ನಾವು ಜೀವನದಲ್ಲಿ ದುಡಿಮೆ ಮಾಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ಚಿಕ್ಕಮಗಳೂರಿನ ಬಂಟರ ಸಂಘದ ಅಧ್ಯಕ್ಷ ಡಿ.ಬಿ.ನರೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ನಾವು ಜೀವನದಲ್ಲಿ ದುಡಿಮೆ ಮಾಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಮೀಸಲಿಡಬೇಕು ಎಂದು ಚಿಕ್ಕಮಗಳೂರಿನ ಬಂಟರ ಸಂಘದ ಅಧ್ಯಕ್ಷ ಡಿ.ಬಿ.ನರೇಂದ್ರ ಹೇಳಿದರು.

ಪಟ್ಟಣದ ಬಂಟರ ಯಾನೆ ನಾಡವರ ಸಂಘ ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ಬೆಳವಣಿಗೆಯೊಂದಿಗೆ ಸಂಘದ, ಸಮುದಾಯದ ಬೆಳವಣಿಗೆಗೂ ಆದ್ಯತೆ ನೀಡಬೇಕಿದ್ದು, ಸಮುದಾಯದ ಪ್ರತಿಯೊಬ್ಬರು ಸಹ ಸಂಘದಲ್ಲಿ ಸದಸ್ಯರಾಗುವ ಮೂಲಕ ಸಂಘದಿಂದ ದೊರೆಯುವ ವಿವಿಧ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಸಂಘವು ಸದಸ್ಯರಿಗೆ ವಿವಿಧ ರೀತಿಯಲ್ಲಿ ಅರ್ಥಿಕ ಸಹಾಯವನ್ನು ಮಾಡುತ್ತಿದ್ದು, ಇತ್ತೀಚೆಗೆ ಕೆರೆಕಟ್ಟೆಯಲ್ಲಿ ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ಹರೀಶ್‌ ಶೆಟ್ಟಿ ಕುಟುಂಬಕ್ಕೆ ಸಹ ಸಂಘದಿಂದ ಆರ್ಥಿಕ ಸಹಾಯವನ್ನು ಮಾಡಲಾಗಿದೆ ಎಂದು ತಿಳಿಸಿದರು.

ಬಂಟರ ಸಂಘದ ಜಿಲ್ಲಾ ಕಾರ್ಯದರ್ಶಿ ಆನಂದಶೆಟ್ಟಿ ಮಾತನಾಡಿ, ಸಮುದಾಯದವರು ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಗ್ಗೂಡುವುದರಿಂದ ಸಂಪರ್ಕ ಬೆಳೆಯಲಿದೆ. ಸಮುದಾಯದಲ್ಲಿ ಎಲ್ಲಾ ವರ್ಗಗಳ ಜನರೂ ಸಹ ಇದ್ದು, ಸಂಘವು ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆಯನ್ನು ನೀಡಿ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಸಮುದಾಯದ ಯಾವುದೇ ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆಯಾದಲ್ಲಿ ಕೂಡಲೇ ಸಂಘವನ್ನು ಸಂಪರ್ಕಿಸಿ ಅನುಕೂಲ ಪಡೆದುಕೊಳ್ಳಬೇಕು ಎಂದರು.

ಬಂಟರ ಸಂಘದ ಅಧ್ಯಕ್ಷ ರಾ.ವೆಂಕಟೇಶ್ ಶೆಟ್ಟಿ ಮಾತನಾಡಿ, ಸದಸ್ಯರು ಸಂಘದೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು. ಸಂಘವು ಸದಸ್ಯರ ಕಷ್ಟ ಸುಖಗಳಿಗೆ ಸ್ಪಂದಿಸಲಿದೆ. ಸಮುದಾಯದ ಮಕ್ಕಳು ತಮ್ಮಲ್ಲಿರುವ ಬುದ್ಧಿಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು ಎಂದರು.

ಮಕ್ಕಳು ಮೊಬೈಲ್ ಬಿಟ್ಟು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಮೊಬೈಲ್ ಹೆಚ್ಚಿಗೆ ಬಳಸುತ್ತ ಹೋದಲ್ಲಿ ತಮ್ಮಲ್ಲಿರುವ ಬುದ್ಧಿಶಕ್ತಿಯು ನಿಷ್ಕ್ರಿ ಯವಾಗಲಿದೆ. ಮೊಬೈಲ್‌ಗೆ ಕೆಲಸ ಕೊಡುವುದು ಬಿಟ್ಟು ಬುದ್ಧಿಶಕ್ತಿಗೆ ಕೆಲಸ ಕೊಡಬೇಕು ಎಂದು ಹೇಳಿದರು.

ಬಂಟರ ಯುವ ವೇದಿಕೆಯ ಅಧ್ಯಕ್ಷ ಚಂದ್ರಶೇಖರ್ ರೈ ಮಾತನಾಡಿ, ಬಂಟರ ಯುವ ವೇದಿಕೆಯು ಸಮುದಾಯ ಬಾಂಧವರಿಗಾಗಿ ಕ್ರೀಡಾಕೂಟಗಳನ್ನು ಆಯೋಜಿಸಿ ಅದರಲ್ಲಿ ಸಂಗ್ರಹವಾದ ಹಣವನ್ನು ಅನಾರೋಗ್ಯಪೀಡಿತರಿಗೆ, ಶಾಲೆಗಳ ವಿದ್ಯಾರ್ಥಿಗಳಿಗೆ ಸಹಾಯಧನವಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಇನ್ನೊಮ್ಮೆ ಆಯೋಜಿಸಲಾಗುವುದು ಎಂದು ಹೇಳಿದರು.

ಕೆ.ಪಿ.ರಾಮಣ್ಣಶೆಟ್ಟಿ ಟ್ರಸ್ಟ್ ಅಧ್ಯಕ್ಷ ಕೆ.ಪಿ.ಶೇಖರಶೆಟ್ಟಿ, ಪ್ರಮುಖರಾದ ಸುರೇಂದ್ರ ಶೆಟ್ಟಿ, ಪ್ರಮುಖರಾದ ವಿದ್ಯಾಶೆಟ್ಟಿ, ಎಚ್.ಆರ್.ಆನಂದ್, ಸುಚಿತಾ ಹೆಗ್ಡೆ, ಸನತ್‌ಶೆಟ್ಟಿ, ಸತೀಶ್, ನಟರಾಜ್‌ಶೆಟ್ಟಿ, ಗಣೇಶ್ ಶೆಟ್ಟಿ, ಪ್ರಭಾಕರಶೆಟ್ಟಿ, ನಾರಾಯಣಶೆಟ್ಟಿ, ಪ್ರಶಾಂತ್ ಶೆಟ್ಟಿ, ಸುದರ್ಶನ್ ಶೆಟ್ಟಿ ಮತ್ತಿತರರು ಹಾಜರಿದ್ದರು.