ಸಾರಾಂಶ
ಹಾನಗಲ್ಲ: ಬೇಸಿಗೆ ಹಂಗಾಮಿನ ಬೆಳೆ ಬೆಳೆಯಲು ಹಾಗೂ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವುದಕ್ಕಾಗಿ ಧರ್ಮಾ ಜಲಾಶಯದಿಂದ ನಾಲ್ಕು ಹಂತದಲ್ಲಿ ನೀರು ಹರಿಸುವ ಕುರಿತು ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸವಣೂರು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನೀರಾವರಿ ಇಲಾಖೆ ಎಂಜಿನಿಯರ್ ಎಲ್.ಜಿ. ರಾಕೇಶ್ ಮಾತನಾಡಿ, ಜಲಾಶಯದಲ್ಲಿ ಸಧ್ಯ 29 ಅಡಿ ನೀರು ಸಂಗ್ರಹವಿದ್ದು, 96 ಕೆರೆಗಳಿಗೆ ನೀರು ತುಂಬಿಸಲು ಮತ್ತು ರೈತರು ಬೇಸಿಗೆಯಲ್ಲಿ ಬೆಳೆಯುವ ಬೆಳೆಗಳನ್ನು ನಿರ್ಧರಿಸಿ, ಯಾವ ಸಮಯಕ್ಕೆ ನೀರು ಬಿಡಬೇಕೆಂಬುದನ್ನು ಸಲಹೆ ನೀಡಬೇಕು. ಇದರಲ್ಲಿ 15 ಅಡಿಗಳಷ್ಟು ನೀರನ್ನು ಹಾನಗಲ್ಲ ಪಟ್ಟಣದ ಜನತೆಗೆ ಕುಡಿಯುವ ನೀರಿಗಾಗಿ ಮೀಸಲಿಡಬೇಕಿದೆ. ಇನ್ನುಳಿದ 6200 ಕ್ಯುಸೆಕ್ ನೀರನ್ನು ಹಂತ-ಹಂತವಾಗಿ ಬಿಡುಗಡೆಗೊಳಿಸಬಹುದಾಗಿದೆ ಎಂದು ಸಭೆಯ ಗಮನಕ್ಕೆ ತಂದರು.ಸಭೆಯಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಧರ್ಮಾ ಜಲಾಶಯದಿಂದ ಬೇಸಿಗೆ ಬೆಳೆಗಳಿಗಾಗಿ ನೀರು ಹರಿಸುವ ಮುನ್ನ ಕಾಲುವೆ ದುರಸ್ತಿಗೊಳಿಸಬೇಕು. ಜಲಾಶಯದಿಂದ ಎಷ್ಟೇ ನೀರು ಬಿಟ್ಟರೂ ಅದು ಸಮರ್ಪಕವಾಗಿ ರೈತರ ಜಮೀನುಗಳಿಗೆ ತಲುಪದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ರೈತ ಮುಖಂಡ ರಾಜಣ್ಣ ಗೌಳಿ ಮಾತನಾಡಿ, ಸದ್ಯ ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹವಿದ್ದು, ತಾಲೂಕಿನ ಸುರಳೇಶ್ವರ ಗ್ರಾಮದ ವರೆಗೆ ಬೆಳೆಗಳಿಗೆ ಹರಿಸಬಹುದಾದ ನೀರನ್ನು ಹೊರತುಪಡಿಸಿ, ಮಾರ್ಚ್ ತಿಂಗಳಲ್ಲಿ ಒಂದೇ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿದರೆ ಕೆರೆಗಳು ತುಂಬುವುದಲ್ಲದೇ, ಕಾಲುವೆಯ ಕೊನೆಯ ಹಳ್ಳಿಗಳಿಗೂ ತಲುಪುತ್ತದೆ ಎಂದರು.ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ರೈತ ಸಂಘದ ಕಾರ್ಯದರ್ಶಿ ರುದ್ರಪ್ಪ ಹಣ್ಣಿ ಮಾತನಾಡಿ, ವಾಸ್ತವ ಸಮಸ್ಯೆ ಅರಿವು ರೈತರಿಗೆ ಸಮಸ್ಯೆಯಾಗದಂತೆ ನೀರು ಹರಿಸಲು ಮನವಿ ಮಾಡಿದರು.
ಎಸಿ ಮೊಹಮ್ಮದ ಖಿಜರ್ ಮಾತನಾಡಿ, ಅಚ್ಚುಕಟ್ಟು ಪ್ರದೇಶದ ಎಲ್ಲ ಜಮೀನುಗಳಿಗೆ ನೀರು ಹರಿಸಲು ಎಲ್ಲ ವ್ಯವಸ್ಥೆ ಕೈಗೊಳ್ಳಲಾಗುವುದು, ರೈತರು ಆತಂಕಪಡುವ ಅಗತ್ಯವಿಲ್ಲ. ಮೊದಲ ಹಂತದಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಜ. 8ರಿಂದ 500 ಕ್ಯುಸೆಕ್ ನೀರು ಹರಿಸಲಾಗುವುದು. ಆನಂತರ 2ನೇ ಹಂತದಲ್ಲಿ ಫೆ. 1ರಿಂದ 25ರ ವರೆಗೆ, 3ನೇ ಹಂತದಲ್ಲಿ ಮಾ. 20ರಿಂದ ಉಳಿದಿರುವ ನೀರನ್ನು ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಬಿಡುಗಡೆಗೊಳಿಸಲಾಗುವುದು. ಅನಗತ್ಯವಾಗಿ ನೀರು ಪೋಲಾಗದಂತೆ ರೈತರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಸಭೆಯಲ್ಲಿ ಗ್ರೇಡ್-2 ತಹಸೀಲ್ದಾರ್ ರವಿ ಕೊರವರ, ಪುರಸಭಾ ಅಧ್ಯಕ್ಷೆ ಮಮತಾ ಆರೇಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಎಡಿಎ ಮಾರುತಿ ಅಂಗರಗಟ್ಟಿ, ನೀರಾವರಿ ಎಂಜಿನಿಯರ್ ರಾಘವೇಂದ್ರ, ಅನ್ನಪೂರ್ಣಾ ಮಣಕವಾಡ, ರೈತರಾದ ಕೊಟ್ರೇಶ ಅಂಗಡಿ, ಬಿ.ಸಿ. ಪಾಟೀಲ, ವೀರೇಶ ಬೈಲವಾಳ, ಭರಮಣ್ಣ ಶಿವೂರ, ಬಸವಂತ ಮೆಳ್ಳಳ್ಳಿ, ಚಂದ್ರಣ್ಣ ಗೂಳಿ, ರಾಮನಗೌಡ ಪಾಟೀಲ, ಶ್ರೀಕಾಂತ ದುಂಡಣ್ಣನವರ, ಶಿವಲಿಂಗಪ್ಪ ಈಶಪ್ಪನವರ, ಪರಶುರಾಮ ಕುಂಟನಹೊಸಳ್ಳಿ ಇತರರು ಉಪಸ್ಥಿತರಿದ್ದರು.