ಸರ್ಕಾರ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಪಾಂಡವಪುರ ಹಾಗೂ ಮದ್ದೂರು ತಾಲೂಕನ್ನು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳನ್ನು ಬರಗಾಲದ ಪಟ್ಟಿಗೆ ಸೇರಿಸಿದ್ದಾರೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಮಾನದಂಡ ಅನುಸರಿಸಿ ಬರದ ಪಟ್ಟಿಗೆ ಸೇರಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿವಿಧ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ 3.27 ಕೋಟಿ ರು. ವೆಚ್ಚದಲ್ಲಿ, ಹಿರೇಮರಳಿ ಗ್ರಾಪಂ ವ್ಯಾಪ್ತಿಯಲ್ಲಿ 31.40 ಲಕ್ಷ ರು. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ ಸಲ್ಲಿಸಿದರು.

ತಾಲೂಕಿನ ಟಿ.ಎಸ್.ಛತ್ರ ಗ್ರಾಪಂನ ವ್ಯಾಪ್ತಿಯ ಕೆ.ಹೊಸೂರು 31.53 ಲಕ್ಷ ರು., ಇಂಗಲಗುಪ್ಪೆ 43.25 ಲಕ್ಷ ರು., ಕೆರೆತೊಣ್ಣೂರು 48 ಲಕ್ಷ ರು., ತಿರುಮಲಾಪುರ 49.27 ಲಕ್ಷ ರು., ಪಟ್ಟಣಗೆರೆ 58.43 ಲಕ್ಷ ರು., ದೇಶವಳ್ಳಿ 51.22 ಲಕ್ಷ ರು., ಚಂದ್ರೆ 46 ಲಕ್ಷ ರು. ಹಾಗೂ ಹಿರೇಮರಳಿ ಗ್ರಾಪಂ ವ್ಯಾಪ್ತಿಯ ಬನಘಟ್ಟ ಗ್ರಾಮದಲ್ಲಿ 17.60 ಲಕ್ಷ ರು, ಬೇವಿನಕುಪ್ಪೆ ಗ್ರಾಮದಲ್ಲಿ 13.80ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಸಲ್ಲಿಸಿದರು.

ನಂತರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮಳೆ ಹಾಗೂ ನೀರಿನ ಕೊರತೆಯಿಂದ ತಾಲೂಕಿನಲ್ಲಿ ಭೀಕರ ಬರಗಾಲದ ಸನ್ನಿವೇಶವಿದೆ. ತಾಲೂಕನ್ನು ಬರಗಾಲ ಎಂಬುದಾಗಿ ಸರ್ಕಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಪಾಂಡವಪುರ ಹಾಗೂ ಮದ್ದೂರು ತಾಲೂಕನ್ನು ಹೊರತುಪಡಿಸಿ ಉಳಿದೆಲ್ಲ ತಾಲೂಕುಗಳನ್ನು ಬರಗಾಲದ ಪಟ್ಟಿಗೆ ಸೇರಿಸಿದ್ದಾರೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ಮಾನದಂಡ ಅನುಸರಿಸಿ ಬರದ ಪಟ್ಟಿಗೆ ಸೇರಿಸಲಾಗುವುದು ಎಂದರು.

ಜಿಲ್ಲೆಯ ವಸ್ತು ಸ್ಥಿತಿ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು ಎಂಬುದಾಗಿ ನೀರಾವರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಭರವಸೆ ನೀಡಿದ್ದಾರೆ. ಮೇಕೆದಾಟು ಯೋಜನೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೂಡಲೇ ಮೇಕೆದಾಟು ಯೋಜನೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಹಾಗೇ, ರಾಜ್ಯ ಸರ್ಕಾರ ಕೂಡಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು. ಎಸ್ ಐಆರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಚುನಾವಣೆ ನಡೆಸಲು ಕ್ರಮವಹಿಸಬೇಕು. ಅಧಿಕಾರವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಅಗತ್ಯವಿದೆ ಎಂದರು.

ಇದೇ ವೇಳೆ ಲೋಕೋಪಯೋಗಿ ಇಲಾಖೆ ಎಇಇ ಜಾಯಿಕುಮಾರ್ ಸೇರಿದಂತೆ ಆಯಾ ಗ್ರಾಮಗಳ ಮುಖಂಡರು ಹಾಜರಿದ್ದರು.ವಿಶ್ವಕರ್ಮ ಜಯಂತಿ ಆಚರಣೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ

ಪಾಂಡವಪುರ:ತಾಲೂಕಿನ ಬನ್ನಂಗಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.

ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾಲೇಜು ಉಪಾಧ್ಯಕ್ಷ ಬಿ.ಕೆ.ಶ್ರೀನಿವಾಸ್ ಚಾಲನೆ ನೀಡಿ ಮಾತನಾಡಿ, ರೈತರ ಬೆನ್ನೆಲುವಾಗಿ ಕೆಲಸ ಮಾಡುತ್ತಿರುವ ವಿಶ್ವಕರ್ಮ ಸಮುದಾಯವು ಸಮಾಜದ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಬಣ್ಣಿಸಿದರು.ಸಮಾಜದಲ್ಲಿ ಕೃಷಿ ಕ್ಷೇತ್ರಕ್ಕೆ ಅಗತ್ಯ ಇರುವ ಸಲಕರಣಿಗಳ ತಯಾರಿಕೆ, ಕೈಗಾರಿಕೆ, ಮನೆ, ಕಟ್ಟಡ, ಭವನ ನಿರ್ಮಾಣ, ಚಿನ್ನಾಭರಣ ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿ ಕೆಲಸ ಮಾಡುತ್ತಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಸರ್ಕಾರವೇ ಆಚರಣೆ ಮಾಡುವ ಮೂಲಕ ಅವರಿಗೆ ಗೌರವ ತರುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ವಿಶ್ವಕರ್ಮರನ್ನು ಗೌರವದಿಂದ ನೋಡುವ ಕೆಲಸ ಮಾಡಬೇಕು ಎಂದರು.

ಈ ವೇಳೆ ಪ್ರಾಂಶುಪಾಲ ಬಸವರಾಜು, ವಿಶ್ವಕರ್ಮ ಸಮುದಾಯದ ಗೌರವಾಧ್ಯಕ್ಷ ತಮ್ಮಣ್ಣಚಾರ್, ಅಧ್ಯಕ್ಷ ಚಲುವಚಾರ್, ಹೋಬಳಿ ಅಧ್ಯಕ್ಷ ರವಿ ಬಿ.ಜೆ., ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಮಹೇಂದ್ರ, ಖಜಾಂಚಿ ವಿಜಯ, ನಾಗರತ್ನ, ಬ್ಯಾಂಕ್ ಪುಷ್ಪಾಂಜಲಿ ನೇತ್ರಾವತಿ ಸೇರಿದಂತೆ ಉಪನ್ಯಾಸಕರು ಸೇರಿದಂತೆ ಹಲವರು ಹಾಜರಿದ್ದರು.