ಡಿ.ಸುಧಾಕರ್ ಸಾವಿನ ನಂತರ ದಿಕ್ಕು ತಪ್ಪಿರುವ ಪಕ್ಷ । ಮನ ಬಂದ ಹಾಗೆ ವರ್ತಿಸುತ್ತಿರುವ ನಾಯಕರು

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಹಿರಿಯೂರು ವಿಧಾನಸಭೆ ಕ್ಷೇತ್ರದಲ್ಲಿ ಮನೆಯೊಂದು ನಾಲ್ಕು ಬಾಗಿಲು ಎಂಬಂತಹ ಪರಿಸ್ಥಿತಿ ಎದುರಿಸುತ್ತಿದೆಯೇ ಎಂಬ ಶಂಕೆಗಳು ದಟ್ಟವಾಗಿವೆ. ಅಲ್ಲಿನ ನಾಯಕರು ಮನ ಬಂದಂತೆ ವರ್ತಿಸುತ್ತಿರುವುದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶಗಳ ರವಾನಿಸಿದೆ.

ಡಿ.ಸುಧಾಕರ್ ನಿಧನದ ನಂತರ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ದಿಕ್ಕು ತಪ್ಪುತ್ತಿದೆಯಾ ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ದಶ ದಿಕ್ಕುಗಳಲ್ಲಿ ಮಾರ್ದನಿಸುತ್ತಿದೆ. 2013 ರಿಂದಲೂ ತಾಲೂಕಿನಲ್ಲಿ ಸುಧಾಕರ್ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಸುಧಾಕರ್ ಎಂಬಷ್ಟು ಅವರು ಪಕ್ಷವನ್ನು ಆವರಿಸಿಕೊಂಡಿದ್ದರು. ಆದರೆ ಅವರು ಮರಣ ಹೊಂದಿ ಇನ್ನು ಎರಡು ತಿಂಗಳು ಸಹ ಕಳೆದಿಲ್ಲ. ತಾಲೂಕಿನ ಕಾಂಗ್ರೆಸ್ ನಾಯಕರು ಮನ ಬಂದಕಡೆ ಗುರ್ತಿಸಿಕೊಳ್ಳುತ್ತಿದ್ದಾರೆ.

ಜಾತಿ, ಹಣ, ಭವಿಷ್ಯ, ಜಿಪಂ, ತಾಪಂ ಟಿಕೆಟ್ ನಿರೀಕ್ಷೆಗಳನ್ನೆಲ್ಲಾ ಅಳೆದು ತೂಗಿ ಒಬ್ಬೊಬ್ಬರು ಒಂದೊಂದು ಕಡೆ ನೆಲೆಯೂರುತ್ತಿದ್ದಾರೆ. ಸುಧಾಕರ್ ರವರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಪಕ್ಷದ ಸಭೆಗಳಿಗೂ ಈಗಿನ ಸಭೆಗಳಿಗೂ ಅಜಗಜಾoತರ ವ್ಯತ್ಯಾಸ ಕಾಣುತ್ತಿವೆ. ಇಷ್ಟು ವರ್ಷ ಅದುಮಿಟ್ಟುಕೊಂಡಿದ್ದ ಆರೋಪ, ಅಸಹನೆಗಳನ್ನೆಲ್ಲಾ ಕಾಂಗ್ರೆಸ್ ಮುಖಂಡರು ಸಭೆಗಳಲ್ಲಿ ಹೊರ ಹಾಕುತ್ತಿದ್ದಾರೆ. ಅದರಲ್ಲೂ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಗೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದಂತೆಲ್ಲಾ ಮುಖಂಡರುಗಳು ಹರಿದು ಹಂಚಿ ಹೋಗುತ್ತಿದ್ದಾರೆ.

ಸುಹಾಸ್ ಸುಧಾಕರ್, ಆರ್ ಮಂಜುನಾಥ್, ಪೂರ್ಣಿಮಾ ಶ್ರೀನಿವಾಸ್, ಸಣ್ಣ ಚಿತ್ತಯ್ಯ ಹೀಗೇ ಕಾಂಗ್ರೆಸ್ ಟಿಕೆಟ್ ಆಕಾoಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗಿದ್ದು ಇನ್ನೊಂದೆರಡು ಹೆಸರು ಸೇರ್ಪಡೆ ಆದರೆ ಅಚ್ಚರಿಯೇನಿಲ್ಲ. ಡಿ.ಸುಧಾಕರ್ ರವರ ಜೊತೆಗಿದ್ದ ನಾಯಕರು ಸೇರಿದಂತೆ ಅವರನ್ನು ಕಾಂಗ್ರೆಸ್ ನೊಳಗಿದ್ದೆೇ ವಿರೋಧಿಸುತ್ತಿದ್ದ ಮುಖಂಡರು ಈಗ ಈ ಎಲ್ಲಾ ಅಕಾoಕ್ಷಿಗಳ ಹಿಂದೆ ಹರಿದು ಹಂಚಿ ಹೋಗಿದ್ದಾರೆ. ಒಗ್ಗಟ್ಟು ಪ್ರದರ್ಶಿಸುವ ಹೊತ್ತಲ್ಲಿ ಕಾಂಗ್ರೆಸ್ ನವರು ಕಾಂಗ್ರೆಸ್ ನವರೊಂದಿಗೇ ಬಡಿದಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಅತ್ತ ಮೈತ್ರಿ ಪಕ್ಷದ ಟಿಕೆಟ್ ನ ನಿರೀಕ್ಷೆಯಲ್ಲಿ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಸದ್ದಿಲ್ಲದೇ ಮುಖಂಡರುಗಳನ್ನು ಒಟ್ಟುಗೂಡಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಅನುಭವ ಮತ್ತು ಒಂದಿಷ್ಟು ಡಿ ಸುಧಾಕರ್ ಶೈಲಿಯ ಆಲೋಚನಾ ಶಕ್ತಿಯನ್ನು ರಾಜಣ್ಣ ತೋರಿಸುತ್ತಿದ್ದು ಅವರೇ ಮೈತ್ರಿ ಅಭ್ಯರ್ಥಿ ಆದರೆ ಕಾಂಗ್ರೆಸ್ ಅಭ್ಯರ್ಥಿಗೆ ಅವರು ಸುಲಭದ ತುತ್ತಾಗುವುದಿಲ್ಲ.

ರವೀಂದ್ರಪ್ಪ, ಲಕ್ಷ್ಮೀಕಾಂತ್, ಎಂ.ಜಯಣ್ಣ ನವರ ಹೆಸರುಗಳು ಸಹ ಮೈತ್ರಿ ಪಕ್ಷದ ಟಿಕೆಟ್ ಪಟ್ಟಿಯಲ್ಲಿದ್ದು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಒಳಜಗಳ, ಬಣ ಜಗಳಗಳನ್ನು ಪೋಷಿಸುತ್ತ ಬರುತ್ತಿರುವ ಕಾಂಗ್ರೆಸ್ ಲೀಡರ್ ಗಳು ಡಿ.ಸುಧಾಕರ್ ಸಾವಿನ ಸಿಂಪತಿ ದ್ವಿಗುಣಗೊಳಿಸುವಂತಹ ಚಾಣಾಕ್ಷ ನಡೆ ತೋರಿಸುತ್ತಿಲ್ಲ. ನಿಧಾನಕ್ಕೆ ಒಬ್ಬೊಬ್ಬರೇ ಲೀಡರ್ ಗಳು ತಮ್ಮ ಅನುಕೂಲದ ಹಾದಿ ಹಿಡಿಯುತ್ತಿದ್ದು ಅವರನ್ನೆಲ್ಲಾ ಒಂದೇ ಶಾಮಿಯಾನದಡಿ ಹಿಡಿದಿಡುವ ಕೆಲಸ ಸಲೀಸಾಗಿಲ್ಲ.

ಇದ್ದೆಲ್ಲದರ ನಡುವೆ ಉದ್ಯಮಿ ಬೊಮ್ಮನಹಳ್ಳಿ ಬಾಬುರವರು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದು ಪಕ್ಷೇತರ ಅಭ್ಯರ್ಥಿ ಆಗಿ ಅಖಾಡಕ್ಕೆ ಇಳಿಯುವುದೇ ಸೇಫ್ ಎಂದು ನಿರ್ಧರಿಸಿದಂತೆ ಕಾಣುತ್ತಿದೆ. ಅವರು ಹೋದಲ್ಲೆಲ್ಲ ಜನ ಸಹಜವಾಗಿಯೇ ಸೇರುತ್ತಿದ್ದು ಬದಲಾವಣೆ ಬಯಸಿದನಾ ಮತದಾರ ಎಂಬ ಅನುಮಾನ ಹುಟ್ಟುತ್ತಿದೆ.

ಬೊಮ್ಮನಹಳ್ಳಿ ಬಾಬುರವರು ಬಲಿಷ್ಠರಾದಷ್ಟು ಕಾಂಗ್ರೆಸ್ ಪಕ್ಷ ಶಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ ಎಂಬ ಸುಳಿವುಗಳು ರವಾನೆಯಾದಂತೆ ಕಾಣಿಸುತ್ತಿದೆ. ಬೊಮ್ಮನಹಳ್ಳಿ ಬಾಬುರವರ ಬಳಿ ಸೇರಿರುವ ಮುಖಂಡರುಗಳಲ್ಲಿ ಮುಕ್ಕಾಲು ಪಾಲು ಲೀಡರ್ ಗಳು ಕಾಂಗ್ರೆಸ್ ನವರು. ಬಾಬುರವರು ಮೂರು ಪಕ್ಷಗಳ ಮುನಿದ ಮುಖಂಡರುಗಳನ್ನು ಹಿಡಿದಿಡುವಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭಿಸಿದ್ದು ಕಾಂಗ್ರೆಸ್ ನ ಹಾದಿ ಅಷ್ಟು ಸುಲಭವಾಗಿಲ್ಲ.

ಏತನ್ಮಧ್ಯೆ ವಿಶ್ವೇಶ್ವರಯ್ಯ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ಕೂಡಾ ಹಿರಿಯೂರು ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಕಾಡುಗೊಲ್ಲ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಕ್ಷೇತ್ರದ ಮೊದಲ ಪರ್ಯಟಣೆಯಲ್ಲಿಯೇ ಅಪಾರ ಜನರು ತಮ್ಮ ಹಿಂದೆ ಸುಳಿದಾಡುವ ದೃಶ್ಯಗಳ ಕಟ್ಟಿ ಕೊಟ್ಟಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗುವುದೆಂಬ ಅಚಲ ವಿಶ್ವಾಸ ಅವರದ್ದು.

ಸಿಎಂ ಡಿಕೆ ಶಿವಕುಮಾರ್ ಅವರು ಯಾರಿಗೆ ಟಿಕೆಟ್ ಎಂಬ ಬಗ್ಗೆ ಏನೂ ತಿಳಿಸಿಲ್ಲ. ನಾವು ಟಿಕೆಟ್ ಕೊಟ್ಟವರ ಗೆಲ್ಲಿಸಿ ಎಂದಷ್ಟೇ ಹೇಳಿದ್ದಾರೆ. ಹಾಗಾಗಿ ಸನ್ನಿವೇಶಗಳು ಬದಲಾಗಿ, ಪೂರ್ವ ನಿರ್ಧಾರಿತ ಅಭ್ಯರ್ಥಿಗಳು ನೇಪಥ್ಯಕ್ಕೆ ಸರಿದರೂ ಅಚ್ಚರಿಯಿಲ್ಲ. ಹಿರಿಯೂರು ವಿಧಾನ ಸಭೆ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಹಿಡಿತ ಹೊಂದಿರುವ ಆದಿ ಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಇಂತಹ ಗುಂಪುಗಳಿಂದ ದೂರವಿದ್ದು ಪಕ್ಷ ಗಾಂಭೀರ್ಯದ ನಡಿಗೆ ಕಾಯ್ದುಕೊಂಡಿದ್ದಾರೆ.