ಅದು ಜ್ಞಾನ ಸಂಪಾದನೆಗೆ ಅನುವು ಮಾಡಿಕೊಡುವ ಸಾಧನವಾಗಬೇಕು
ಬಳ್ಳಾರಿ: ಶಿಕ್ಷಣ ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಬಾರದು. ಅದು ಜ್ಞಾನ ಸಂಪಾದನೆಗೆ ಅನುವು ಮಾಡಿಕೊಡುವ ಸಾಧನವಾಗಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಕರೆ ನೀಡಿದರು.
ಬಳ್ಳಾರಿ-ಸಿರುಗುಪ್ಪ ರಸ್ತೆ ಮಾರ್ಗದ ಮೌಂಟ್ ವ್ಯೂ ಕ್ಯಾಂಪಸ್ ನಲ್ಲಿ ಬುಧವಾರ ಆಯೋಜಿಸಿದ್ದ ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಿಕ್ಷಣ ಎನ್ನುವುದು ಒಂದು ನಿರಂತರ ಯಾತ್ರೆ ಮತ್ತು ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಜ್ಞಾನ ಬೆಳೆಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸುಭಿಕ್ಷ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ದೇಶದ ಏಳಿಗೆಗಾಗಿ ಧಾರೆ ಎರೆಯಬೇಕು. ಯುವ ಸಮೂಹ ಕೇವಲ ಬೌದ್ಧಿಕವಾಗಿ ಬೆಳೆದರೆ ಸಾಲದು, ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಕೂಡ ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ. ಭಾರತೀಯ ಪರಂಪರೆಯು ನಮಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿಕೊಟ್ಟಿದೆ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ ಎಂದು ತಿಳಿಸಿದರು.
“ಎದ್ದೇಳಿ, ಎಚ್ಚರಗೊಳ್ಳಿ ಮತ್ತು ಗುರಿ ಸಾಧಿಸುವವರೆಗೆ ನಿಲ್ಲಬೇಡಿ” ಸ್ವಾಮಿ ವಿವೇಕಾನಂದರ ಈ ವಾಕ್ಯದಿಂದ ಸ್ಫೂರ್ತಿ ಪಡೆದು, ನಮ್ಮ ಜ್ಞಾನವನ್ನು ಕಾರ್ಯರೂಪಕ್ಕೆ ತರಬೇಕು. ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಮ್ಮ ಕೌಶಲ್ಯಗಳನ್ನು ಬಳಸಬೇಕು. ಭಾರತವನ್ನು ಸದೃಢ ಮತ್ತು ಸುಭಿಕ್ಷ ರಾಷ್ಟ್ರವನ್ನಾಗಿ ಮಾಡುವಲ್ಲಿ ಯುವಜನತೆಯ ಪಾತ್ರ ಪ್ರಮುಖವಾಗಿದೆ. ಕಿಷ್ಕಿಂದೆಯಂತಹ ಪವಿತ್ರ ಮಣ್ಣಿನಲ್ಲಿ ಸ್ಥಾಪಿತವಾಗಿರುವ ಈ ವಿಶ್ವವಿದ್ಯಾಲಯವು ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮಾತನಾಡಿ, ಕಲ್ಯಾಣ ಕರ್ನಾಟಕದಂತಹ ಭಾಗದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟುವುದು ಸವಾಲಿನ ಕೆಲಸ. ಈ ಸವಾಲುಗಳ ನಡುವೆಯೂ ವಿಶ್ವವಿದ್ಯಾಲಯವು ಎರಡು ವರ್ಷ ಪೂರೈಸಿ ಪ್ರಥಮ ಘಟಿಕೋತ್ಸವ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ 29 ಖಾಸಗಿ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಕೇವಲ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಗೆ ಆದ್ಯತೆ ನೀಡದೇ ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಪೂರಕ ವಾತಾವರಣ ನಿರ್ಮಿಸಬೇಕು. ವಿಶೇಷವಾಗಿ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಜಾಗತಿಕ ಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದ ಹಾದಿ ಸುಗಮವಾಗುತ್ತಿದೆ. ಇಲ್ಲಿನ ಹೆಣ್ಣು ಮಕ್ಕಳಿಗೆ ಉಜ್ವಲ ಭಷ್ಯವಿದೆ. ಅವರಿಗೆ ಉನ್ನತ ಶಿಕ್ಷಣ ನೀಡಲು ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದೇಶ ಹಾಗೂ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯಗಳು ತಲೆ ಎತ್ತುತ್ತಿವೆ. ಈ ಪೈಪೋಟಿಯ ನಡುವೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಂಸ್ಥೆಗಳು ಯಶಸ್ವಿಯಾಗಬೇಕು ಎಂದು ಆಶಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ವಳ ಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಸಿದ್ಧಲಿಂಗ ಶ್ರೀಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.
ಇದೇ ವೇಳೆ ಶೈಕ್ಷಣಿಕ ಸಾಧನೆಯಲ್ಲಿ ಉನ್ನತ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು.ಶಾಸಕರಾದ ಬಿ.ಎಂ. ನಾಗರಾಜ, ಬಾದರ್ಲಿ ಹಂಪನಗೌಡ, ಟಿ.ಇ.ಎಚ್.ಆರ್.ಡಿ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಜೆ.ವಿ. ಮಹಿಪಾಲ್, ಕಿಷ್ಕಿಂದ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಯಶವಂತ್ ಭೂಪಲ್, ಕುಲಪತಿ ಪ್ರೊ.ಟಿ.ಎನ್. ನಾಗಭೂಷಣ, ಸಹಕುಲಾಧಿಪತಿ ವೈ.ಜೆ.ಪೃಥ್ವಿರಾಜ್, ಕುಲಸಚಿವ ಡಾ.ಯು.ಈರಣ್ಣ, ಕುಲಪತಿ (ಮೌಲ್ಯಮಾಪನ) ಡಾ.ರಾಜು ಜಾಡರ್, ಹಣಕಾಸು ಅಧಿಕಾರಿ ವೈ.ನಮ್ರತಾ ಸೇರಿದಂತೆ ಬೋಧಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.