ಸಮ್ಮೇಳನದಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಭಾಗವಹಿಸಿ: ಡಾ.ಕೆ.ಅನ್ನದಾನಿ

| Published : Dec 19 2024, 12:31 AM IST

ಸಾರಾಂಶ

ಕನ್ನಡ ನಾಡಿನ ನೆಲ, ಜಲ, ಭಾಷೆ ಉಳಿವಿಗೆ ಕಂಕಣ ಬದ್ಧವಾಗಬೇಕಿದೆ. ಜಿಲ್ಲೆಯ ಹೊರಗಿನಿಂದ ಬರುವ ಪ್ರೀತಿಯ ಕನ್ನಡಿಗರಿಗೆ ಜಿಲ್ಲೆಯಾದ್ಯಂತ ಸಹಕಾರ ನೀಡಿ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಭಾಗವಹಿಸಿ ಜಿಲ್ಲೆಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಮಾಜಿ ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಸದಸ್ಯ ಡಾ.ಕೆ.ಅನ್ನದಾನಿ ಮನವಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನದ ಮೂಲಕ ಕನ್ನಡ ನಾಡಿನ ನೆಲ, ಜಲ, ಭಾಷೆ ಉಳಿವಿಗೆ ಕಂಕಣ ಬದ್ಧವಾಗಬೇಕಿದೆ. ಜಿಲ್ಲೆಯ ಹೊರಗಿನಿಂದ ಬರುವ ಪ್ರೀತಿಯ ಕನ್ನಡಿಗರಿಗೆ ಜಿಲ್ಲೆಯಾದ್ಯಂತ ಸಹಕಾರ ನೀಡಿ ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವಂತೆ ಕರೆ ನೀಡಿದರು.ಸಮ್ಮೇಳನದಲ್ಲಿ ರಾಜಕೀಯದಲ್ಲಿ ಸಾಹಿತ್ಯ, ಸಾಹಿತ್ಯದಲ್ಲಿ ರಾಜಕೀಯ ಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ನೀಡಿದ್ದು, ಸಮ್ಮೇಳನಕ್ಕೆ ಯಾವುದೆ ಚ್ಯುತಿ ಬಾರತದಂತೆ ಎಚ್ಚರ ವಹಿಸಲು ಸಹಕರಿಸಬೇಕು ಎಂದು ಕೋರಿದರು.ಸರ್ಕಾರ, ಸಾರ್ವಜನಿಕರ ತೆರಿಗೆ ಹಣ ವಿನಿಯೋಗ ಮಾಡಿ ಸಮ್ಮೇಳನ ನಡೆಸುತ್ತಿರುವುದು ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನಡೆಸಿಕೊಂಡು ಹೋಗಲು. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಆಗಮಿಸಿ ಸಾಹಿತ್ಯ ಪ್ರೇಮ ತೋರಬೇಕು. ಹೆಚ್ಚು ಹೆಚ್ಚು ಸಾಹಿತ್ಯ ಪುಸ್ತಕಗಳನ್ನು ಕೊಂಡು ಓದಬೇಕು ಎಂದು ವಿನಂತಿಸಿಕೊಂಡರು.ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ನನ್ನ ವಿರೋಧವಿದೆ. ಮಾಂಸಾಹಾರ ವಿತರಣೆಯಾದಲ್ಲಿ ಬೇರೆ ವಿಷಯಗಳಿಗೆ ಪ್ರಚೋದನೆಯ ಅವಕಾಶವಿರುವ ಆತಂಕವಿದೆ. ನಾನು ಹುಟ್ಟಿನಿಂದಲೇ ಮಾಂಸಹಾರಿಯಾಗಿದ್ದೇನೆ. ಆದರೆ, ಜಿಲ್ಲೆಯ ಸಂಸ್ಕೃತಿಯನ್ನು ದೇಶ, ವಿದೇಶಕ್ಕೆ ಪರಿಚಯಿಸುವ ಸಂದರ್ಭದಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯಲು ಅವಕಾಶ ನೀಡಬಾರದೆಂಬ ಉದ್ದೇಶದಿಂದ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆಗೆ ಒಮ್ಮತವಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು.----------