ಸಾರಾಂಶ
- ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಭಾಷಿಕರಿಂದ ತುಂಬಿ ತುಳುಕುತ್ತಿರುವ ಬೆಂಗಳೂರಿನಲ್ಲಿ ಕನ್ನಡ ಭಾಷೆ, ಕನ್ನಡಿಗರೇ ಸುರಕ್ಷಿತವಾಗಿಲ್ಲದ ಪರಿಸ್ಥಿತಿ ಇದೆ. ದಾವಣಗೆರೆ-ಚಿತ್ರದುರ್ಗ ಕೇಂದ್ರವಾಗಿಟ್ಟುಕೊಂಡು ನೂತನ ರಾಜಧಾನಿ ನಿರ್ಮಿಸುವಂತೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಶನಿವಾರ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ, ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಬೆಂಗಳೂರಿಗಿಂತಲೂ ರಾಜಧಾನಿಯಾಗುವ ಎಲ್ಲ ಅರ್ಹತೆ ಇದ್ದ ದಾವಣಗೆರೆ ಹಿಂದಿನ ಹಿರಿಯರ ದೂರದೃಷ್ಟಿ ಕೊರತೆಯಿಂದ ಅವಕಾಶ ತಪ್ಪಿತ್ತು. ಈಗಲೂ ಕಾಲ ಮಿಂಚಿಲ್ಲ ಎಂಬುದನ್ನು ಸರ್ಕಾರ ಮನಗಾಣಲಿ ಎಂದರು.
ದಾವಣಗೆರೆ, ಚಿತ್ರದುರ್ಗ ಕೇಂದ್ರವಾಗಿಟ್ಟುಕೊಂಡು, ವಿಮಾನ ನಿಲ್ದಾಣ ನಿರ್ಮಿಸಬೇಕು. ನಾಡಿನ ನಾಲ್ಕೂ ದಿಕ್ಕಿಗೂ ರಸ್ತೆ ಸಂಪರ್ಕ, ಮೂರು ದಿಕ್ಕಿಗೆ ರೈಲ್ವೆ ಸಂಪರ್ಕ ಹೊಂದಿರುವ ರಾಜ್ಯದ ಕೇಂದ್ರ ಬಿಂದುವಾದ ಈ ಊರನ್ನು ಹೊಸ ರಾಜಧಾನಿ ಘೋಷಣೆ ಮಾಡಲಿ. ಈ ಬಗ್ಗೆ ರಾಜಕೀಯ ನಾಯಕರು, ವಿಚಾರವಂತರು, ಅಭಿವೃದ್ಧಿ ಪರ ಕಾಳಜಿಯುಳ್ಳವರು, ಮಠಾಧೀಶರು ಧ್ವನಿ ಎತ್ತಬೇಕು. ವಿಶ್ವ ಕರವೇ ಕನ್ನಡ ರಾಜ್ಯೋತ್ಸವದ ಜೊತೆಗೆ ಸಾಧಕರು, ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುವ ಮಾದರಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ವಿಶ್ವ ಕರವೇ ನಿಸ್ವಾರ್ಥ ಸೇವೆ ಮಾಡುತ್ತಿದೆ. ಜನರ ಹೃದಯ ಗೆದ್ದು ಕೆ.ಜಿ.ಯಲ್ಲಪ್ಪ ಮತ್ತು ತಂಡ ಕೆಲಸ ಮಾಡುತ್ತಿದೆ. ಕನ್ನಡ ಭಾಷೆ, ನೆಲ, ಜಲ ದಾವಣಗೆರೆಯಲ್ಲಿ ಸುಭದ್ರವಾಗಿದೆ. ನಿಮ್ಮ ಪ್ರತಿ ಕೆಲಸದ ಜೊತೆಗೆ ನಾನೂ ಇರುತ್ತೇವೆ. ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಪಾದರಸದಂತೆ ಕೆಲಸ ಮಾಡುತ್ತಿದ್ದು, ಆರೋಗ್ಯಕ್ಕೆ ನೀಡುವಷ್ಟೇ ಕಾಳಜಿ ಕೆಲಸ, ಜಿಲ್ಲೆಗಾಗಿ ತೋರಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಒಬ್ಬ ಮರಾಠನಾಗಿದ್ದರೂ, ಕನ್ನಡ ನಾಡು, ನುಡಿ, ನೆಲ, ಜಲ ಭಾಷೆ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದಾರೆ. ಮರಾಠರು ಅಂದರೆ ಕನ್ನಡ ವಿರೋಧಿಗಳೆಂಬ ಭಾವನೆಯನ್ನು ಅಳಿಸಿ ಹಾಕುವಂತೆ ಬೆಳಗಾವಿಯಲ್ಲಿ ರಕ್ತವನ್ನು ಹರಿಸಿ, ಕೆ.ಜಿ.ಯಲ್ಲಪ್ಪ ಹೋರಾಟ ಮಾಡಿದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿದರು. ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಉಪ ಮೇಯರ್ ಸೋಗಿ ಶಾಂತಕುಮಾರ, ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ವಕೀಲ ರಜ್ವಿಖಾನ್, ಗುರುಕುಲ ವಿದ್ಯಾಸಂಸ್ಥೆಯ ಆರ್.ಅಬ್ದುಲ್, ಬಿ.ಎನ್.ಇರ್ಷಾದ್ ಅಹಮ್ಮದ್ ಇತರರು ಉಪಸ್ಥಿತರಿದ್ದರು.ಎ.ಪ್ರಭಾಕರ್, ಡಾ.ಅಶೋಕ ಪಾಳೇದ, ರಮೇಶ ಜಹಗೀರದಾರ್, ಜಿ.ಎಸ್.ವೀರೇಶ, ಶಿವರಾಜ ಈಳಿಗೇರ, ಬಲ್ಲೂರು ರವಿಕುಮಾರ, ಎಚ್.ಮಲ್ಲೇಶ, ಪಾಲವ್ವನಹಳ್ಳಿ ಪ್ರಸನ್ನಕುಮಾರ, ಕೆ.ಎನ್.ವೆಂಕಟೇಶ, ಓಂಕಾರಯ್ಯ ತವನಿಧಿ, ಪಿ.ಬಿ.ರವಿಕುಮಾರ, ಡಾ.ಅನೀಶ್, ಷಾರೂಕ್ ಹಷ್ಕಿ, ಎಂ.ಡಿ.ಮುಲ್ಲಾ, ಪಿ.ಬಸವರಾಜಪ್ಪ, ಎಸ್.ಪುಣ್ಯಶ್ರೀ, ಸುಜನ್ ಆಚಾರ್ಯ, ಫಾರೂಕ್ ರನ್ನು ಸನ್ಮಾನಿಸಲಾಯಿತು. ಸಂತೋಷ ದೊಡ್ಮನಿ, ಅಮ್ಜದ್ ಅಲಿ, ಮೆಹಬೂಬ್, ಸಿದ್ದೇಶ, ಭೀಮಪ್ಪ, ಬಿ.ಈ.ದಯಾನಂದ ಇತರರು ಪಾಲ್ಗೊಂಡಿದ್ದರು.
- - -ಕೋಟ್ ಎಲೆಮರೆಯ ಕಾಯಿಯಂತಹ ಸಾಧಕರು, ಭವಿಷ್ಯದ ಪ್ರತಿಭೆಗಳನ್ನು ವಿಶ್ವ ಕರವೇ ಗುರುತಿಸಿ, ಮಾದರಿ ಕೆಲಸ ಮಾಡುತ್ತಿದೆ. ಇದು ಸ್ಫೂರ್ತಿ ನೀಡುವ ಕೆಲಸ. ಹೆಣ್ಣು ಮಕ್ಕಳನ್ನು ಗೌರವಿಸುವ ನೆಲ ನಮ್ಮದು
- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ- - - -16ಕೆಡಿವಿಜಿ6:
ದಾವಣಗೆರೆಯಲ್ಲಿ ವಿಶ್ವ ಕರವೇ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಶ್ರೀ ಬಸವಪ್ರಭು ಸ್ವಾಮೀಜಿ ಉದ್ಘಾಟಿಸಿದರು. ವಿವಿಧ ಗಣ್ಯರು ಪಾಲ್ಗೊಂಡಿದ್ದರು.