- ಈ ವರ್ಷ ಮುಚ್ಚಿದ 4 ಶಾಲೆ । 3 ಶಾಲೆ ಗಳಲ್ಲಿ 5ಕ್ಕಿಂತ ಕಡಿಮೆ ಸಂಖ್ಯೆ। 11 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10 ಕ್ಕಿಂತ ಕಡಿಮೆ
ಯಡಗೆರೆ ಮಂಜುನಾಥ್ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಂತರ ರು. ಖರ್ಚು ಮಾಡುತ್ತಿರುವ ನಡುವೆಯೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸಿದೆ. ಮಕ್ಕಳ ಶೂನ್ಯ ದಾಖಲಾತಿಯಿಂದ ತಾಲೂಕಿನಲ್ಲಿ ಈ ವರ್ಷ ನಾಲ್ಕು ಸರ್ಕಾರಿ ಶಾಲೆಗಳು ಮುಚ್ಚಿವೆ.ತಾಲೂಕಿನಲ್ಲಿ 35 ಕಿರಿಯ ಪ್ರಾಥಮಿಕ ಶಾಲೆ, 41 ಹಿರಿಯ ಪ್ರಾಥಮಿಕ ಶಾಲೆ ಹಾಗೂ 8 ಪ್ರೌಢ ಶಾಲೆಗಳಿವೆ. ಕಳೆದ ವರ್ಷ ಬಡಗಬೈಲು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೆರೆಮನೆ ಕಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿದೆ. ಈ ವರ್ಷ ಶೂನ್ಯ ಮಕ್ಕಳ ಸಂಖ್ಯೆಯಿಂದ ನೇಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಳೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಮ್ಮನೆ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬಾಳೆಹಿತ್ತಲು ಹಿರಿಯ ಪ್ರಾಥಮಿಕ ಶಾಲೆ ಮುಚ್ಚಿದೆ.
3 ಸರ್ಕಾರಿ ಶಾಲೆಯಲ್ಲಿ 5 ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಇದೆ. 11 ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ ಇದೆ. ಅಂದರೆ 14 ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳ ಸಂಖ್ಯೆ ಕಡಿಮೆ ಯಾಗಿ ಶಾಲೆಗಳು ಮುಚ್ಚುವ ಅಪಾಯ ಎದುರಾಗಿದೆ.
ಶಾಲೆ ಮುಚ್ಚಲು ಪ್ರಮುಖ ಕಾರಣ: ಪಟ್ಟಣದಿಂದ ದೂರವಿರುವ ಗ್ರಾಮೀಣ ಪ್ರದೇಶದ ಶಾಲೆಗಳು. ಪೋಷಕರು ಹಾಗೂ ಮಕ್ಕಳಿಗೆ ಬೇಡವಾಗಿದೆ. ಒಂದು ಕಡೆ ನಗರದ ವ್ಯಾಮೋಹ, ಇನ್ನೊಂದು ಕಡೆ ನಗರದ ಶಾಲೆಗಳಲ್ಲಿ ಕಲಿತರೆ ಮಾತ್ರ ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯುತ್ತಾರೆ ಎಂಬ ಭ್ರಮೆಗೆ ಬಿದ್ದಿರುವುದು ಕಾರಣ.
ಇನ್ನೊಂದು ಪ್ರಮುಖ ಕಾರಣ ಕಂಡು ಬರುತ್ತಿರುವುದು ಗ್ರಾಮೀಣ ಭಾಗದ ಮಕ್ಕಳು ದೊಡ್ಡವರಾಗಿ ನಗರದ ಕಡೆ ಉದ್ಯೋಗಕ್ಕೆ ಹೋಗಿದ್ದು ಹಳ್ಳಿಗಳಲ್ಲಿ ಕೇವಲ ವೃದ್ಧ ತಂದೆ, ತಾಯಿಗಳು ಮಾತ್ರ ಇದ್ದಾರೆ. ನಗರಕ್ಕೆ ಹೋದ ಮಕ್ಕಳು ಕೃಷಿಗೆ ವಾಪಾಸು ಬರುತ್ತಿಲ್ಲ. ಕೂಲಿ ಕಾರ್ಮಿಕರ ಮಕ್ಕಳು ಮಾತ್ರ ಹಳ್ಳಿಗಳಲ್ಲಿ ಇದ್ದಾರೆ.ಪೋಷಕರು ಹಾಗೂ ಮಕ್ಕಳಿಗೆ ಇಂಗ್ಲೀಷ್ ವ್ಯಾಮೋಹ ಬಹಳವಾಗೇ ಇದೆ. ತಾವು ಇಂಗ್ಲೀಷ್ ಶಿಕ್ಷಣ ಪಡೆಯದೆ ಕೇವಲ ಕೂಲಿ ಮಾಡುತ್ತಿದ್ದೇವೆ. ತಮ್ಮ ಮಕ್ಕಳು ಇಂಗ್ಲೀಷ್ ಕಲಿತು ದೊಡ್ಡ ಸರ್ಕಾರಿ ನೌಕರರಾಗಬೇಕು. ಗ್ರಾಮೀಣ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇರುವುದರಿಂದ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಗುವುದಿಲ್ಲ ಎಂಬ ಆತಂಕವೂ ಸೇರಿ ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದಾರೆ.
ಎನ್.ಆರ್.ಪುರ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 1 ರಿಂದ 7 ನೇ ತರಗತಿವರೆಗೆ 300 ಮಕ್ಕಳಿದ್ದಾರೆ. ಕೊಠಡಿಯೇ ಸಾಕಾಗುತ್ತಿಲ್ಲ. ಎಲ್.ಕೆ.ಜಿ ಹಾಗೂ ಯು.ಕೆ.ಜಿಗೆ 100 ಮಕ್ಕಳು ಬರುತ್ತಿದ್ದು ಒಟ್ಟು 400 ಮಕ್ಕಳು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನು ಗಮನಿಸಿದರೆ ಪೋಷಕರಿಗೆ ಗ್ರಾಮೀಣ ಭಾಗದ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಲು ಇಷ್ಟ ಪಡದೆ ಪಟ್ಟಣಕ್ಕೆ ಕಳಿಸುತ್ತಿದ್ದಾರೆ.-- ಕೋಟ್--- ಸರ್ಕಾರವು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೂ ಡಿಜಿಟಲ್ ಶಿಕ್ಷಣ ಹಾಗೂ ಅಗತ್ಯವಿರುವ ಶಿಕ್ಷಕರನ್ನು ನೇಮಿಸಬೇಕು. ಪೋಷಕರು ಇಂಗ್ಲೀಷ್ ವ್ಯಾಮೋಹದಿಂದ ನಗರಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದಾರೆ.ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ.ದೇಶದ ಅತಿ ಹೆಚ್ಚು ಸಾಧಕರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದಾರೆ.
ಕಣಿವೆ ವಿನಯ್, ಅಧ್ಯಕ್ಷ, ನಾಗಚಂದ್ರ ಪ್ರತಿಷ್ಠಾನ ಕಣಿವೆ,ನರಸಿಂಹರಾಜಪುರ ತಾಲೂಕು
--ಕೋಟ್ -ತಾಲೂಕಿನಲ್ಲಿ 84 ಶಾಲೆಗಳು ಇತ್ತು. ಈ ವರ್ಷ ಶೂನ್ಯ ದಾಖಲಾತಿಯಿಂದ 4 ಶಾಲೆಗಳು ಮುಚ್ಚಿದೆ. ಎನ್.ಆರ್.ಪುರ ಕೆಪಿಎಸ್ ಹಾಗೂ ಮುತ್ತಿನಕೊಪ್ಪ ಕೆಪಿಎಸ್ ಹಾಗೂ ಮಾಗುಂಡಿ ಪಿ.ಎಂ.ಶ್ರೀ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ದ್ವಿಭಾಷ ಮಾದ್ಯಮ ಇದೆ. ಪ್ರತಿ ತರಗತಿಗೆ ಒಬ್ಬರು ಶಿಕ್ಷಕರಿದ್ದಾರೆ.
ಶಬಾನಾ ಅಂಜುಮ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನರಸಿಂಹರಾಜಪುರ