ಸಾರಾಂಶ
ಬ್ಯಾಡಗಿ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಆವಕಿನಲ್ಲಿ ಇಳಿಮುಖವಾಗಿದ್ದು, ಗುರುವಾರ ಕೇವಲ 1.37 ಲಕ್ಷ ಮೆಣಸಿನಕಾಯಿ ಚೀಲ ಆವಕವಾಗಿದ್ದು, ಎಂದಿನಂತೆ ದರದಲ್ಲಿ ಸ್ಥಿರತೆ ಮುಂದುವರಿದಿದೆ.
ಬ್ಯಾಡಗಿ: ಸ್ಥಳೀಯ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಆವಕಿನಲ್ಲಿ ಇಳಿಮುಖವಾಗಿದ್ದು, ಗುರುವಾರ ಕೇವಲ 1.37 ಲಕ್ಷ ಮೆಣಸಿನಕಾಯಿ ಚೀಲ ಆವಕವಾಗಿದ್ದು, ಎಂದಿನಂತೆ ದರದಲ್ಲಿ ಸ್ಥಿರತೆ ಮುಂದುವರಿದಿದೆ.
ಕಳೆದೆರಡು ತಿಂಗಳಿಂದ 2 ಲಕ್ಷಕ್ಕೂ ಅಧಿಕ ಚೀಲ ಮೆಣಸಿನಕಾಯಿ ಆವಕವಾಗುತ್ತಿತ್ತು. ಗುರುವಾರ 1,37,863 ಚೀಲ ಮೆಣಸಿನಕಾಯಿ ಮಾರಾಟಕ್ಕೆ ಲಭ್ಯವಿದ್ದವು. ಮೆಣಸಿನಕಾಯಿ ಚೀಲದೊಂದಿಗೆ ಆಗಮಿಸಿದ್ದ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ರೈತರು ಯಾವುದೇ ತಕರಾರಿಲ್ಲದೇ ತಮ್ಮೆಲ್ಲ ಮೆಣಸಿನಕಾಯಿ ವಹಿವಾಟುಗಳನ್ನು ಪೂರ್ಣಗೊಳಿಸಿದರು.ಕೋಲ್ಡ್ ಸ್ಟೋರೇಜ್ ಸೇರಿದ ಚೀಲಗಳು: ಇಲ್ಲಿಯವರೆಗೂ ಬೆಳೆದಂತಹ ಬಹುತೇಕ ಮೆಣಸಿನಕಾಯಿಯನ್ನು ಕೆಲವು ರೈತರು ಸೇರಿದಂತೆ ವರ್ತಕರು ಕೋಲ್ಡ್ ಸ್ಟೋರೇಜ್‌ನಲ್ಲಿ ಭದ್ರಗೊಳಿಸಿದ್ದಾರೆ. ಅಂದಾಜು 30 ಲಕ್ಷಕ್ಕೂ ಅಧಿಕ ಚೀಲಗಳು ಬ್ಯಾಡಗಿ ಪಟ್ಟಣದ ಸುತ್ತಮುತ್ತಲಿರುವ ಕೋಲ್ಡ್ ಸ್ಟೋರೇಜ್‌ಗಳಲ್ಲೇ ದಾಸ್ತಾನಾಗಿರುವುದಾಗಿ ತಿಳಿದು ಬಂದಿದೆ.
ಯುಗಾದಿ ಹಬ್ಬ ರೈತರ ಆರ್ಥಿಕ ವರ್ಷದ ಕೊನೆಯಾಗಿದ್ದು, ಕೈಯಲ್ಲಿದ್ದ ಬೆಳೆಯನ್ನು ಮಾರಾಟ ಮಾಡುವುದು ವಾಡಿಕೆ. ಹೀಗಾಗಿ ಬಹುತೇಕ ರೈತರು ತಾವು ಬೆಳೆದ ಮೆಣಸಿನಕಾಯಿಯನ್ನು ಮಾರಾಟ ಮಾಡಿದ್ದು, ಹಿಂದಿನಂತೆ ಇನ್ನೇನು ಮಾರುಕಟ್ಟೆಗೆ ಆವಕ ಹೆಚ್ಚಾಗುವ ಯಾವುದೇ ಲಕ್ಷಣಗಳಿಲ್ಲ ಎಂದು ಮಾರುಕಟ್ಟೆ ತಜ್ಞರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಮಾರುಕಟ್ಟೆಯಲ್ಲಿ ಮಾ. 11ರಂದು ಬೆಲೆ ಕುಸಿತಗೊಂಡಿದೆ ಎಂದು ಆರೋಪಿಸಿ ಕಿಡಿಗೇಡಿಗಳು ಎಪಿಎಂಸಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಭದ್ರತೆ ಮುಂದುವರಿದಿದೆ.