ಸಾರಾಂಶ
- ಜೂನ್ 11-14 ರವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಕ್ಷ್ಮಿ, ಶ್ರೀ ಲಕ್ಷ್ಮೀ ಜನಾರ್ಧನಸ್ವಾಮಿ ಮತ್ತು ಶ್ರೀ ಕಾಲ ಭೈರವೇಶ್ವರ ದೇವಸ್ಥಾನಕನ್ನಡಪ್ರಭ ವಾರ್ತೆ, ಕಡೂರು
ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡು ಆರಾಧಿಸಲ್ಪಟ್ಟಿದ್ದ ದೇಗುಲ ನಂತರ ನೂರಾರು ವರ್ಷ ಪೂಜಾ ಕೈಂಕರ್ಯವಿಲ್ಲದೆ ದಾಳಿಗೂ ಒಳಗಾಗಿದ್ದ ಕಡೂರು ತಾಲೂಕಿನ ಹೇಮಗಿರಿ ಸಮೀಪದ ಕೆರೆಸಂತೆ ಶ್ರೀ ಮಹಾಲಕ್ಷ್ಮಿ, ಶ್ರೀ ಲಕ್ಷ್ಮೀ ಜನಾರ್ಧನಸ್ವಾಮಿ ಮತ್ತು ಶ್ರೀ ಕಾಲ ಭೈರವೇಶ್ವರ ದೇವಸ್ಥಾನಗಳು ಜೀರ್ಣೋದ್ದಾರಗೊಂಡು ಲೋಕಾರ್ಪಣೆಗೆ ಸಿದ್ಧವಾಗಿವೆ.ಇದೇ ಜೂನ್ 11 ರಿಂದ 14 ರವರೆಗೆ ಈ ಮೂರು ದೇವಾಲಯಗಳ ಲೋಕಾರ್ಪಣೆ ಜೊತೆ ಶ್ರೀಮಹಾಲಕ್ಷ್ಮಿ ಮತ್ತು ಶ್ರೀ ಜನಾರ್ಧನ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ಶ್ರೀಮಹಾಲಕ್ಷ್ಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಕರಿಬಡ್ಡೆ ಶ್ರೀನಿವಾಸ್ ಮಾಹಿತಿ ನೀಡಿ ಜೂನ್ 13 ರ ಗುರುವಾರ ಬೆಳಿಗ್ಗೆ ಜನಾರ್ಧನ, ಭೈರವೇಶ್ವರ ಪುನಃ ಪ್ರತಿಷ್ಠಾಪನೆ, ಜೂನ್ 14 ರ ಶುಕ್ರವಾರ ಮಹಾಲಕ್ಷ್ಮಿ ಪುನರ್ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ನ್ಯಾಸ ಪೂಜೆ, ಮಹಾಪೂಜೆ ಹಾಗೂ ಮಹಾ ರಥೋತ್ಸವ ನಡೆಯಲಿದೆ ಎಂದರು.ತಾವು ದೇವಾಲಯ ಸಮಿತಿ ಅಧ್ಯಕ್ಷರಾಗಿ ಸುಮಾರು 9 ವರ್ಷಗಳಾಗಿದ್ದು. ಅಮ್ಮನವರಿಗೆ ಕಡೂರು ತಾಲೂಕು ಸೇರಿದಂತೆ ರಾಜ್ಯದ ಎಲ್ಲೆಡೆ ಇರುವ ಸಾವಿರಾರು ವಕ್ಕಲುಗಳ ಭಕ್ತರ ಸಹಕಾರದಿಂದ ದೇವಾಲಯ ಜೀರ್ಣೋದ್ದಾರ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಭಕ್ತರಿಗೆ ಪ್ರಸಾದ ರೂಪದ ಶಾಶ್ವತ ದಾಸೋಹ ಆರಂಭಿಸಲು ನಿರ್ಧರಿಸಲಾಗಿದೆ. ಶ್ರೀಮಹಾಲಕ್ಷ್ಮಿ ಅಮ್ಮ ಶಾಸಕರಾದ ಕೆ.ಎಸ್ ಆನಂದ್ ಮನೆ ದೇವರಾಗಿದ್ದು, ಹಾಗಾಗಿ ಅವರು ದೇವಾಲಯಗಳ ಅಭಿವೃ ದ್ದಿಗೆ ಆದ್ಯತೆ ನೀಡಿದ್ದಾರೆ ಎಂದರು.
ಸಮಿತಿ ಪದಾಧಿಕಾರಿ ಹಾಗು ಮಾಜಿ ತಾಪಂ ಸದಸ್ಯ ಸೋಮಶೇಖರ್ ಮಾತನಾಡಿ, ನಮ್ಮ ಶಾಸಕ ಆನಂದ್ ರವರು ರಾಜ್ಯ ಸರ್ಕಾರದಿಂದ ರಸ್ತೆ, ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಸುತಿದ್ದಾರೆ. ಈ ಗ್ರಾಮವನ್ನು ಪ್ರವಾಸೋದ್ಯಮ ತಾಣವನ್ನಾಗಿಸಲು ಶಾಸಕ ಕೆ.ಎಸ್.ಆನಂದ್ ಚಿಂತನೆ ನಡೆಸಿದ್ದಾರೆ. ಒಟ್ಟಾರೆ ಕೆರೆಸಂತೆ ಐತಿಹಾಸಿಕ ಸ್ಮಾರಕಗಳ ಗತವೈಭವ ಉಳಿಯಬೇಕಿದೆ ಎಂದರು.ಈ ಎಲ್ಲ ಕಾರ್ಯಕ್ರಮಗಳು ಹೊಸದುರ್ಗದ ಶ್ರೀಕಾಂತಾನಂದ ಸರಸ್ವತಿ, ಹೊಸದುರ್ಗದ ಶ್ರೀ ಈಶ್ವರಾ ನಂದಪುರಿ ಸ್ವಾಮೀಜಿ, ಕೆ.ಆರ್.ನಗರದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿದೆ.
ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ಶ್ರೀ ಯವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಸೋಮಶೇಖರ್, ರವಿನಾಯ್ಕ, ಯೋಗೀಶ್, ಅಣ್ಣಾನಾಯ್ಕ, ಎಂ.ಬಿ. ಭಾರತಿ ಇದ್ದರು. -- ಬಾಕ್ಸ್ ಸುದ್ದಿಗೆ--ಪ್ರಾಚೀನ ತಂತ್ತಜ್ಞಾನ ಹಾಗೂ ಕೌತುಕದ ಕ್ಷೇತ್ರ
ಹೊಯ್ಸಳ ದೊರೆ ವಿಷ್ಣುವರ್ಧನ ಈಗಿನ ಹೇಮಗಿರಿಯನ್ನು ಹೇಮಾವತಿ ಪಟ್ಟಣ ಎಂಬ ಹೆಸರಿನಲ್ಲಿ ಬ್ರಾಹ್ಮಣ ಅಗ್ರಹಾರವನ್ನಾಗಿ ನಿರ್ಮಿಸಿ ಅಲ್ಲಿ ಮಹಾಲಕ್ಷ್ಮಿ ಮತ್ತು ಜನಾರ್ಧನ ದೇವಸ್ಥಾನ ಕಟ್ಟಿಸಿ, ವಿಷ್ಣು ಸಮುದ್ರ ಎಂಬ ಕೆರೆ ನಿರ್ಮಿಸಿದ್ದನು.ಪುರಾತತ್ವ ಇಲಾಖೆಯ 3.85 ಕೋಟಿ ಅನುದಾನದಲ್ಲಿ ಜನಾರ್ಧನ ದೇವಸ್ಥಾನ. ಮಹಾಲಕ್ಷ್ಮಿ ದೇವಸ್ಥಾನವನ್ನು ಮೂಲ ರೂಪದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಹೊಯ್ಸಳ ನಿರ್ಮಿತ ಪುರಾತನ ಕಲ್ಯಾಣಿಯನ್ನು ದೇವಸ್ಥಾನ ಸಮಿತಿಯೇ ನವೀಕರಣ ಮಾಡಿದೆ.
ಮಹಾಲಕ್ಷ್ಮಿ ಪಾದ ಭೂ ಸ್ವರ್ಶ ಮಾಡಿರುವ ದೇವಸ್ಥಾನಗಳು ಭಾರತದಲ್ಲಿ ಮೂರು ಮಾತ್ರ ಕಾಣಸಿಗುತ್ತವೆ ಅದರಲ್ಲೊಂದು ಈ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಜನಾರ್ಧನ ದೇವಸ್ಥಾನ ಹೊಯ್ಸಳ ವಾಸ್ತು ಶೈಲಿಯಲ್ಲಿದ್ದು, ಗರ್ಭಗುಡಿಯಲ್ಲಿ ಇರುವ ಒಂದು ಸಣ್ಣ ಕಿಂಡಿ ಯಿಂದ ಸೂರ್ಯೊದಯದ ಕಿರಣ ಹಾದು ಸುಮಾರು 300 ಮೀಟರ್ ದೂರದಲ್ಲಿರುವ ಮಹಾಲಕ್ಷ್ಮಿಯ ದೇವಸ್ಥಾನದೊಳಗೆ ಪ್ರವೇಶಿಸಿ ದೇವಿ ಪಾದ ಸ್ಪರ್ಶಿಸುವುದು ಪ್ರಾಚೀನ ತಂತ್ತಜ್ಞಾನ ಹಾಗೂ ಕೌತುಕಕ್ಕೆ ಒಂದು ಉದಾಹರಣೆಯಾಗಿದೆ. ಒಟ್ಟಾರೆ ಕೆರೆಸಂತೆಯ ಐತಿಹಾಸಿಕ ಸ್ಮಾರಕಗಳು ದೇವಾಲಯ ಪುನರ್ ನಿರ್ಮಾಣದಿಂದ ಗತ ವೈಭವವನ್ನು ಮರಳಿ ಪಡೆದಿದ್ದು, ಮಹಾಲಕ್ಷ್ಮಿ ದೇವಿಗೆ ಸುಮಾರು 75 ಲಕ್ಷ ವೆಚ್ಚದಲ್ಲಿ ಕಾರ್ಕಳದ ಶಿಲ್ಪಿ ಪ್ರಭಾಕರ ಆಚಾರ್ಯರಿಂದ ಹೊಸ ರಥ ನಿರ್ಮಾಣ ಮಾಡಲಾಗಿದೆ.
-8ಕೆಕೆಡಿಯು1. ಲೋಕಾರ್ಪಣೆಗೆ ಸಿದ್ದವಾಗಿರುವ ಶ್ರೀಮಹಾಲಕ್ಷ್ಮಿಅಮ್ಮನವರ ದೇವಾಲಯ. 8ಕೆಕೆಡಿಯು1ಎ.