ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕೀಲಾರ ಗ್ರಾಮದ ಶ್ರೀಸೋಮೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಟ್ರಸ್ಟ್ ವತಿಯಿಂದ ದೇವಾಲಯದ ಜೀರ್ಣೋದ್ಧಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮೇ ೧೬ರಿಂದ ೧೯ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಪೋಷಕ ಕೆ.ಕೆ.ರಾಧಾಕೃಷ್ಣ ತಿಳಿಸಿದರು.ದೇವಾಲಯವು ೭೫೦ ವರ್ಷಗಳ ಹಿಂದೆ ಚಾಲುಕ್ಯ ರಾಜರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದ್ದು ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ಆಗಿನ ವಾಸ್ತುಶಿಲ್ಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇ ೧೬ರ ಬೆಳಗ್ಗೆ ೯.೩೦ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ೧೧.೩೦ಕ್ಕೆ ದೇವಸ್ಥಾನದ ಲೋಕಾರ್ಪಣೆ ಮತ್ತು ಧಾರ್ಮಿಕ ಸಭೆಯು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ, ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನಸ್ವಾಮಿ ದಿವ್ಯ ಸಾನಿಧ್ಯವನ್ನು ವಹಿಸುವರು ಎಂದರು.ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಉಪಾಧ್ಯಕ್ಷ ಸುರೇಂದ್ರಕುಮಾರ್, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಸಂಶೋಧನಾ ವಿಭಾಗದ ಶಲ್ವಪಿಳ್ಳೈ ಅಯ್ಯಂಗಾರ್, ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ ನಿವೃತ್ತಾ ಪ್ರಾಧ್ಯಾಪಕ ಶೈವಾಗಮರತ್ನ ಪ್ರೊ.ಎಂ.ಮಲ್ಲಣ್ಣ, ಬೆಂಗಳೂರಿನ ಶೇಷಾದ್ರಿ ಸ್ವಾಮೀಜಿ ಉಪಸ್ಥಿತರಿರುವರು ಎಂದರು.
ಮುಖ್ಯ ಅತಿಥಿಗಳಾಗಿ ಪ್ರಾಚ್ಯವಸ್ತು ಇಲಾಖೆಗೆ ಆಯುಕ್ತ ಎ.ದೇವರಾಜು, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್ ಶಿವಕುಮಾರ ಬಿರಾದಾರ್, ಹಿರಿಯೂರು ಅವಧಾನಿ ನರಸಿಂಹಮೂರ್ತಿ ಪಾಲ್ಗೊಳ್ಳಲಿದ್ದಾರೆ ಎಂದರು.ಮೇ ೧೯ರ ಬೆಳಗ್ಗೆ ೧೧.೩೦ಕ್ಕೆ ಕುಂಭಾಭಿಷೇಕ ಮಹೋತ್ಸವದ ಧಾರ್ಮಿಕ ಸಭೆ ನಡೆಯಲಿದ್ದು, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಶಾಸಕ ಪಿ.ರವಿಕುಮಾರ್ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಜಯರಾಮೇಗೌಡ, ಡಿ.ಶಿವರಾಜ್, ಕೆ.ಟಿ.ಶಿವರಾಂ, ಆನಂದ್, ಲೋಕೇಶ್, ಸುರೇಶ್ ಕೀಲಾರ, ಕೀಲಾರ ಕೃಷ್ಣೇಗೌಡ ಇದ್ದರು.