ಸಾರಾಂಶ
- ಎಪಿಎಂಸಿಯಲ್ಲಿ ರೈತರ ಅಹವಾಲು ಆಲಿಸಿ ಬಿಜೆಪಿ ಮುಖಂಡ ರೇಣುಕಾಚಾರ್ಯ ಆಗ್ರಹ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕುರ್ಚಿ ಕದನದಲ್ಲಿ ನಿರತವಾಗಿ ಈ ನಾಡಿನ ರೈತರು, ಬಡವರ ಹಿತವನ್ನು ಮರೆತಿದೆ. ಸರ್ಕಾರ ಮೆಕ್ಕೆಜೋಳ, ಭತ್ತದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಿ, ಶೀಘ್ರ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು. ಇಲ್ಲವಾದಲ್ಲಿ ಬಿಜೆಪಿ ನೇತೃತ್ವದಲ್ಲಿ ಪಕ್ಷದಿಂದ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ರೈತರೊಂದಿಗೆ ಉಗ್ರ ಹೋರಾಟ ಅನಿವಾರ್ಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಸಿದರು.ಸೋಮವಾರ ಹೊನ್ನಾಳಿ ಎಪಿಎಂಸಿ ಅವರಣದಲ್ಲಿ ಮೆಕ್ಕೆಜೋಳ ಬೆಳೆಗಳನ್ನು ಹಾಕಿಕೊಂಡಿದ್ದ ರೈತರನ್ನು ತಮ್ಮ ಬೆಂಬಲಿಗರೊಂದಿಗೆ ಭೇಟಿಯಾಗಿ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಬಿಜೆಪಿ ಎಂದಿಗೂ ರೈತರೊಂದಿಗೆ ಇರುತ್ತದೆ ಎಂದರು.
ಸಾಂತ್ವನ ಹೇಳದ ಸರ್ಕಾರ:ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ಹೋರಾಟ ನಡೆಸುತ್ತಿದ್ದ ರೈತರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಭಾಗಿಯಾಗಿದ್ದರು. ಅಲ್ಲಿನ ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡಿದರು, ಆದರೆ, ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ, ಬದಲಿಗೆ ದೇಶದ ರೈತರ ಹಿತಕಾಪಾಡುವ ಉದ್ದೇಶ. ರೈತ ಆತ್ಮಹತ್ಯೆ ಮಾಡಿಕೊಂಡರೆ ಅವರ ಕುಟುಂಬದ ಬಳಿ ಹೋಗಿ ಸಾಂತ್ವನ ಹಾಗೂ ಧೈರ್ಯ ಹೇಳುವ ಕೆಲಸ ಸರ್ಕಾರ ಮಾಡುತ್ತಿಲ್ಲ ಎಂದು ಟೀಕಿಸಿದರು.
ಎಕರೆಗೆ ₹30 ಸಾವಿರ ಖರ್ಚು:ನ್ಯಾಮತಿ ಮತ್ತು ಹೊನ್ನಾಳಿಯ ನೂರಾರು ಜನ ಮೆಕ್ಕೆಜೋಳ ಮತ್ತು ಭತ್ತ ಬೆಳೆದ ರೈತರು ಬಂದು ಕಷ್ಟಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಈಗಾಗಲೇ ರೈತರು 20ರಿಂದ 25 ದಿನಗಳ ಹಿಂದೆಯೇ ಮೆಕ್ಕೆಜೋಳ ಕಟಾವು ಮಾಡಿ ಮಾರಾಟ ಮಾಡಲು ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ಹಾಕಿಕೊಂಡಿದ್ದಾರೆ. ಮೆಕ್ಕೆಜೋಳ ಬೆಳೆಯಲು ರೈತರಿಗೆ ಎಕರೆಗೆ ಕನಿಷ್ಠ ₹25ರಿಂದ ₹30 ಸಾವಿರ ಖರ್ಚು ಬರುತ್ತಿದೆ. ಆದರೆ, ಇದೇ ಬೆಳೆ ಕೇವಲ ₹1500 ರಿಂದ ₹1800 ದರಕ್ಕೆ ಖರೀದಿಸಲಾಗುತ್ತಿದೆ. ಈ ಕಾರಣಕ್ಕೆ ಸರ್ಕಾರ ರೈತರ ನೆರವಿಗೆ ಬಂದು ಕನಿಷ್ಠ ₹2500 ದರ ಹಾಗೂ ಭತ್ತಕ್ಕೆ ₹3 ಸಾವಿರ ಬೆಂಬಲ ಬೆಲೆ ನಿಗದಿಗೊಳಿಸಿ ಖರೀದಿ ಕೇಂದ್ರಗಳ ಮೂಲಕ ಬೆಳೆಗಳನ್ನು ಖರೀದಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹನಗವಾಡಿಯ ರೈತ ಮಹೇಶ್ವರಪ್ಪ, ರವಿ ಬೇಲಿಮಲ್ಲೂರು ಗ್ರಾಮಗಳ ಮೆಕ್ಕೆಜೋಳ ಬೆಳೆದ ರೈತರು ತಮ್ಮ ಹಲವಾರು ಕಷ್ಟಗಳನ್ನು ರೇಣುಕಾಚಾರ್ಯ ಅವರ ಬಳಿ ಹೇಳಿಕೊಂಡು, ಪರಿಹಾರ ಕಲ್ಪಿಸಲು ಮನವಿ ಮಾಡಿದರು.ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನಾಗರಾಜ್, ನೆಲಹೊನ್ನೆ ಮಂಜುನಾಥ್, ಮಹೇಶ್ ಹುಡೇದ್, ಬಾಬು ಹೋಬಳದಾರ್, ಬಡಾವಣೆ ರಂಗಪ್ಪ, ಪೇಟೆ ಪ್ರಶಾಂತ, ಕೋನಾಯಕನಹಳ್ಳಿ ಮಂಜುನಾಥ್, ನವೀನ್ ಇಂಚರ, ಜುಟ್ಟು ರವಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ರೈತರು ಇದ್ದರು.
- - --10ಎಚ್.ಎಲ್.ಐ1.ಜೆಪಿಜಿ:
ಹೊನ್ನಾಳಿ ಎಪಿಎಂಸಿಗೆ ಸೋಮವಾರ ರೇಣುಕಾಚಾರ್ಯ ಬೆಂಬಲಿಗರೊಂದಿಗೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಹಾಕಿಕೊಂಡಿದ್ದ ರೈತರನ್ನು ಭೇಟಿಯಾಗಿ ಅಹವಾಲುಗಳ ಸ್ವೀಕರಿಸಿದರು.;Resize=(128,128))
;Resize=(128,128))
;Resize=(128,128))