ಗ್ರಾಪಂ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ

| Published : Dec 19 2024, 12:31 AM IST

ಸಾರಾಂಶ

ರಾಜ್ಯದ ಗ್ರಾಮ ಪಂಚಾಯಿತಿ ಕರ ವಸೂಲಿಗಾರರು, ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಅನುಮೋದನೆ ಮಾಡಿ, ಸರ್ಕಾರಿ ನೌಕರರೆಂದು ಘೋಷಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗ್ರಾಪಂ ನೌಕರರು ದಾವಣಗೆರೆಯಲ್ಲಿ ಪ್ರತಿಭಟಿಸಿದ್ದಾರೆ.

- ಸಿಐಟಿಯು ನೇತೃತ್ವದಲ್ಲಿ ಬಿಲ್ ಕಲೆಕ್ಟರ್, ಕ್ಲರ್ಕ್‌, ಡೇಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ, ಸ್ವಚ್ಛತಾಗಾರರ ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದ ಗ್ರಾಮ ಪಂಚಾಯಿತಿ ಕರ ವಸೂಲಿಗಾರರು, ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್, ನೀರುಗಂಟಿ, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಅನುಮೋದನೆ ಮಾಡಿ, ಸರ್ಕಾರಿ ನೌಕರರೆಂದು ಘೋಷಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗ್ರಾಪಂ ನೌಕರರು ಪ್ರತಿಭಟಿಸಿದರು.

ನಗರದ ಜಿಪಂ ಕಚೇರಿ ಮುಂಭಾಗದಲ್ಲಿ ಸಂಘಟನೆ ಜಿಲ್ಲಾ ಮುಖಂಡ ಕೆ.ಎಚ್.ಆನಂದರಾಜು, ಸಂಘದ ಜಿಲ್ಲಾಧ್ಯಕ್ಷ ಎಸ್.ಸಿ.ಶ್ರೀನಿವಾಸಾಚಾರ್ ಇತರರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಘೋಷಣೆಗಳನ್ನು ಕೂಗಿದರು. ಜಿಪಂ ಉಪ ಕಾರ್ಯದರ್ಶಿ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಸಂಘಟನೆ ಮುಖಂಡರು ಮಾತನಾಡಿ, ಗ್ರಾಪಂ ಸಿಬ್ಬಂದಿಗೆ ಪಂಚಾಯಿತಿ ವಸೂಲಾತಿಯ ಶೇ.40ರ ಅನುದಾನದಲ್ಲಿ ವೇತನ ಹಾಗೂ ಕಂದಾಯ ಉಪಕರಗಳನ್ನು ಪ್ರತಿ ತಿಂಗಳು ಪಾವತಿಸಲು ಅನುಕೂಲ ಆಗುವಂತೆ ಪ್ರತ್ಯೇಕ ಖಾತೆ ತೆರೆಯಲು ಗ್ರಾಪಂಗಳಿಗೆ ನಿರ್ದೇಶನ ನೀಡಬೇಕು. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಕನಿಷ್ಠ ವೇತನ ₹31 ಸಾವಿರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂಗಳಲ್ಲಿ ಕೆಲಸ ಮಾಡುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅಂತಹವರು ಮತ್ತು ಅವಲಂಬಿತರಿಗೆ ಪ್ರತಿ ತಿಂಗಳು ಕನಿಷ್ಠ 6 ಸಾವಿರ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು. ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವವರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ 2ನೇ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ನೀಡಿದ್ದು ಸ್ವಾಗತಾರ್ಹ. ಆದರೆ, ಈಗಾಗಲೇ ಗ್ರಾಪಂಗಳಲ್ಲಿ ಹೆಚ್ಚುವರಿ ಕಾರ್ಯನಿರ್ವಹಿಸುವ ಡೇಟಾ ಎಂಟ್ರಿ ಆಪರೇಟರ್ ನೇಮಕ ಮಾಡಿಕೊಂಡು, ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಗ್ರಾಪಂಗಳಲ್ಲಿ ಕೆಲಸ ನಿರ್ವಹಿಸುವ ನೌಕರರ ಕಂಪ್ಯೂಟರ್ ಜ್ಞಾನ, ವಿದ್ಯಾರ್ಹತೆ ಹೊಂದಿದ್ದರೆ ಅಂತಹವರಿಗೆ ಅವಕಾಶ ನೀಡಬೇಕು. ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ₹31 ಸಾವಿರ ಕನಿಷ್ಠ ವೇತನ ನೀಡಬೇಕು. ನೀರುಗಂಟಿಗಳಿಗೆ ಮಲ್ಟಿಪರ್ಪಸ್ ಎಂದಿರುವುದನ್ನು ಕೈಬಿಟ್ಟು, ನಿರ್ದಿಷ್ಟ ಕೆಲಸ ಮಾತ್ರ ನಿಗದಿಪಡಿಸಬೇಕು. ಗ್ರಾಪಂ ಸಿಬ್ಬಂದಿಗೆ ಇ-ಹಾಜರಾತಿ ಲೋಪದೋಷ ಪಂಚತಂತ್ರದಲ್ಲಿ ಸರಿಪಡಿಸುವರೆಗೆ ಸಿಬ್ಬಂದಿಗೆ ಪೂರ್ಣವೇತನ ಪಾವತಿಸಬೇಕು ಎಂದರು.

ರಾಜ್ಯದಲ್ಲಿ ಮೊದಲನೇ ಡೇಟಾ ಎಂಟ್ರಿ ಆಪರೇಟರ್‌ಗೆ, ಕ್ಲರ್ಕ್ ಹುದ್ದೆ ತೆರವಾದ ನಂತರ ಅನುಮೋದನೆ ನೀಡಬೇಕೆಂಬ ಷರತ್ತನ್ನು ಕೈಬಿಟ್ಟು ಅನುಮೋದನೆ ನೀಡಲು ಅವಕಾಶ ನೀಡಬೇಕು. ಸ್ವಚ್ಛವಾಹಿನಿ ಚಾಲಕರಾಗಿ ತರಬೇತಿ ಪಡೆದ ಎಲ್ಲ ಚಾಲಕರಿಗೆ ವಾಹನ ನೀಡಬೇಕು. ಸ್ವಚ್ಛ ವಾಹಿನಿ ವಾಹನಕ್ಕೆ ತಗಲುವ ವೆಚ್ಚ ಗ್ರಾಪಂಗಳಿಂದ ಭರಿಸಬೇಕು. ಡೀಸೆಲ್, ವಿಮೆ ಕಂತು, ರಿಪೇರಿ ಇತರೆ ಪಂಚಾಯಿತಿ ಭರಿಸಬೇಕೆಂಬುದೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಮಂಜುನಾಥ, ರಾಜೇಶ್ವರಿ, ಬಸವರಾಜ, ಮಂಜಪ್ಪ, ಓಂಕಾರಪ್ಪ ಇತರರು ಪ್ರತಿಭಟನೆಯಲ್ಲಿದ್ದರು.

- - -

* ಬೇಡಿಕೆಗಳೇನೇನು? - ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆ ನಿಗದಿಗೊಳಿಸಬೇಕು, ಪ್ರತಿ ಗ್ರಾಪಂಗೆ ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಸಬೇಕು

- ಗ್ರೇಡ್-1 ಕಾರ್ಯದರ್ಶಿ ಹುದ್ದೆಗೆ ಶೇ.100ರಷ್ಟು ಸ್ಥಾನಗಳನ್ನು ಗ್ರೇಡ್-2 ಕಾರ್ಯದರ್ಶಿಗೆ, ಶೇ.50ರಷ್ಟು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಶೇ.50ರಷ್ಟು ಸ್ಥಾನ ಬಡ್ತಿ ನೀಡಬೇಕು

- ಗ್ರೇಡ್-1 ಗ್ರಾಪಂ ಜನಸಂಖ್ಯೆಗೆ ಆದರಿಸಿ ಮೇಲ್ದರ್ಜೆಗೇರಿಸಬೇಕು. ಪಿಡಿಒ ಹುದ್ದೆಗೆ ಶೇ.60 ಸ್ಥಾನ ಗ್ರೇಡ್-1 ಕಾರ್ಯದರ್ಶಿಗೆ ನೀಡಬೇಕು.

- ಐಪಿಡಿ ಸಾಳಪ್ಪ ವರದಿಯಂತೆ ಸ್ವಚ್ಛತಾಗಾರರನ್ನು ನೇಮಿಸಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಿಸಬೇಕು.

- ತೀವ್ರ ಅನಾರೋಗ್ಯಕ್ಕೆ ತುತ್ತಾದ ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು.

- ಗ್ರೇಡ್-1 ಕಾರ್ಯದರ್ಶಿಗಳಿಂದ ಪಿಡಿಒ ಹುದ್ದೆಗೆ ರಾಜ್ಯಮಟ್ಟದ ಬದಲು ಜಿಲ್ಲಾಮಟ್ಟದಲ್ಲೇ ಮುಂಬಡ್ತಿ ನೀಡಲು ಕ್ರಮ ಕೈಗೊಳಳಬೇಕು.

- ಬಿಲ್ ಕಲೆಕ್ಟ್ ಮತ್ತು ಗುಮಾಸ್ತ ವೃಂದದಿಂದ ಗ್ರೇಡ್-2 ಕಾರ್ಯದರ್ಶಿ, ಲೆಕ್ಕ ಸಹಾಯಕ ಹುದ್ದೆಗೆ ನೇಮಕಗೊಂಡ ನೌಕರರಿಗೆ ಕೆಸಿಎಸ್‌ಆರ್ 325 ನಿಯಮಾನುಸಾರ ಹಿಂದಿನ ಸೇವೆ ಪರಿಗಣಿಸಿ ಹಳೆ ಪಿಂಚಣಿ ಜಾರಿ ಮಾಡಬೇಕು

- - - * (ಫೋಟೋ ಇದೆ.)-18ಕೆಡಿವಿಜಿ:

ಸರ್ಕಾರಿ ನೌಕರರೆಂದು ಘೋಷಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಗ್ರಾಪಂ ನೌಕರರು ದಾವಣಗೆರೆ ಜಿಪಂ ಕಚೇರಿ ಎದುರು ಪ್ರತಿಭಟಿಸಿದರು.