ಹಾವೇರಿ: ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಎಂದು ಘೋಷಿಸಬೇಕು. ಬೆಳೆ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ಗೊಂದಲ ನಿವಾರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ರೈತರ ಟ್ರ್ಯಾಕ್ಟರ್ ರ‍್ಯಾಲಿ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತವನ್ನು ತಲುಪಿತು. ಈ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ರೈತರು, ಹಸಿರು ಶಾಲು ಬೀಸುವ ಮೂಲಕ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಹಾವೇರಿ ಜಿಲ್ಲೆ ಈ ವರ್ಷ ಬರಗಾಲಕ್ಕೆ ತುತ್ತಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮುಂಗಾರು ಮಳೆಯ ವೈಫಲ್ಯದಿಂದ ಎರಡೆರಡು ಬಾರಿ ಬಿತ್ತನೆ ಮಾಡಿ ಸಾಲಗಾರರಾಗಿದ್ದಾರೆ. ಸರಾಸರಿ ಮಳೆ ಶೇ. 56ರಷ್ಟು ಕಡಿಮೆಯಾಗಿದೆ. ಕೆರೆ-ಕಟ್ಟೆಗಳಲ್ಲಿ ನೀರಿಲ್ಲ, ಕೊಳವೆಬಾವಿಗಳ ಅಂತರ್ಜಲ ಬತ್ತಿಹೋಗಿದೆ. ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಈ ಹಿನ್ನೆಲೆಯಲ್ಲಿ ಸರ್ಕಾರ ಹಾವೇರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ, ಪ್ರತಿ ಎಕರೆಗೆ 30 ಸಾವಿರ ರು. ಪರಿಹಾರ ನೀಡಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಬೇಕು. ಕೃಷಿಯನ್ನೇ ನಂಬಿದ್ದ ರೈತರು, ಎರಡೆರಡು ಬಾರಿ ಬಿತ್ತನೆ ಮಾಡಿದರೂ ಪ್ರಯೋಜನವಾಗದೆ, ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬ್ಯಾಂಕಿನವರು ನೋಟಿಸ್ ಕೊಟ್ಟು ಹೆದರಿಸುತ್ತಾರೆ. ನೋಟಿಸ್ ಕೊಟ್ಟರೆ ಬ್ಯಾಂಕನ್ನೇ ಲಾಕ್‌ಔಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆವಿಮೆ ಕಂತು ತುಂಬುವ ದಿನಗಳು ಮುಗಿಯುತ್ತಿದ್ದರೂ, ಅಧಿಕಾರಿಗಳು ಸ್ವಯಂ ಘೋಷಣಾ ಪತ್ರದ ನಿಯಮ ಸಡಿಲಿಕೆ ಮಾಡುತ್ತಿಲ್ಲ. ಈ ಕೂಡಲೇ ನಿಯಮ ಸಡಿಕೆ ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ಮನವಿ ಸ್ವೀಕರಿಸಿದರು. ಜಂಟಿ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ ಕೆ., ತೋಟಗಾರಿಕೆ ಇಲಾಖೆಯ ಡಿಡಿ ಸಂತೋಷ, ಬಸವರಾಜ, ಹೆಸ್ಕಾಂ ಎಂಜಿನಿಯರ್ ಕಳ್ಳಿಮನಿ, ಸಿ.ಬಿ. ಹೊಸಮನಿ, ನೀರಾವರಿ ಇಲಾಖೆ ಅಧಿಕಾರಿಗಳು, ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು. ಹೆಸ್ಕಾಂ ಎಂಜಿನಿಯರ್ ಅವರು, ಏಳು ತಾಸು ವಿದ್ಯುತ್ ಪೂರೈಸಲಾಗುತ್ತಿದೆ. ಅಲ್ಲಲ್ಲಿ ಏನಾದ್ರೂ 6 ತಾಸು ಪೂರೈಕೆಯಾಗುತ್ತಿದ್ದರೆ, ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗಂಗಣ್ಣ ಎಲಿ, ರುದ್ರಗೌಡ ಕಾಡನಗೌಡ್ರ, ಗುಡ್ಡನಗೌಡ ಪ್ಯಾಟಿಗೌಡ್ರ, ದಿಳ್ಳೆಪ್ಪ ಮಣ್ಣೂರ, ಶಂಕರಗೌಡ ಶಿರಗಂಬಿ, ಸುರೇಶ ಛಲವಾದಿ, ಮರಿಗೌಡ ಪಾಟೀಲ, ಚನ್ನಪ್ಪ ಮರಡೂರ ಸೇರಿದಂತೆ ಅನೇಕರು ಮಾತನಾಡಿದರು. ಉಪಾಧ್ಯಕ್ಷ ಎಚ್.ಎಚ್ ಮುಲ್ಲಾ, ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ರಾಜು ತರ್ಲಘಟ್ಟ, ಶಿವಯೋಗಿ ಹೊಸಗೌಡ್ರ, ಭುವನೇಶ್ವರ ಶಿಡ್ಲಾಪುರ, ಅಡಿವೆಪ್ಪ ಆಲದಕಟ್ಟಿö, ಬಸನಗೌಡ ಗಂಗಪ್ಪನವರ, ಜಾನ್‌ಪುನೀತ್ ಸೇರಿದಂತೆ ಅನೇಕ ಮುಖಂಡರು, ರೈತರು ಪಾಲ್ಗೊಂಡಿದ್ದರು.

ಆರೋಪ ಪ್ರತ್ಯಾರೋಪ ಸಲ್ಲದು..

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎರಡು ಸೇರಿ ಬರಗಾಲ ಘೋಷಣೆ ಮಾಡಬೇಕು. ಪರಸ್ಪರ ಆರೋಪ ಪ್ರತ್ಯಾರೋಪ ಮಾಡುವುದನ್ನು ಕೈಬಿಡಬೇಕು. ಸಾಲಮನ್ನಾ ರಾಜ್ಯ ಸರ್ಕಾರದ ಹಂತದಲ್ಲಿದ್ದು, ಅದನ್ನು ಕೂಡಲೇ ಜಾರಿ ಮಾಡಬೇಕು. ವಿಮೆ ಕಂತು ತುಂಬಲು ನಿಯಮ ಸಡಿಲಿಕೆ ಮಾಡಬೇಕು. ನಾಲ್ಕೈದು ವರ್ಷ ತುಂಬದೇ ಇರುವವರು, ಕಟ್ ಬಾಕಿ ಇರುವವರು ಗ್ರಾಮ ಒನ್ ಕೇಂದ್ರ, ಚಾಲ್ತಿ ಇರುವವರು ಬ್ಯಾಂಕ್ ಒಳಗೆ ತುಂಬಲು ಅನುಕೂಲ ಮಾಡಿಕೊಡಬೇಕೆಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

ರೈತ ಭೂಮಿ ನಂಬಿ ಜೀವನ ಮಾಡುತ್ತಿದ್ದಾರೆ. ರೈತರು ಭೂಮಿ ಮಾರಾಟಕ್ಕೆ ಇಟ್ಟಿಲ್ಲ. ಯೂರಿಯಾ ಗೊಬ್ಬರಕ್ಕೆ ಪಾಳೆ ಹಚ್ಚುತ್ತಿದ್ದಾರೆ. ಎಫ್‌ಐಡಿ ಅವೈಜ್ಞಾನಿಕವಾಗಿದೆ. ರೈತ ಕಿಸಾನ್ ಆ್ಯಪ್‌ನ್ನು ರದ್ದು ಮಾಡಬೇಕು. ರೈತರ ಸಾಲಮನ್ನಾ ಮಾಡಬೇಕು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸ್ಥಿತಿ ತಂದುಕೊಳ್ಳಬೇಡಿ ಎಂದು ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಹೇಳಿದರು.