆ ಮಹಾಗಣಪತಿ ಮಂಟಪ ಸಮಿತಿಯ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದರು.ದಶಮಂಟಪಗಳು ಪಾಲಿಸಬೇಕಾದ 24 ನಿಯಮಗಳನ್ನು ಪತ್ರಿಕೆಗಳ ಮೂಲಕ ಹಾಗೂ ಸಭೆಗಳಲ್ಲಿ ತಿಳಿಸಲಾಗಿತ್ತು. ಕೋಟೆ ಮಹಾಗಣಪತಿ ಮಂಟಪದಲ್ಲಿನ ಬೃಹತ್ ಗಣಪತಿ ಮೂರ್ತಿಗೆ ಕಬ್ಬಿಣದ ಸಲಾಕೆಗಳ ಆಧಾರ ನೀಡಿರುವುದು ನಿಯಮಬಾಹಿರವಾಗಿದ್ದು, ಈ ಕಾರಣದಿಂದ ಇನ್ನೂ ಐದು ಅಂಕಗಳನ್ನು ಕಡಿತಗೊಳಿಸಲು ಅವಕಾಶವಿತ್ತು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿನೋದ್, ಖಜಾಂಚಿ ಜೀವನ್ ಹಾಗೂ ಉಪ ಖಜಾಂಚಿ ವಿನಯ್ ಬಂಗೇರ ಉಪಸ್ಥಿತರಿದ್ದು ಅಗತ್ಯವಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ ಎಂದು ತಿಳಿಸಿದರು.