ಮುಂಗಾರುಮಳೆ ಕೈಕೊಟ್ಟ ಪರಿಣಾಮ ಹಾಸನ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಜೊತೆಗೆ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸಮರ್ಪಕ ಪರಿಹಾರ, ವಿಶೇಷ ಆರ್ಥಿಕ ನೆರವು ಹಾಗೂ ಬೆಳೆ ಸಾಲ ಮರುಪಾವತಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು ಎಂದು ಹಾಸನ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಮುಂಗಾರುಮಳೆ ಕೈಕೊಟ್ಟ ಪರಿಣಾಮ ಹಾಸನ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಜೊತೆಗೆ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸಮರ್ಪಕ ಪರಿಹಾರ, ವಿಶೇಷ ಆರ್ಥಿಕ ನೆರವು ಹಾಗೂ ಬೆಳೆ ಸಾಲ ಮರುಪಾವತಿಗೆ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು ಎಂದು ಹಾಸನ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕೃಷಿಯೇ ಜಿಲ್ಲೆಯ ಜೀವನಾಡಿಯಾಗಿದ್ದು, ಸಾವಿರಾರು ಕುಟುಂಬಗಳು ಸಂಪೂರ್ಣವಾಗಿ ಕೃಷಿಯನ್ನು ಅವಲಂಬಿಸಿವೆ. ಭತ್ತ, ರಾಗಿ, ಮೆಕ್ಕೆಜೋಳ, ಆಲೂಗಡ್ಡೆ, ಶುಂಠಿ ಹಾಗೂ ವಿವಿಧ ತೋಟಗಾರಿಕಾ ಮತ್ತು ತರಕಾರಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬೆಳೆಗಳು ಬೆಳವಣಿಗೆ ಹಂತದಲ್ಲೇ ಒಣಗುತ್ತಿದ್ದು, ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು. ಹಾಸನ ತಾಲೂಕಿನಲ್ಲಿ ಆಲೂಗಡ್ಡೆ ಮತ್ತು ಮೆಕ್ಕೆಜೋಳ ಪ್ರಮುಖ ವಾಣಿಜ್ಯ ಬೆಳೆಗಳಾಗಿದ್ದು, ಸಾವಿರಾರು ರೈತರು ಹೆಚ್ಚಿನ ಬಂಡವಾಳ ಹೂಡಿ ಬೆಳೆ ಬೆಳೆದಿದ್ದಾರೆ. ಮಳೆಯ ಕೊರತೆಯಿಂದ ಸಾಕಷ್ಟು ಪ್ರದೇಶಗಳಲ್ಲಿ ಬಿತ್ತನೆ ವಿಫಲವಾಗಿದ್ದು, ಕೆಲವೆಡೆ ಮರುಬಿತ್ತನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೃಷಿ ವೆಚ್ಚ ಹೆಚ್ಚಿರುವ ಸಂದರ್ಭದಲ್ಲಿ ಬೆಳೆ ಕೈಕೊಟ್ಟಿರುವುದು ರೈತರನ್ನು ಸಂಕಷ್ಟದ ಅಂಚಿಗೆ ತಳ್ಳಿದೆ ಎಂದು ಅವರು ಹೇಳಿದರು.
ಹಿಂದಿನ ವರ್ಷಗಳಲ್ಲಿ ಅಂಗಮಾರಿ ರೋಗದ ಹಾವಳಿಯಿಂದ ಆಲೂಗಡ್ಡೆ ಬೆಳೆ ಭಾರೀ ನಷ್ಟ ಅನುಭವಿಸಿದ್ದರಿಂದ ಅನೇಕ ರೈತರು ಮೆಕ್ಕೆಜೋಳದತ್ತ ಮುಖ ಮಾಡಿದ್ದರು. ಆದರೆ ಈ ಬಾರಿ ಮೆಕ್ಕೆಜೋಳಕ್ಕೂ ಬಿಳಿ ಸುಳಿ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಉತ್ತಮ ಇಳುವರಿ ನಿರೀಕ್ಷಿಸಿದ್ದ ರೈತರಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ರೋಗಬಾಧೆ ಎರಡೂ ಸೇರಿ ಕೃಷಿ ಕ್ಷೇತ್ರಕ್ಕೆ ತೀವ್ರ ಹಿನ್ನಡೆ ಉಂಟುಮಾಡಿವೆ ಎಂದು ತಿಳಿಸಿದರು. ಬೆಳೆ ನಷ್ಟದಿಂದ ರೈತರು ಬ್ಯಾಂಕ್ ಸಾಲ, ಖಾಸಗಿ ಸಾಲ ಹಾಗೂ ಕೃಷಿ ಹೂಡಿಕೆ ಮರುಪಾವತಿಸುವ ಬಗ್ಗೆ ಆತಂಕದಲ್ಲಿದ್ದಾರೆ. ಸರ್ಕಾರ ಕೂಡಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಸಮಗ್ರ ಬೆಳೆ ಹಾನಿ ಸಮೀಕ್ಷೆ ನಡೆಸಿ ನಿಜವಾದ ನಷ್ಟವನ್ನು ಅಂದಾಜಿಸಬೇಕು. ಈ ಅಧಿವೇಶನದಲ್ಲಿ ಬೆಳೆ ಬಗ್ಗೆ ಚರ್ಚೆ ಮಾಡಲಾಗುವುದು. ನಂತರ ಹಾಸನ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಪರಿಹಾರ ಧನ, ಬೆಳೆ ವಿಮೆ, ಬಡ್ಡಿ ಮನ್ನಾ ಹಾಗೂ ಅಗತ್ಯ ಕೃಷಿ ನೆರವು ನೀಡುವ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು. ಕೇವಲ ದಾಖಲೆಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳದೆ, ಅಧಿಕಾರಿಗಳು ಗ್ರಾಮ ಮಟ್ಟಕ್ಕೆ ತೆರಳಿ ರೈತರ ಸಮಸ್ಯೆಗಳನ್ನು ಪರಿಶೀಲಿಸಬೇಕು. ರೈತರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಿದರೆ ಮಾತ್ರ ಕೃಷಿ ಚಟುವಟಿಕೆಗಳಿಗೆ ಪುನಶ್ಚೇತನ ಸಿಗಲಿದೆ. ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಮಾನವೀಯ ಹಾಗೂ ತುರ್ತು ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಜೆಡಿಎಸ್ ಮುಖಂಡರಾದ ಶಿವಣ್ಣ ಇತರರು ಇದ್ದರು.