ಕನ್ನಡಪ್ರಭ ವಾರ್ತೆ ಬೆಳಗಾವಿ
ಕರ್ನಾಟಕ ಪರ ಘೋಷಣೆಯನ್ನು ಅಂಗೀಕರಿಸುವವರೆಗೆ ಹೋರಾಟವನ್ನು ಹಂತ ಹಂತವಾಗಿ ಮುಂದುವರಿಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಶನಿವಾರ ನಗರದ ಸರ್ಕಿಟ್ ಹೌಸ್‌ನಲ್ಲಿ ನಡೆದ ಕನ್ನಡ ಸಂಘಟನೆಗಳ ಅಧ್ಯಕ್ಷರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮೇ 13ರಂದು ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಕೈಗೊಂಡ ನಿರ್ಣಯ ಖಂಡಿಸಿದ ಸಭೆ, ಕರ್ನಾಟಕ ಪರ ಘೋಷಣೆಗೆ ಸಂಬಂಧಿಸಿದಂತೆ ಪಾಲಿಕೆ ತೆಗೆದುಕೊಂಡಿರುವ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.ಕರ್ನಾಟಕ ಪರ ಘೋಷಣೆ ಜಾರಿಗೊಳಿಸುವ ಬಗ್ಗೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಮಹಾನಗರ ಪಾಲಿಕೆ ಕೈಗೊಂಡ ಕ್ರಮದ ವಿರುದ್ಧವೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಈ ಕುರಿತು ಹಿರಿಯ ವಕೀಲ ಮೋಹನ ಕಾತರಕಿ ನೀಡಿದ ಅಭಿಪ್ರಾಯಗಳ ಕುರಿತು ಚರ್ಚೆ ನಡೆಯಿತು.
ಮಾ.26ರಿಂದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದ ವಿವಿಧ ಕನ್ನಡ ಸಂಘಟನೆಗಳ ಮುಖಂಡರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಭೇಟಿ ಮಾಡಿ ಈ ವಿಚಾರವಾಗಿ ಚರ್ಚೆ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ರಾಜ್ಯಾಧ್ಯಕ್ಷ ಶಿವರಾಮೇಗೌಡ ಸೇರಿದಂತೆ ಹಲವು ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರಿಗೆ ಧನ್ಯವಾದ ಸಲ್ಲಿಸಲಾಯಿತು.ಕರ್ನಾಟಕ ಪರ ಘೋಷಣೆ ಅಂಗೀಕಾರದಲ್ಲಿ ವಿಳಂಬ ಮಾಡಿದಲ್ಲಿ ಮಹಾಪೌರರು ಹಾಗೂ ಉಪಮಹಾಪೌರರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜೊತೆಗೆ ಗಡಿ ವಿವಾದದ ಕುರಿತು ಸ್ಪಷ್ಟ ನಿಲುವು ಪ್ರಕಟಿಸುವಂತೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪುನಃ ಸ್ಥಾಪಿಸಲಾದ ಹಲಗಲಿ ಶಾಸನದ ಪ್ರತಿಕೃತಿಯ ಪೂಜೆ ಕಾರ್ಯಕ್ರಮವನ್ನು ಮುಂದಿನ ವಾರ ಆಯೋಜಿಸಲು ತೀರ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಹಿರಿಯ ಕನ್ನಡ ಹೋರಾಟಗಾರ ವಾಟಾಳ ನಾಗರಾಜ ಹಾಗೂ ಶಿವರಾಮೇಗೌಡ ಅವರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಕರವೇ ಜಿಲ್ಲಾಧ್ಯಕ್ಷ ವಾಜಿದ್ ಹಿರೇಕೊಡಿ, ಗಡಿನಾಡು ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಮೈನುದ್ದೀನ ಮಕಾನದಾರ ಮೊದಲಾದವರು ಉಪಸ್ಥಿತರಿದ್ದರು.