ಸಾರಾಂಶ
ಗಿರೀಶ್ ಗರಗ
ಕನ್ನಡಪ್ರಭ ವಾರ್ತೆ ಬೆಂಗಳೂರುಅರಣ್ಯ ಉತ್ಪನ್ನ ಸೇರಿ ಮತ್ತಿತರ ಮೂಲಗಳಿಂದ ಅರಣ್ಯ ಇಲಾಖೆಗೆ ಬರುತ್ತಿರುವ ಆದಾಯ ಹಿಂದಿನ ವರ್ಷಕ್ಕೆ ಹೋಲಿಸಿದರೆ 2024-25ನೇ ಸಾಲಿನಲ್ಲಿ ಭಾರೀ ಕುಸಿತ ಕಂಡಿದೆ. ಉಳಿದೆಲ್ಲ ಉತ್ಪನ್ನಗಳಿಗಿಂತ ಇ-ಹರಾಜು ಮೂಲಕ ನಾಟಾ ಮತ್ತು ಉರುವಲು (ಕಟ್ಟಿಗೆ) ಮಾರಾಟದಿಂದ 2023-24 ಸಾಲಿಗಿಂತ ಕಡಿಮೆ ಆದಾಯ ಬಂದಿದೆ.
6 ವಿಧದಲ್ಲಿ ಆದಾಯ:ಅರಣ್ಯ ಇಲಾಖೆ ಅರಣ್ಯ ಉತ್ಪನ್ನಗಳಲ್ಲಿ ಗುರುತಿಸಿರುವಂತೆ ಆರು ವಿಧದಲ್ಲಿ ಆದಾಯ ಗಳಿಸುತ್ತಿದೆ. ಶ್ರೀಗಂಧ, ನಾಟಾ, ಉರುವಲು, ಬಿದಿರು, ಬೆತ್ತ ಹಾಗೂ ಅರಣ್ಯ ಪ್ರದೇಶದಲ್ಲಿ ಬೆಳೆಯುವ ಗೋಡಂಬಿ, ಹುಣಸೆ, ಜೇನುತುಪ್ಪ ಹೀಗೆ ಇನ್ನಿತರ ಚೌಬಿನೇತರ ಅರಣ್ಯ ಉತ್ಪನ್ನಗಳಿಂದ ಆದಾಯ ಪಡೆಯುತ್ತಿದೆ. ನಾಟಾ, ಉರುವಲುಗಳನ್ನು ಹೊರತುಪಡಿಸಿದರೆ ಉಳಿದ ಮೂಲಗಳಿಂದ ಬರುತ್ತಿರುವ ಆದಾಯ ತೀರ ಕಡಿಮೆಯಿದೆ.
ನಾಟಾ, ಉರುವಲುಗಳನ್ನು ಇ-ಹರಾಜು ಮಾಡುವ ಮೂಲಕ ಉಳಿದೆಲ್ಲ ಮೂಲಗಳಿಗಿಂತ ಹೆಚ್ಚಿನ ಆದಾಯ ಗಳಿಸಲಾಗುತ್ತಿದೆ. ಈ ಅರಣ್ಯ ಉತ್ಪನ್ನಗಳ ಪೈಕಿ 2024-25ನೇ ಸಾಲಿನಲ್ಲಿ ನಾಟಾ, ಉರುವಲುಗಳ ಇ-ಹರಾಜು ಹೊರತುಪಡಿಸಿ 12.79 ಕೋಟಿ ರು. ಆದಾಯ ಪಡೆದಿದೆ. 2023-24ರಲ್ಲಿ ನಾಟಾ, ಉರುವಲುಗಳ ಇ-ಹರಾಜು ಹೊರತುಪಡಿಸಿ 10.02 ಕೋಟಿ ರು. ಆದಾಯ ಬಂದಿದೆ. ಇದನ್ನು ಗಮನಿಸಿದರೆ ಇ-ಹರಾಜು ಬಿಟ್ಟರೆ 2024-25ರಲ್ಲಿ ಉಳಿದ ಮೂಲಗಳಿಂದ ಹೆಚ್ಚಿನ ಆದಾಯ ಬಂದಿದೆ.ಇ-ಹರಾಜಿನಲ್ಲಿ ಆದಾಯ ಕುಸಿತ:
2023-24ನೇ ಸಾಲಿನಲ್ಲಿ 5,582 ಘನ ಮೀ. ಬೀಟೆ, 5,987 ಘನ ಮೀ. ತೇಗ, 52,915 ಘನ ಮೀ. ಇತರ ನಾಟಾ ಹಾಗೂ 2.54 ಲಕ್ಷ ಘನ ಮೀ. ಉರುವಲುಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲಾಗಿದೆ. ಹೀಗೆ ಮಾರಾಟ ಮಾಡಲಾದ ನಾಟಾದಿಂದ 185.81 ಕೋಟಿ ರು. ಹಾಗೂ ಉರುವಲುಗಳಿಂದ 67.29 ಕೋಟಿ ರು. ಸೇರಿ ಒಟ್ಟು 252 ಕೋಟಿ ರು. ಆದಾಯ ಬಂದಿದೆ.2024-25ರಲ್ಲಿ 3,667 ಘನ ಮೀ. ಬೀಟೆ, 3,832 ತೇಗ, 48,061 ಘನ ಮೀ. ಇತರ ನಾಟಾ ಹಾಗೂ 1.96 ಲಕ್ಷ ಘನ ಮೀ. ಉರುವಲುಗಳನ್ನು ಇ-ಹರಾಜಿನ ಮೂಲಕ ಮಾರಲಾಗಿದೆ. ಅದರಿಂದ ನಾಟಾ ಮೂಲಕ 152.06 ಕೋಟಿ ರು. ಹಾಗೂ ಉರುವಲಿನಿಂದ 51.57 ಕೋಟಿ ರು. ಸೇರಿ ಒಟ್ಟು 203.64 ಕೋಟಿ ರು. ಆದಾಯ ಗಳಿಸಲಾಗಿದೆ. ಇದನ್ನು ಗಮನಿಸಿದರೆ ಹಿಂದಿನ ವರ್ಷಕ್ಕಿಂತ 49 ಕೋಟಿ ರು. ಆದಾಯ ಕಡಿಮೆಯಾಗುವಂತಾಗಿದೆ.
ಅರಣ್ಯ ಇಲಾಖೆ ಅರಣ್ಯ ಪ್ರದೇಶ ಹೆಚ್ಚಿಸುವುದು, ವನ್ಯಜೀವಿಗಳ ಸಂರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ತಡೆ, ನಗರ ಪ್ರದೇಶಗಳಲ್ಲಿ ಹಸಿರೀಕರಣ ಹೀಗೆ ಹಲವು ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತದೆ. ಅದಕ್ಕೆ ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತದೆ. ಪರಿಹಾರ ಅರಣ್ಯೀಕರಣ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (ಕಾಂಪಾ)ದಿಂದಲೂ ಅನುದಾನ ದೊರೆಯುತ್ತಿದೆ. ಜತೆಗೆ ಅರಣ್ಯ ಉತ್ಪನ್ನಗಳ ಮಾರಾಟದಿಂದಲೂ ಆದಾಯ ಗಳಿಸುತ್ತಿದೆ. ಆದರೆ, 2023-24ಕ್ಕೆ ಹೋಲಿಸಿದರೆ 2024-25ರಲ್ಲಿ ಉಳಿದೆಲ್ಲ ಆದಾಯ ಅಥವಾ ಅನುದಾನಕ್ಕಿಂತ ಅರಣ್ಯ ಉತ್ಪನ್ನಗಳ ಮಾರಾಟದಿಂದ ಗಳಿಸಲಾದ ಆದಾಯ ಕುಸಿತ ಕಂಡಿದೆ.