ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿ ಜಿಲ್ಲೆಯನ್ನು ಹಸಿಬರ ಪೀಡಿತ ಜಿಲ್ಲೆಯೆಂದು ಘೋಷಿಸಲು ಒತ್ತಾಯಿಸಿ ಹಾಗೂ ಪ್ರವಾಹದಿಂದ ಆಗಿರುವ ಹಾನಿಗೆ ಕೂಡಲೇ ಪರಿಹಾರ ನೀಡಬೇಕೆಂದು, ಪರಿಹಾರ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಜರುಗಿಸಲು ಆಗ್ರಹಿಸಿ ಎಸ್‌ಯುಸಿಐ ಹಾಗೂ ಎಐಕೆಕೆಎಂಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಡಿಸಿ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.ಉಜನಿ, ಸೀನಾ, ಬೋರಿ ಮತ್ತು ವೀರ್ ಡ್ಯಾಂಗಳಿಂದ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಿಗೆ ನೀರು ಬಿಟ್ಟಿರುವುದೇ ಈ ಪ್ರವಾಹಕ್ಕೆ ಕಾರಣ. ಈ ಪ್ರವಾಹವನ್ನು ತಡೆಗಟ್ಟುವಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದ್ದು, ಇದು ಪ್ರಕೃತಿ ವಿಕೋಪವಾಗಿರದೆ ಮಾನವ ನಿರ್ಮಿತವಾಗಿದೆ ಎಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಹಾಗೂ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಮುಖಂಡರು ದೂರಿದರು.
ಒಂದು ತಿಂಗಳಿಂದ ಸತತವಾಗಿ ಮಳೆಯಾಗಿರುವುದರಿಂದ ಜಿಲ್ಲೆಯಲ್ಲಿ ಹಸಿಬರ ಬಂದು ಸಾಕಷ್ಟು ಬೆಳೆನಷ್ಟವಾಗಿದೆ. ಅದರೊಂದಿಗೆ ಈ ಸಲ ಅತಿ ಮಳೆಯಾಗಿ ಪ್ರವಾಹ ಉಂಟಾಗಬಹುದು ಎಂದು ಹವಾಮಾನ ಇಲಾಖೆಯಿಂದ ಮುನ್ನೆಚ್ಚರಿಕೆ ನೀಡಿತ್ತು. ಆದರೂ ಸಹ ಎರಡೂ ರಾಜ್ಯಗಳ ಸರ್ಕಾರಗಳು ಪರಸ್ಪರವಾಗಿ ಸಮಾಲೋಚನೆ ಮಾಡದೇ ಇರುವುದು ವಿಪರ್ಯಾಸ.ದಿಢೀರನೆ ಡ್ಯಾಂ ಗೇಟ್‍ನ್ನು ತೆರೆದಿರುವುದರಿಂದ ಬಂದಿರುವ ಈ ಪ್ರವಾಹವು ಜಿಲ್ಲೆಯ ಅಫಜಲಪುರ, ಜೇವರ್ಗಿ, ಕಲಬುರಗಿ, ಚಿತ್ತಾಪುರ, ಚಿಂಚೋಳಿ, ಸೇಡಂ, ಕಾಳಗಿ ಮತ್ತು ಶಹಾಬಾದ್ ಹೀಗೆ 8 ತಾಲೂಕಿನ ಸುಮಾರು 85ಕ್ಕೂ ಹೆಚ್ಚು ಗ್ರಾಮಗಳು ಗಂಭೀರ ಸ್ಥಿತಿಯನ್ನು ಎದುರಿಸುತ್ತಿವೆ ಎಂದು ನೆರೆ ಪೀಡಿತ ಊರುಗಳ ಗೋಳನ್ನು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಸಂತ್ರಸ್ಥರಿಗೆ ಕೇವಲ ತಾತ್ಕಾಲಿಕ ಪರಿಹಾರವಾಗುತ್ತದೆಯೇ ವಿನಃ ಶಾಶ್ವತ ಪರಿಹಾರವಾಗದು. ಆದ್ದರಿಂದ ಮುಂದಿನ ದಿನಗಳಲ್ಲಿಯಾದರೂ ಇಂತಹ ದುರಂತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ನೀರನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಕುರಿತು ಎರಡೂ ರಾಜ್ಯಗಳ ಸರ್ಕಾರಗಳು ಅತ್ಯಂತ ಜವಾಬ್ದಾರಿಯಿಂದ ನಿರ್ವಹಣೆ ಮಾಡಬೇಕು ಎಂದು ಉಭಯ ಸಂಘಟನೆಗಳು ಆಗ್ರಹಿಸಿವೆ.ಕಲಬುರಗಿ ಜಿಲ್ಲೆಯ ರೈತರು ಹೊಲಗಳಲ್ಲಿ ಎರೆಡೆರಡು ಬಾರಿ ಬೆಳೆ ಬಿತ್ತಿದ್ದು, ಮಳೆಯ ಹಾಗೂ ಪ್ರವಾಹದ ಕಾರಣದಿಂದ ಸಂಪೂರ್ಣವಾಗಿ ಬೆಳೆ ನಷ್ಟವಾಗಿದೆ. ಇದರಿಂದ ಸಾಲವನ್ನು ಮಾಡಿಕೊಂಡು ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆಗಳಲ್ಲಿಯೇ ಕಾಲಹರಣ ಮಾಡದೆ ಬೇಗ ಪರಿಹಾರ ನೀಡುವ ಕೆಲಸವಾಗಬೇಕಿದೆ ಎಂದರು.
ಉಭಯ ಸಂಘಟನೆಗಳ ಪರವಾಗಿ ಗಣಪರತಾವ್ ಕೆ. ಮಾನೆ, ಆರ್. ಕೆ. ವೀರಭದ್ರಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.