ದೀಕ್ಷಾ ಬ್ರಾಂಡ್ ರೂಪಿಸಿ ಯಶಸ್ವಿಯಾದ ಮಹಿಳಾ ಸಾಧಕಿ

| Published : Oct 05 2025, 01:01 AM IST

ಸಾರಾಂಶ

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಪ್ರಯೋಜನ ಪಡೆದು ತನ್ನದೇ ಆದ ಬ್ರಾಂಡ್ ರೂಪಿಸಿರುವ ಸಿದ್ಧಾಪುರ ತಾಲೂಕಿನ ಶಮೆಮನೆ ಗ್ರಾಮದ ಮಮತಾ ವಿನಾಯಕ ಭಟ್ಟ ಯಶಸ್ವಿ ಮಹಿಳಾ ಉದ್ಯಮಿಯಾಗಿ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.

ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಮಾದರಿ, ಸ್ಥಳೀಯ ಮಹಿಳೆಯರಿಗೆ ಉದ್ಯೋಗವಕಾಶಕನ್ನಡಪ್ರಭ ವಾರ್ತೆ ಕಾರವಾರ

ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಪ್ರಯೋಜನ ಪಡೆದು ತನ್ನದೇ ಆದ ಬ್ರಾಂಡ್ ರೂಪಿಸಿರುವ ಸಿದ್ಧಾಪುರ ತಾಲೂಕಿನ ಶಮೆಮನೆ ಗ್ರಾಮದ ಮಮತಾ ವಿನಾಯಕ ಭಟ್ಟ ಯಶಸ್ವಿ ಮಹಿಳಾ ಉದ್ಯಮಿಯಾಗಿ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.

ಮಮತಾ ವಿನಾಯಕ ಭಟ್ಟ ವಾಣಿಜ್ಯ ಪದವೀಧರರಾಗಿದ್ದು, ನಾಲ್ಕು ವರ್ಷಗಳ ಕಾಲ ಶಿರಸಿಯ ಮಾರ್ಕೆಟಿಂಗ್ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ, ಅಲ್ಲಿ ನಿರ್ವಹಣಾ ಅನುಭವವನ್ನು ಸಂಪಾದಿಸಿದರು. ಆ ಅವಧಿಯಲ್ಲಿ ಸಂಸ್ಥೆಯ ಸಿಇಒ ಅವರು ಮಮತಾ ಭಟ್ಟ ಅವರ ಸಾಮರ್ಥ್ಯ ಗುರುತಿಸಿ, ಗೃಹ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಿದ ಪರಿಣಾಮ ಪ್ರಸ್ತುತ ತಮ್ಮ ಉದ್ಯಮಶೀಲ ಮನೋಭಾವದಿಂದ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಮಾದರಿಯಾಗಿದ್ದಾರೆ.

ಉದ್ಯಮ ವಿಸ್ತರಣೆಯ ದೃಷ್ಟಿಯಿಂದ 2022ರಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಯಿಂದ ನೆರವು ದೊರೆಯಿತು. ಸಿದ್ದಾಪುರ ತಾಲೂಕು ಕೃಷಿ ಇಲಾಖೆಯ ಮಾರ್ಗದರ್ಶನದಲ್ಲಿ, ಹೊಸಗದ್ದೆ ಕೆನರಾ ಬ್ಯಾಂಕ್ ಶಾಖೆಯಿಂದ ₹15 ಲಕ್ಷ ಸಾಲ ಪಡೆದು ಹಿಟ್ಟಿನ ಗಿರಣಿ, ಹುರಿಯುವ ಯಂತ್ರ, ಕರೆಂಟ್ ಡ್ರೈಯರ್, ಪ್ಯಾಕಿಂಗ್ ಯಂತ್ರ ಮುಂತಾದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಸ್ಥಾಪಿಸಿದರು. ಜತೆಗೆ ₹3.75 ಲಕ್ಷ ಸಹಾಯಧನ ಸಹ ಲಭಿಸಿತು. ಇದರ ಫಲವಾಗಿ ಉತ್ಪಾದನಾ ಸಾಮರ್ಥ್ಯ, ಉತ್ಪನ್ನಗಳ ಗುಣಮಟ್ಟ ಮತ್ತು ಮಾರುಕಟ್ಟೆ ತಕ್ಕಂತೆ ವಿಸ್ತರಣೆ ಸಾಧ್ಯವಾಯಿತು.

ಕೇವಲ ₹10 ಸಾವಿರ ಬಂಡವಾಳದಿಂದ ಆರಂಭವಾದ ಚಿಕ್ಕ ಪ್ರಯತ್ನ, ಇಂದಿಗೆ ₹35 ಲಕ್ಷಕ್ಕೂ ಅಧಿಕ ವಹಿವಾಟು ಸಾಧಿಸಿರುವ “ದೀಕ್ಷಾ ಬ್ರಾಂಡ್” ಆಗಿ ಬೆಳೆದಿದೆ. ಪ್ರಾರಂಭದಲ್ಲಿ ಕೇವಲ ಹಲಸಿನ ಹಪ್ಪಳ ತಯಾರಿಕೆಯಿಂದ ಆರಂಭವಾದ ಈ ಉದ್ಯಮ, ಇಂದು ಕಷಾಯ ಪುಡಿ, ಹಲಸಿನಕಾಯಿ ಹಪ್ಪಳ, ಬಾಳೆಕಾಯಿ ಹಪ್ಪಳ, ಸೂಜು ಮೆಣಸು ಕಾರದ ಬಾಳೆ ಚಿಪ್ಸ್, ಸಬ್ಬಕ್ಕಿ ಸಂಡಿಗೆ ಮುಂತಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ.