ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸುವುದು, ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಬರಗಾಲದ ಸಮರ್ಪಕ ನಿರ್ವಹಣೆಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮೂಲ ಸಿದ್ಧಾಂತದ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಾದಯಾತ್ರೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಭಾನುವಾರ ಗುಂಡ್ಲುಪೇಟೆಯಿಂದ ಚಾಮರಾಜನಗರದವರೆಗೆ ಪಾದಯಾತ್ರೆ ಆರಂಭಿಸಿದ ಪ್ರತಿಭಟನಾಕಾರರು, ಸೋಮವಾರ ಜಿಲ್ಲಾ ಕೇಂದ್ರ ತಲುಪಿ ನಗರದ ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ಮಾಡಿ, ನಂತರ ಸರ್ಕಾರದ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಭೀಕರ ಬರಗಾಲದಿಂದ ಜಿಲ್ಲೆಯ ರೈತರು ಮತ್ತು ಜಾನುವಾರುಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಜಿಲ್ಲೆಯ ಎಲ್ಲಾ ಕೆರೆಗಳನ್ನು ಶೀಘ್ರವಾಗಿ ತುಂಬಿಸಬೇಕು, ಜಾನುವಾರುಗಳಿಗೆ ಉಚಿತ ಮೇವು ಒದಗಿಸಬೇಕು, ಬರಗಾಲದ ಹಿನ್ನೆಲೆಯಲ್ಲಿ ರೈತರ ಸಹಕಾರ ಸಂಘಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಮೈಕ್ರೋ ಫೈನಾನ್ಸ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕಬಿನಿ ಜಲಾಶಯದಲ್ಲಿ ನೀರಿನ ಲಭ್ಯತೆ ಇರುವುದರಿಂದ ಗಾಂಧಿಗ್ರಾಮ ಏತ ನೀರಾವರಿ ಯೋಜನೆಯ ಮೂಲಕ ಕಮರಳ್ಳಿ ತೊರೆಯಿಂದ ರಾಘವಾಪುರ, ಗರಗನಹಳ್ಳಿ, ಹಳ್ಳದ ಮಾದಳ್ಳಿ, ಮಳವಳ್ಳಿ, ಅಗತಗೌಡನಹಳ್ಳಿ ಸೇರಿ ವಿವಿಧ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದರು.
ಆಲಂಬೂರು ಏತ ನೀರಾವರಿ ಯೋಜನೆಯ ಮೂಲಕ ಹುತ್ತೂರು ಹಾಗೂ ವಡ್ಡಗೆರೆ ಕೆರೆಗಳಿಗೆ ನೀರು ಹರಿಸಿ ಗುಂಡ್ಲುಪೇಟೆ ತಾಲೂಕಿನ ಕೆರೆಗಳನ್ನು ತುಂಬಿಸಬೇಕು. ಇದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನಾವು ಹಲವಾರು ಬಾರಿ ಹೋರಾಟ ಮಾಡಿದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳದ ಕಾರಣ, ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.ಕೊಳ್ಳೇಗಾಲ ಹಾಗೂ ಹನೂರು ತಾಲೂಕುಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಗುಂಡ್ಲುಪೇಟೆ ತಾಲೂಕಿನ ೧೧೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಗಳು ಇನ್ನೂ ಆರಂಭವಾಗದಿರುವ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.
ರೈತರ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಗೌಡೇಗೌಡ, ಮನುಸೊಮಯ್ಯ, ವಿಜಯೇಂದ್ರ, ಶಿರಮಳ್ಳಿ ಸಿದ್ದಪ್ಪ, ಮಹೇಶ್, ನಟರಾಜು, ಮಾಧು, ಶಿವಕುಮಾರ್, ದಿಲೀಪ್, ಬಸವೇಶ, ಮಹದೇವಪ್ಪ, ಲೋಕೇಶ್, ರತ್ನಮ್ಮ, ಗೌರಮ್ಮ ಇತರರು ಭಾಗವಹಿಸಿದ್ದರು.