ಹೊಸಪೇಟೆಯ ಏಳುಕೇರಿ ಹುಡುಗ ದೀಪಕ್ ಬಾಣದ ರಚಿಸಿದ ಹಂಪಿ ಉತ್ಸವದ ಲೋಗೋ ನಾಲ್ಕನೇ ಬಾರಿ ಆಯ್ಕೆಯಾಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ.
ಕೃಷ್ಣ ಲಮಾಣಿ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವದ ಲಾಂಛನ ಈಗ ಮತ್ತೊಮ್ಮೆ ಜನ ಮೆಚ್ಚುಗೆ ಪಡೆಯುತ್ತಿದ್ದು, ಏಳುಕೇರಿ ಹುಡುಗ ದೀಪಕ್ ಬಾಣದ ಬಿಡಿಸಿದ ಈ ಲೋಗೋ ಗಮನ ಸೆಳೆದಿದೆ.ಉತ್ಸವದ ಲಾಂಛನವನ್ನು ಸತತ ನಾಲ್ಕನೇ ವರ್ಷ ಬಿಡಿಸಿರುವ ಕಲಾವಿದ ದೀಪಕ್ ಬಾಣದ ಮತ್ತೊಮ್ಮೆ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ. ಲಾಂಛನಕ್ಕಾಗಿ ವಿಜಯನಗರ ಜಿಲ್ಲಾಡಳಿತ ಅರ್ಜಿ ಆಹ್ವಾನಿಸಿತ್ತು. ಈ ಬಾರಿ 13 ಕಲಾವಿದರು ತಮ್ಮ ಚಿತ್ರಗಳನ್ನು ಕಳುಹಿಸಿದ್ದರು. ಅಂತಿಮವಾಗಿ ದೀಪಕ್ ಬಾಣದ ಬಿಡಿಸಿದ ಚಿತ್ರವನ್ನು ಆಯ್ಕೆ ಸಮಿತಿ ಅಖೈರುಗೊಳಿಸಿದೆ. ಈಗ ಜಿಲ್ಲಾ ಉಸ್ತುವಾರಿ ಜಮೀರ್ ಅಹಮದ್ ಖಾನ್ ಅವರು ಕೂಡ ಈ ಲೋಗೋ ಬಿಡುಗಡೆಗೊಳಿಸಿದ್ದು, ಮೆಚ್ಚಿಕೊಂಡಿದ್ದಾರೆ.
ಲೋಗೋ ವಿಶೇಷ: ಈ ಬಾರಿ ಲಾಂಛನದಲ್ಲಿ ವಿಶೇಷವಾಗಿ ಹಂಪಿಯ ಉಗ್ರ ನರಸಿಂಹ ಹಾಗೂ ಯಂತ್ರೋದ್ಧಾರಕ ಆಂಜನೇಯನ ಮಧ್ಯದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನ ವರಾಹ, ರಾಜರ ತುಲಾಭಾರ ಮಾಡುವ ಸ್ಮಾರಕದ ಮೇಲೆ ಅಳವಡಿಸಲಾಗಿದೆ. ಇದರ ಮಧ್ಯೆ ಹಂಪಿಯ ಬೆಟ್ಟ-ಗುಡ್ಡಗಳ ನಡುವೆ ನೈಸರ್ಗಿಕವಾಗಿ ಹರಿಯುವ ತುಂಗೆಯ ದಡದಲ್ಲಿ ವಿರೂಪಾಕ್ಷ ದೇವಾಲಯದ ಗೋಪುರ, ಕಲ್ಲಿನ ರಥ, ದೇಸಿ ಕಲೆಗಳಾದ ಡೊಳ್ಳು ಕುಣಿತ, ವೀರಗಾಸೆಯು ನಮ್ಮ ನಾಡಿನ ಜಾನಪದ ಸಂಸ್ಕೃತಿಯ ಸೊಗಡನ್ನು ಬಿಂಬಿಸುತ್ತವೆ.ಅದಲ್ಲದೇ ವಿಶೇಷವಾಗಿ ಕೃಷ್ಣ ಗುಡಿಯ ಗೋಪುರವೊಂದರಲ್ಲಿರುವ ಗರುಡನ ಗಾರೆಶಿಲ್ಪವನ್ನು ಉತ್ಸವಕ್ಕೆ ಆಗಮಿಸುವವರನ್ನು ಸ್ವಾಗತಿಸುತ್ತಿವೆ. ಅಡಿಪಾಯದಲ್ಲಿ ಮಹಾನವಮಿ ದಿಬ್ಬವು ಸಾಮ್ರಾಜ್ಯದ ಸದೃಢತೆಯ ಸಂಕೇತವಾಗಿ ಬಳಸಿಕೊಳ್ಳಲಾಗಿದೆ. ಈ ಬಾರಿ ಹಂಪಿ ಉತ್ಸವದ ಅಕ್ಷರಗಳು, ಸ್ಮಾರಕಗಳು ಸ್ವರ್ಣ ಬಣ್ಣ ಹಾಗೂ ಜೀವಂತಿಕೆಯಿಂದ ಕೂಡಿದ್ದು, ಅಂದಿನ ಗತವೈಭವ ಮತ್ತೆ ಮರುಕಳಿಸುವಂತೆ ಚಿತ್ರಿಸಲು ಕಲಾವಿದ ಬಾಣದ ದೀಪಕ್ ಪ್ರಯತ್ನಿಸಿದ್ದಾರೆ. ಜತೆಗೆ ಹಂಪಿ ಪರಿಸರದ ಪಕ್ಷಿಗಳನ್ನು ನೆನಪಿಸುವಂತೆ ಪಕ್ಷಿಗಳ ಚಿತ್ರಗಳನ್ನು ಸೃಜಿಸಿದ್ದಾರೆ.
ಕಲಾವಿದ ದೀಪಕ್ ಪರಿಚಯ: ಕಲಾವಿದ ದೀಪಕ್ ಬಾಣದ ಹೊಸಪೇಟೆಯ ಬಾಣದಕೇರಿಯವರು. ರಾಮಪ್ಪ ಬಾಣದ ಮತ್ತು ಸುಜಾತಾ ಬಾಣದ ದಂಪತಿ ಪುತ್ರ ದೀಪಕ್ ಅವರದು ಕೃಷಿ ಕುಟುಂಬ. ಸಾಮಾನ್ಯ ಶಿಕ್ಷಣ ಪೂರೈಸಿ, ಧಾರವಾಡದ ಭಾರತೀಯ ಕಲಾ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಪೇಂಟಿಂಗ್, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎಫ್‌ಎ ಸ್ನಾತಕೋತ್ತರ ಪದವಿ ಪಡೆದು ವಿವಿಧ ಮಾಧ್ಯಮದಲ್ಲಿ ಹಲವಾರು ಕಲಾಕೃತಿಗಳನ್ನು ರಚಿಸುತ್ತ, ಚಿತ್ರಕಲಾ ಕ್ಷೇತ್ರದಲ್ಲಿ ಅಧ್ಯಯನಶೀಲರಾಗಿ ಭರವಸೆಯ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ.ಭಾವಚಿತ್ರ, ಕ್ರಿಯೇಟಿವ್ ಲ್ಯಾಂಡ್‌ಸ್ಕೇಪ್, ಅಮೂರ್ತ ಕಲೆಗಳಂತಹ ಕಲಾಪ್ರಕಾರ, ನಿಸರ್ಗ ಕಲಾಕೃತಿಗಳಲ್ಲಿ ಸೃಜನಶೀಲತೆ, ಸಮಕಾಲೀನ ಅಮೂರ್ತ ರೂಪದ ಶೈಲಿಯ ಕೃತಿಗಳನ್ನು ದೀಪಕ್ ಉತ್ತಮವಾಗಿ ಬಿಡಿಸುತ್ತಾರೆ. ಕಂಪ್ಯೂಟರ್ ಗ್ರಾಫಿಕ್ಸ್‌ನಲ್ಲಿ ಚಿತ್ರಗಳನ್ನೂ ಬಿಡಿಸಿ ಅನೇಕ ಸಾಹಿತಿಗಳ ಕೃತಿಗಳಿಗೆ ತಮ್ಮದೆ ಆದ ವಿಭಿನ್ನ ಶೈಲಿಯ ಮುಖಪುಟ ವಿನ್ಯಾಸಗಳನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ.
ಇವರು ಏಕವ್ಯಕ್ತಿ ಕಲಾಪ್ರದರ್ಶನವನ್ನು ಧಾರವಾಡ, ಹೊಸಪೇಟೆ, ಬೆಳಗಾವಿ, ಹುಬ್ಬಳ್ಳಿ, ಕೊಪ್ಪಳ, ಸಿಂಧನೂರು, ಗದಗ, ಬೆಂಗಳೂರು, ಗೋವಾ ಮುಂತಾದ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ.ದೀಪಕ್ ಅವರ ಕೃತಿಗಳಲ್ಲಿ ಕಲಾವಿದನೊಳಗಿನ ತುಡಿತ ಕಾಣಬಹುದು. ಕಲಾಕೃತಿಗಳ ರಚನೆಯೊಂದಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಮಾಡುತ್ತಿದ್ದು, ಸಾಹಿತಿಗಳ ಅಭಿನಂದನ ಗ್ರಂಥ ವಿನ್ಯಾಸ, ಪ್ರಸಿದ್ಧ ವಿದ್ಯಾ ಸಂಸ್ಥೆಗಳಿಗೆ, ಕರ್ನಾಟಕ ಸರ್ಕಾರವು ಆಯೋಜಿಸುವ ಬಳ್ಳಾರಿ ಉತ್ಸವ, ಆನೆಗೊಂದಿ ಉತ್ಸವ, ಕಂಪ್ಲಿ ಉತ್ಸವಕ್ಕೆ ವಿನ್ಯಾಸ ರೂಪಿಸಿಕೊಟ್ಟಿದ್ದಾರೆ.
ಕಲಾವಿದ ದೀಪಕ್ ಬಾಣದ ಬಿಡಿಸಿದ ಹಂಪಿ ಉತ್ಸವದ ಲಾಂಛನ ಮೆಚ್ಚುಗೆ ಗಳಿಸಿದೆ. ಅವರು ವಿಜಯನಗರದ ಗತವೈಭವವನ್ನು ಲಾಂಛನದಲ್ಲಿ ಸೃಜಿಸಿದ್ದಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.2026ನೇ ಸಾಲಿನ ಹಂಪಿ ಉತ್ಸವದ ಲಾಂಛನ ಲೋಕಾರ್ಪಣೆಗೊಂಡಿದ್ದು, ನನಗೆ ವೈಯಕ್ತಿಕವಾಗಿ ಸಂತೋಷವನ್ನುಂಟು ಮಾಡಿದೆ. ವಿನ್ಯಾಸವನ್ನು ಆಯ್ಕೆ ಮಾಡಿದ ವಿಜಯನಗರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದು ಕಲಾವಿದ ದೀಪಕ್ ಬಾಣದ ಹೇಳಿದರು.