ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಡಳಿತ ತಾಲೂಕು ಅಧಿಕಾರಿಗಳಿಂದ ಸಮಗ್ರ ವರದಿ ಪಡೆದುಕೊಂಡು ಈ ಕೂಡಲೇ ಚನ್ನಪಟ್ಟಣ ಮತ್ತು ಕನಕಪುರ ತಾಲೂಕು ಬರ ಪೀಡಿತವೆಂದು ಘೋಷಣೆ ಮಾಡಿ ಪರಿಹಾರದ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭವಾರ್ತೆ ಚನ್ನಪಟ್ಟಣ

ಮಳೆ ಇಲ್ಲದೇ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು ಚನ್ನಪಟ್ಟಣ ಮತ್ತು ಕನಕಪುರ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರಾಜ್ಯ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಎಂ.ಕೆ. ನಿಂಗಪ್ಪ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿ ಚನ್ನಪಟ್ಟಣ ಮತ್ತು ಕನಕಪುರ ತಾಲೂಕಿನಲ್ಲಿ ಜನ ಜಾನುವಾರುಗಳಿಗೆ ಆಗುತ್ತಿರುವ ತೊಂದರೆಯನ್ನು ಪ್ರಸ್ತಾಪಿಸಿ, ಮಳೆ ಕೊರತೆಯಿಂದ ತಾಲೂಕಿನಲ್ಲಿ ಸಂಪೂರ್ಣ ಬರದ ಛಾಯೆ ಆವರಿಸಿದೆ. ರೈತರ ಬೆಳೆಗಳು ಒಣಗಿ ನಷ್ಟ ಅನುಭವಿಸುವಂತಾಗಿದೆ. ಬಹುತೇಕ ಭಾಗಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳದೇ ಭೂಮಿ ಬಂಜರವಾಗಿ ಉಳಿದಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ತಾಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ ತಾಲೂಕಿನಲ್ಲಿ ಆಗಿರುವ ಮಳೆ ಮತ್ತು ಬೆಳೆ ನಷ್ಟದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಹೋಗಿ, ಜಿಲ್ಲೆಯ ರಾಮನಗರ ಮತ್ತು ಮಾಗಡಿ ತಾಲೂಕುಗಳನ್ನು ಬರ ಪೀಡಿತ ತಾಲೂಕನ್ನಾಗಿ ಘೋಷಣೆ ಮಾಡಿದ್ದಾರೆ. ಈವರೆವಿಗೂ ಚನ್ನಪಟ್ಟಣ ಮತ್ತು ಕನಕಪುರ ತಾಲೂಕನ್ನು ಬರ ಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡದೇ ಮೀನಮೇಷ ಎಣಿಸಲಾಗುತ್ತಿದೆ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಡಳಿತ ತಾಲೂಕು ಅಧಿಕಾರಿಗಳಿಂದ ಸಮಗ್ರ ವರದಿ ಪಡೆದುಕೊಂಡು ಈ ಕೂಡಲೇ ಚನ್ನಪಟ್ಟಣ ಮತ್ತು ಕನಕಪುರ ತಾಲೂಕು ಬರ ಪೀಡಿತವೆಂದು ಘೋಷಣೆ ಮಾಡಿ ಪರಿಹಾರದ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.

ಕುಡಿಯವು ನೀರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಳೆ ಸಾಲ ಬಡ್ಡಿ ಮನ್ನಾ ಮತ್ತು ಸಾಲ ವಸೂಲಾತಿಗೆ ವಿನಾಯಿತಿ ನೀಡಬೇಕು. ಸಹಕಾರ ಸಂಘಗಳ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕಲ್ಪಿಸಿಕೊಡಬೇಕು. ಜಿಲ್ಲಾ ಮತ್ತು ತಾಲೂಕು ಆಡಳಿತ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಕುರಿತಂತೆ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೃಷಿಕ ಸಮಾಜ ಸಮಿತಿ ತಾಲೂಕು ಅಧ್ಯಕ್ಷ ಸಿ.ರಾಜೇಶ್ ಮಾತನಾಡಿ, ತಾಲೂಕಿನಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು, ತಾಲೂಕನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡಬೇಕು. ಉದ್ಯೋಗ ಖಾತರಿ ಯೋಜನೆ, ಕುಡಿಯುವ ನೀರಿನ ಪೂರೈಕೆ, ಜಾನುವಾರುಗಳಿಗೆ ಮೇವು ಪೂರೈಕೆ, ಬ್ಯಾಂಕ್ ಸಾಲ ಮನ್ನಾದಂತಹ ಪರಿಹಾರ ಕಾರ್ಯಗಳನ್ನು ಕೈಗೊಂಡು ರೈತರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ನಿಂಗೇಗೌಡ (ಬಿಳಿಯಪ್ಪ), ಪದಾಧಿಕಾರಿಗಳಾದ ರಾಜಣ್ಣ, ನಂಜೇಗೌಡ, ನಾಗೇಶ್, ನಿಂಗೇಶ್ ಆರ್., ಅರ್ಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.