ಗೋವಿನ ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ವಿವಿಧ ರೈತಪರ ಹೋರಾಟಗಾರರು ನಡೆಸುತ್ತಿರುವ ಹೋರಾಟ ಸೋಮವಾರ 10ನೇ ದಿನಕ್ಕೆ ಕಾಲಿಟ್ಟಿದೆ.
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗೋವಿನ ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ವಿವಿಧ ರೈತಪರ ಹೋರಾಟಗಾರರು ನಡೆಸುತ್ತಿರುವ ಹೋರಾಟ ಸೋಮವಾರ 10ನೇ ದಿನಕ್ಕೆ ಕಾಲಿಟ್ಟಿದೆ.
ಪಟ್ಟಣದ ಹಾವಳಿ ಹನಮಪ್ಪನ ದೇವಸ್ಥಾನದಿಂದ ಸೋಮವಾರ ರೈತಪರ ಹೋರಾಟಗಾರರು ದೀಡ್ ನಮಸ್ಕಾರ ಹಾಕುತ್ತ ಬಜಾರ್ ರಸ್ತೆಯ ಮೇಲೆ ಸಾಗಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. ವಿಶೇಷ ಸಂದರ್ಭಗಳಲ್ಲಿ ದೇವರಿಗೆ ಭಕ್ತರು ದೀಡ್ ನಮಸ್ಕಾರ ಹಾಕುವುದು ವಾಡಿಕೆ. ಆದರೆ ಲಕ್ಷ್ಮೇಶ್ವರ ರೈತಪರ ಹೋರಾಟಗಾರರು ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು ಎನ್ನುವ ಆಗ್ರಹದೊಂದಿಗೆ ದೀಡ್ ನಮಸ್ಕಾರ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.ಈ ವೇಳೆ ಹೋರಾಟಗಾರರನ್ನು ಆದರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರು ಸತ್ಕರಿಸಿ ಮಾತನಾಡಿ, ಸರ್ಕಾರ ರೈತರ ಸಹನೆ ಪರೀಕ್ಷೆ ಮಾಡುವ ಕಾರ್ಯ ಮಾಡಬಾರದು. ರೈತರು ತಾವು ಬೆಳೆದ ಬೆಳೆಗೆ ಯೋಗ್ಯ ಬೆಲೆ ಕೇಳುವುದು ಅನ್ಯಾಯವಾ? ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ರೈತರ ಹಿತ ಕಾಪಾಡಬೇಕಾದ ಸರ್ಕಾರಗಳು ರೈತರ ಮಾರಕ ನೀತಿ ಅನುಸರಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಬೇಡಿಕೆ ಈಡೇರುವುವರೆಗೆ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ. ಹಲವರು ನನಗೆ ಬೆದರಿಕೆ ಹಾಕುತ್ತಿರುವುದು ರೈತರ ಪರವಾಗಿ ಕೆಲಸ ಮಾಡಿದವರಿಗೆ ಕೊಡುವ ಗೌರವವಾಗಿದೆ. ಇದಕ್ಕೆ ನಾವು ಹೆದರುವುದಿಲ್ಲ. ಪ್ರಾಣ ಹೋದರೂ ನಾನು ಅಂಜುವುದಿಲ್ಲ. ರೈತರ ಸಹನೆಯ ಕಟ್ಟೆಯೊಡೆಯುವ ಮೊದಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಎಚ್ಚರಿಸಿದರು.
ಈ ವೇಳೆ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ಎಂ.ಎಸ್. ದೊಡ್ಡಗೌಡರ, ನಾಗರಾಜ ಚಿಂಚಲಿ, ನೀಲಪ್ಪ ಶರೆಸೂರಿ ಮಾತನಾಡಿ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ರೈತರ ಹೋರಾಟ ಇನ್ನಷ್ಟು ಉಗ್ರ ಸ್ವರೂಪ ತಾಳುವ ಮೊದಲು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಗೊಜನೂರು ಗ್ರಾಮದ ರೈತರು 10 ಚಕ್ಕಡಿಗಳಲ್ಲಿ ಆಗಮಿಸಿ ರೈತರಿಗೆ ಬೆಂಬಲ ಸೂಚಿಸಿದರು. ಗೊಜನೂರಿನ ರೈತರು ರೊಟ್ಟಿ, ಹೆಸರಕಾಳು ಪಲ್ಯ, ಶೇಂಗಾ ಚಟ್ನಿ, ಮೊಸರು, ಚಿತ್ರಾನ್ನ ತಂದು ಹೋರಾಟಗಾರರಿಗೆ ಉಣಬಡಿಸಿ ಬೆಂಬಲ ಸೂಚಿಸಿದರು.
ಈ ವೇಳೆ ಪೂರ್ಣಾಜಿ ಕರಾಟೆ, ಬಸಣ್ಣ ಬೆಂಡಿಗೇರಿ, ನಾಗನಗೌಡ ಪಾಟೀಲ, ಚನ್ನಪ್ಪ ಷಣ್ಮುಖಿ, ಹೊನ್ನಪ್ಪ ಒಡ್ಡರ, ಶಿವಪುತ್ರಪ್ಪ ತಾರಿಕೊಪ್ಪ, ಮಲ್ಲನಗೌಡ ದೊಡ್ಡಗೌಡ್ರ, ಈಶ್ವರ ಕಳಸದ, ಈಶ್ವರಪ್ಪ ಸವಣೂರು, ದೇವಪ್ಪ ಗೌಡಣ್ಣವರ, ಸೋಮು ನಿಟ್ಟೂರ, ಪ್ರಭು ಹೂಗಾರ, ಮುದುಕಪ್ಪ ದೊಡ್ಡಗೌಡ್ರ, ಅಂದಾನಗೌಡ್ರ ಪಾಟೀಲ, ಕಲ್ಲನಗೌಡ ದೊಡ್ಡಗೌಡ್ರ, ನಿಜಲಿಂಗಪ್ಪ ಸೊರಟೂರ, ಶಿವಪುತ್ರಪ್ಪ ತಾರಿಕೊಪ್ಪ, ಪ್ರಭು ಕೊಂಡಿಕೊಪ್ಪ, ನಾಗನಗೌಡ ಪಾಟೀಲ, ಮಾಬುಸಾಬ ದೊಡ್ಡಮನಿ, ನೀಲಪ್ಪ ಬಿಚ್ಚುಗತ್ತಿ, ಚೆನ್ನಪ್ಪ ಶೆಟ್ಟಿ ವಡಕಣ್ಣವರ, ದೇವೇಂದ್ರಗೌಡ ಪಾಟೀಲ, ಮಾದೇಗೌಡ ಬಾಗವಾಡ, ಸೋಮಣ್ಣ ಪಾಟೀಲ, ಸುರೇಶ ಹಟ್ಟಿ, ಮುದಕಣ್ಣ ಗದ್ದಿ, ಮಂಜನುನಾಥ ಶೆರಸೂರಿ, ಬಸವರಾಜ ಬಸಾಪೂರ, ಸೇರಿದಂತೆ ಅನೇಕರು ಇದ್ದರು.