ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಅಂತರವಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀಶಂಭುಲಿಂಗೇಶ್ವರ ಮತ್ತು ಜೀರ್ಣೋದ್ಧಾರಗೊಂಡಿರುವ ಶ್ರೀಭೈರವೇಶ್ವರ ಸ್ವಾಮಿ, ಸಿದ್ದೇಶ್ವರ ಸ್ವಾಮಿ ದೇವಸ್ಥಾನಗಳ ಲೋಕಾರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.ಸಿದ್ದೇಶ್ವರ ಬೆಟ್ಟ ಶ್ರೀಕ್ಷೇತ್ರದಲ್ಲಿ ಶ್ರೀ ಕುಂಟ ಬೋರಪ್ಪ ಶ್ರೀಸಿದ್ದೇಶ್ವರ ಟ್ರಸ್ಟ್‌ನಿಂದ ನಡೆದ ಕಾರ್ಯಕ್ರಮದಲ್ಲಿ ದೇವಾಲಯಕ್ಕೆ ಅಳವಡಿಸಿದ್ದ ದೀಪಾಲಂಕಾರ ಭಕ್ತಾದಿಗಳ ಕಣ್ಮನ ಸೆಳೆಯಿತು. ದೇವರಿಗೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಹೂವಿನ ಆಲಂಕಾರ ಮಾಡಲಾಗಿತ್ತು.
ಮೈಸೂರಿನ ಸಂಸ್ಕೃತ ಮಹಾ ವಿದ್ಯಾಲಯದ ಉಪನ್ಯಾಸಕ ದಯಾನಂದ್ ಮತ್ತು ಶೈವಾಗಮ ಪ್ರವೀಣ, ವಿದ್ವಾನ್ ಶ್ರೀ ಕೀಲಾರ ಕುಮಾರಸ್ವಾಮಿ ನೇತೃತ್ವದಲ್ಲಿ ಹಾಗೂ ಶ್ರೀಸಿದ್ದೇಶ್ವರ ಸ್ವಾಮಿ ದೇಗುಲ ಅರ್ಚಕ ಸಮುದಾಯದ ಸಹಯೋಗದಲ್ಲಿ ಭಾನುವಾರ ಬೆಳಗ್ಗೆ ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ವಿವಿಧ ಹೋಮ, ಹವನ ಹಾಗೂ ಮಹಾಮಂಗಳಾರತಿ, ಪೂಜಾ ಕಾರ್ಯಕ್ರಮಗಳು ನಡೆದವು. ರಾತ್ರಿ ಹೆಬ್ಬೆಟ್ಟು ಸಾಮಾಜಿಕ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಫೆ.19ರಂದು ಸೋಮವಾರ ಬೆಳಗ್ಗೆಯಿಂದ ಹೋಮ, ಪೂಜೆ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ದೇಗುಲಗಳ ಲೋಕಾರ್ಪಣೆ ಅಂಗವಾಗಿ ದೇವಸ್ಥಾನದ ಮುಖ್ಯದ್ವಾರದ ಬಳಿಯಿಂದ ದೇವರ ಮೂರ್ತಿಗೆ ಹೂವು ಹೊಂಬಾಳೆ ಮಾಡಿಕೊಂಡು ವಿವಿಧ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆಯಲ್ಲಿ ವೀರಗಾಸೆ ಕುಣಿತ ಪೂಜಾ ಕುಣಿತ ದೊಡನೆ ಕುಂಭಮೇಳಗಳ ಜೊತೆಯಲ್ಲಿ ವೀರಭದ್ರ ದೇವಸ್ಥಾನದ ಬಸವ ನೋಡೋಣ ಮಡಿವಾಳ ಹಾಸಿದ ಮಡಿಯ ಮೇಲೆ ದೇವರು ಹೊತ್ತ ಅರ್ಚಕರು ದೇವಸ್ಥಾನಕ್ಕೆ ಕರೆ ತರಲಾಯಿತು.
ನಂತರ ದೇವರಿಗೆ ಅಭಿಷೇಕಗಳನ್ನು ನಡೆಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳು ಮುಗಿದು ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಮಳವಳ್ಳಿ, ಗುರುದೇವರಹಳ್ಳಿ, ಬಿದರಹೊಸಹಳ್ಲಿ, ನೆಲಮಾಕನಹಳ್ಳಿ, ಕೋಡಿಪುರ, ಹುಲ್ಲಹಳ್ಳಿ, ಹುಲ್ಲಾಗಾಲ, ಹುಸ್ಕೂರು, ಯತ್ತಂಬಾಡಿ, ಹೊಸಪುರ, ಹುಚ್ಚೇಗೌಡನದೊಡ್ಡಿ, ಅಂತರವಳ್ಳಿ, ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸುಮಾರು 6 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ಅನ್ನಸಂತರ್ಪಣೆಯಲ್ಲಿ ಪ್ರಸಾದ ಸ್ವೀಕರಿಸಿದರು.ಗ್ರಾಮದ ಸಿದ್ದೇಶ್ವರ ಸ್ವಾಮಿಯು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾ ಅಪಾರ ಭಕ್ತಾದಿಗಳನ್ನು ಒಳಗೊಂಡಿದೆ. ಪ್ರತಿವರ್ಷ ಹಬ್ಬದ ದಿನ ಒಂದು ವಿಶೇಷ ಪೂಜೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ಟ್ರಸ್ಟ್ ಅಧ್ಯಕ್ಷ ರಾಜೇಗೌಡ ತಿಳಿಸಿದ್ದಾರೆ.