ಜಿಲ್ಲೆಯಲ್ಲಿ ಎಚ್ಐವಿ ಸೋಂಕಿನ ಪ್ರಮಾಣ ಇಳಿಕೆ

| Published : Dec 02 2024, 01:16 AM IST

ಸಾರಾಂಶ

Decrease in HIV infection rate in the district

-ತಪ್ಪು ಕಲ್ಪನೆಯಿಂದ ದೂರ, ಜನಜಾಗೃತಿ ಪರಿಣಾಮ । ರಾಜ್ಯದಲ್ಲಿ ಎಚ್‌ಐವಿಯಲ್ಲಿ ಪ್ರಮಾಣದಲ್ಲಿ ರಾಯಚೂರು 9ನೇ ಸ್ಥಾನ

-----

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

“ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ " ನನ್ನ ಆರೋಗ್ಯ ನನ್ನಹಕ್ಕು ಇದು ಈ ವರ್ಷದ ವಿಶ್ವ ಎಚ್‌ಐವಿ ದಿನ ಆಚರಣೆಯ ಘೋಷ ವಾಕ್ಯವಾಗಿದೆ. ಈ ಸಮಯದಲ್ಲಿ ಜಿಲ್ಲೆಯಲ್ಲಿ ಕಳೆದ ದಶಕದಲ್ಲಿ ಸೋಂಕಿನ ಪ್ರಮಾಣದಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಾ ಬರಲಾಗುತ್ತಿದೆ.

ಸಮಾಜದಲ್ಲಿ ಮೊದಲಿಗೆ ಎಚ್‌ಐವಿ ಏಡ್ಸ್ ಎಂದರೆ ಅಪನಂಬಿಕೆ, ಆತಂಕದ ಜೊತೆಗೆ ಅದರ ಕುರಿತು ಮಾತನಾಡುವುದೇ ಮುಜುಗರ ಎನ್ನುವ ಪರಿಸ್ಥಿತಿಯು ದಿನೇ ದಿನೆ ಕರುಗುತ್ತಿದ್ದು, ಸರ್ಕಾರಗಳ ಸತತ ಪ್ರಯತ್ನ, ಸಾರ್ವಜನಿಕರ ಸಹಕಾರ, ಜಾಗೃತಿಯ ಫಲವಾಗಿ ಇಂದು ಎಚ್‌ಐವಿ-ಏಡ್ಸ್‌ ಹತೋಟಿಯತ್ತ ಸಾಗಿದೆ. ಅದೇ ದಾರಿಯಲ್ಲಿ ರಾಯಚೂರು ಜಿಲ್ಲೆಯಿದ್ದು, ಹಳೆ ಅಂಕಿ-ಸಂಖ್ಯೆಗಳಿಗೆ ಹೋಲಿಸಿದ್ದೇ ಆದಲ್ಲಿ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣವು ಗಣನೀಯವಾಗಿ ಇಳಿಕೆ ಕಂಡಿದೆ. ಜೊತೆಗೆ ಸೋಂಕಿನ ಪರೀಕ್ಷೆಗೊಳಪಡುವವರ ಪ್ರಮಾಣವು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ ಎನಿಸಿಕೊಂಡಿದೆ.

ಐಸಿಟಿಸಿ ಕೇಂದ್ರಗಳ ವರದಿಗಳನ್ನು ಆಧರಿಸಿ ಜಿಲ್ಲೆಯಲ್ಲಿ 2014-15 ರಲ್ಲಿ 57,203 ಎಚ್ಐವಿ ಪರೀಕ್ಷೆಗೆ ಒಳಪಡಿಸಿದವರಲ್ಲಿ 1,163 ಸೋಂಕಿನ ಪ್ರಮಾಣ ದಾಖಲಾಗಿದೆ. ಅದೇ ವರ್ಷ 42,374 ಗರ್ಭಿಣಿ ಮಹಿಳೆಯರನ್ನು ಪರೀಕ್ಷೆಗೆ ಒಳಪಡಿಸಿದಾಗ 46 ಜನ ಸೋಂಕಿಗೆ ಒಳಗಾಗಿರುವುದು ಕಂಡು ಬಂದಿತು. 2021-22ರಲ್ಲಿ ಎಚ್ಐವಿ ಪರೀಕ್ಷೆಗೆ 78,004 ಜನರನ್ನು ಪರೀಕ್ಷೆಗೊಳಪಡಿಸಿದಾಗ 429 ಸೋಂಕಿತರು ದಾಖಲಾಗಿದ್ದರು.

ಅದೇ ರೀತಿ 2021-22 ರಲ್ಲಿ 54,876 ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸಿದಾಗ 23 ಗರ್ಭಿಣಿಯರಿಗೆ ಎಚ್ಐವಿ ಸೋಂಕು ಕಂಡು ಬಂದಿತ್ತು. 2022-23ರಲ್ಲಿ ಎಚ್ಐವಿ ಪರೀಕ್ಷೆಗೆ 82,553 ಜನರನ್ನು ಪರೀಕ್ಷಿಸಿದಾಗ 404 ಸೋಂಕಿತರು ದಾಖಲಾಗಿದ್ದರು.

2022-23ರಲ್ಲಿ 58,191 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಿದಾಗ 20 ಗರ್ಭಿಣಿಯರಿಗೆ ಎಚ್ಐವಿ ಸೋಂಕು ಕಂಡು ಬಂದಿದೆ. 2023-24 ರಲ್ಲಿ 91,798 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 431 ಸೋಂಕಿತರನ್ನು ಪತ್ತೆಯಾಗಿದ್ದರು.

ಅದೇ ರೀತಿ 55,893 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಿದಾಗ 21 ಗರ್ಭಿಣಿಯರಿಗೆ ಎಚ್ಐವಿ ಸೋಂಕು ಕಂಡು ಬಂದಿದೆ.

ಪ್ರಸ್ತುತ ವರ್ಷ-2024 ರಲ್ಲಿ 62,412ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ 283 ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ.

ಅದೇರೀತಿ 20092 ಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸಿದಾಗ 13 ಗರ್ಭಿಣಿಯರಿಗೆ ಎಚ್ಐವಿ ಸೋಂಕು ಕಂಡು ಬಂದಿದೆ. ಸೋಂಕು ಹೊಂದಿದ 32 ಸ್ತ್ರೀಯರು ಹೆರಿಗೆ ಆಗಿದ್ದು, ಯಾವುದೇ ಮಗುವಿಗೆ ಸೋಂಕು ಬಂದಿಲ್ಲ ಎಂಬುದನ್ನು ಆರೋಗ್ಯ ಇಲಾಖೆಯು ಸ್ಪಷ್ಟಪಡಿಸಿದೆ.

----------------

..ಬಾಕ್ಸ್ ..

ಎಚ್ಐವಿ ಸೋಂಕಿನ ಪ್ರಮಾಣ ಗಣನೀಯ ಇಳಿಕೆ

ಕಳೆದ 2014-15 ರಿಂದ ಇಲ್ಲಿಯವರೆಗೆ ರಾಯಚೂರು ತಾಲೂಕಿನಲ್ಲಿ 56,3076 ಎಚ್ಐವಿ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 2,646 ಸೋಂಕಿತರು, ಲಿಂಗಸುಗೂರಿನಲ್ಲಿ 23,2064 ಎಚ್ಐವಿ ಪರೀಕ್ಷೆಗೊಳಪಟ್ಟವರಲ್ಲಿ 1750 ಸೋಂಕಿತರು ಪತ್ತೆ ಹಚ್ಚಲಾಗಿದೆ. ಮಾನ್ವಿಯಲ್ಲಿ 1,63, 629 ಜನರನ್ನು ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 660 ಸೋಂಕಿತರು ಪತ್ತೆ ಹಚ್ಚಲಾಗಿದೆ. ಸಿಂಧನೂರಿನಲ್ಲಿ 1,59,369 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅದರಲ್ಲಿ 1,647 ಸೋಂಕಿತರು ಕಂಡು ಬಂದಿದ್ದಾರೆ. ದೇವದುರ್ಗದಲ್ಲಿ 1,88,338 ಜನರನ್ನು ಎಚ್ಐವಿ ಪರೀಕ್ಷೆ ಮಾಡಿದರೆ ಅದರಲ್ಲಿ 555 ಸೋಂಕಿತರು ಪತ್ತೆಯಾಗಿದ್ದಾರೆ. 2014-15 ಕ್ಕೆ ಹೋಲಿಸಿದರೆ ಸಾಮಾನ್ಯ ಆರ್ಥಿಗಳಲ್ಲಿ ಶೇ 0.94 ಹಾಗೂ ಗರ್ಭಿಣಿಯರಲ್ಲಿ ಶೇ 0.06ರಷ್ಟು ಪಾಸಿಟಿವಿಟಿ ದರ ಇದ್ದು, 2023-24 ರಲ್ಲಿ ಸಾಮಾನ್ಯ ಆರ್ಥಿಗಳಲ್ಲಿ 0.47% ಹಾಗೂ ಗರ್ಭಿಣಿಯರಲ್ಲಿ ಶೇ. 0.45 ಪಾಜಿಟಿವಿಟಿ ದರವಿದೆ. ಒಟ್ಟು 2023-24ರಲ್ಲಿ ಎಚ್ಐವಿ ಪರೀಕ್ಷೆಗೆ ಒಳಪಡಿಸಿದವರಲ್ಲಿ ಹೆಚ್ಚಳ ಕಂಡು ಬಂದಿದ್ದು ಎಚ್ಐವಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ. ರಾಯಚೂರು ಜಿಲ್ಲೆಯು 9ನೇ ಸ್ಥಾನದಲ್ಲಿದ್ದು 0.471 ಇದೆ.

------------------

ಪ್ರಸಕ್ತ ಸಾಲಿನಲ್ಲಿ 6 ಜನ ಸೋಂಕಿತರು ಸಾವು

ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2014-15 ರಿಂದ 2024 ರವರೆಗೆ 7258 (ಗರ್ಭಿಣಿ ಸೋಂಕಿತರು ಒಳಗೊಂಡಂತೆ)ಇದರಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 7240 ಇದರಲ್ಲಿ 473 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಆರ್‌ಟಿ ಕೇಂದ್ರದ ವರದಿಯ ಪ್ರಕಾರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು 6 ಎಚ್ಐವಿ ಸೋಂಕಿತರು ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿವೆ.

----------------

....ಕೋಟ್....

ಎಚ್ಐವಿ ಕುರಿತು ಇರುವ ತಪ್ಪುಕಲ್ಪನೆಯನ್ನು ಹೋಗಲಾಡಿಸುವಲ್ಲಿ ಅವರಿವರೆನ್ನದೆ ಪ್ರತಿಯೊಬ್ಬರ ಸಹಕಾರ ಹಾಗೂ ಬೆಂಬಲದ ಅವಶ್ಯಕತೆ ಇದೆ. ಆಗ ಮಾತ್ರ ಎಚ್ಐವಿ ಸೊನ್ನೆಗೆ ತರಲು ಸಾಧ್ಯ. ಅಲ್ಲದೇ ಸಾರ್ವಜನಿಕರು ತಮ್ಮ ಸ್ಥಿತಿಯನ್ನು ತಿಳಿಯುವುದು ಅತ್ಯವಶ್ಯಕ. ಈ ಬಗ್ಗೆ ಪ್ರತಿಯೊಬ್ಬರ ಜಾಗೃತಿ ಮೂಡಿಸುವುದರಿಂದ ಎಚ್ಐವಿ ಸೋಂಕು ಇನ್ನಿಷ್ಟು ಪ್ರಮಾಣದಲ್ಲಿ ಇಳಿಮುಖಗೊಳಿಸಲು ಸಾಧ್ಯವಾಗಲಿದ್ದು, ಆ ನಿಟ್ಟಿನಲ್ಲಿ ಇಲಾಖೆ ನಿತಂತರ ಪ್ರಯತ್ನಗಳನ್ನು ನಡೆಸುತ್ತಿದೆ.

-ಡಾ.ಎಂ.ಡಿ.ಶಾಕೀರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ,ರಾಯಚೂರು.

----------------------

01ಕೆಪಿಆರ್‌ಸಿಆರ್‌ 03: ಎಚ್ಐವಿ (ಏಡ್ಸ್‌) ಲೋಗೋ

01ಕೆಪಿಆರ್‌ಸಿಆರ್ 04: ಡಾ.ಎಂ.ಡಿ.ಶಾಕೀರ್