ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಆರಂಭಗೊಂಡು 25 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಭವನದಲ್ಲಿ ಅ. 4ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ ಎಂದು ಚಿಕ್ಕಮಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ತಿಳಿಸಿದರು.ಈ ಕಾರ್ಯಕ್ರಮವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಮಧು ಬಂಗಾರಪ್ಪ, ಕೆ.ಜೆ.ಜಾರ್ಜ್, ಸಂಸದರಾದ ಬಿ. ವೈ.ರಾಘವೇಂದ್ರ, ಜಯರಾಮ್ ರಮೇಶ್, ಕೋಟಾ ಶ್ರೀನಿವಾಸ್ ಪೂಜಾರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಶಾಸಕರು ಉಪಸ್ಥಿತರಿರಲಿದ್ದಾರೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳ ಅಂತಿಮ ಘಟ್ಟವಾಗಿ ಅ. 4 ರಂದು ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅರಣ್ಯ ಸಚಿವರು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕುರಿತ ಕಿರು ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ ಎಂದರು.ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಯಶಪಾಲ್ ಕ್ಷೀರಸಾಗರ್ ಮಾತನಾಡಿ, ಭದ್ರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಹಿಂದಿಗಿಂತಲೂ ಇಂದು ಪರಿಸರ ವೃದ್ಧಿಯಾಗಿದೆ ಜೊತೆಗೆ ವನ್ಯಜೀವಿಗಳ ಸಂಖ್ಯೆ ದೊಡ್ಡಮಟ್ಟದಲ್ಲಿ ವೃದ್ಧಿಯಾಗಿದೆ ಎಂದು ತಿಳಿಸಿದರು.
ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೂ ಮುನ್ನ ಈ ಪರಿಸರದಲ್ಲಿ ಕೇವಲ 8 ಹುಲಿಗಳು ಮಾತ್ರ ಇದ್ದವು. ಇಂದು ಹುಲಿಗಳ ಸಂಖ್ಯೆ 30 ದಾಟಿದೆ. 445 ಆನೆಗಳು, 119 ಚಿರತೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿವೆ ಎಂದು ಹೇಳಿದರು.ಸಂರಕ್ಷಿತ ಪ್ರದೇಶದಲ್ಲಿ ಸಸ್ಯಹಾರಿ ಜೀವಿಗಳಿಗೆ ಉತ್ತಮ ಆಹಾರ ಸಿಗುತ್ತಿದೆ. ಹೀಗಾಗಿ ಸಸ್ಯಹಾರಿ ವನ್ಯಜೀವಿಗಳ ಸಂಖ್ಯೆ ಭಾರಿಮಟ್ಟದಲ್ಲಿ ಹೆಚ್ಚಾಗಿದೆ. ಮಾಂಸಾಹಾರಿ ಜೀವಿಗಳಿಗೂ ಸೂಕ್ತ ಆಹಾರ ಲಭ್ಯವಾಗುತ್ತಿದೆ. ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ಪ್ರಮಾಣ ಸಮತೋಲಿತ ವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸಿಎಫ್ ಶಿವರಾತ್ರೇಶ್ವರ ಸ್ವಾಮಿ ಉಪಸ್ಥಿತರಿದ್ದರು.ಪೋಟೋ ಫೈಲ್ ನೇಮ್ 1 ಕೆಸಿಕೆಎಂ 6