ಬಿಜೆಪಿ ಬೈಂದೂರು ಮಂಡಲದ ಮಾಜಿ ಅಧ್ಯಕ್ಷ, ರೈತಮುಖಂಡ ದೀಪಕ್ ಕುಮಾರ್ ಶೆಟ್ಟಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 6 ವರ್ಷ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಕುಂದಾಪುರ: ಬಿಜೆಪಿ ಬೈಂದೂರು ಮಂಡಲದ ಮಾಜಿ ಅಧ್ಯಕ್ಷ, ರೈತಮುಖಂಡ ದೀಪಕ್ ಕುಮಾರ್ ಶೆಟ್ಟಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ 6 ವರ್ಷ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
1985ರಲ್ಲಿ ಜನತಾದಳದ ಮೂಲಕ ರಾಜಕೀಯ ಪ್ರವೇಶ ಮಾಡಿ, ಕಾಂಗ್ರೆಸ್‌ನಿಂದ ತಾ.ಪಂ. ಸದಸ್ಯ, ಅಧ್ಯಕ್ಷ, ಯುಪಿಎಂಸಿ ಸದಸ್ಯರಾಗಿದ್ದರು, ಈ ಸಂದರ್ಭ ಅವರ ಪತ್ನಿ 2 ಬಾರಿ ಜಿ.ಪಂ. ಸದಸ್ಯೆಯಾಗಿದ್ದರು. ನಂತರ 2014ರಲ್ಲಿ ಬಿಜೆಪಿ ಸೇರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಬೈಂದೂರು ಮಂಡಲ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ಬೈಂದೂರು ಪಟ್ಟಣ ಪಂಚಾಯಿತಿ ವಿಸ್ತರಣೆಯ ಸಂದರ್ಭದಲ್ಲಿ ಗ್ರಾಮಂತರ ಭಾಗಗಳನ್ನು ಕೈಬಿಡುವಂತೆ ಆಗ್ರಹಿಸಿ ರೈತರೊಂದಿಗೆ ಸೇರಿ 120 ದಿನಗಳಿಂದ ಹೋರಾಟ ಆರಂಭಿಸಿದ್ದರು, ಇದು ಸ್ಥಳೀಯ ಬಿಜೆಪಿ ಶಾಸಕ ಗುರುರಾಜ ಗಂಟಿಹೊಳೆ ಅವರ ಇರುಸುಮುರಿಸಿಗೆ ಕಾರಣವಾಗಿತ್ತು.ಎರಡು ದಿನಗಳ ಹಿಂದೆ ಬೈಂದೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಅಕ್ರಮ ಮರಳುದಂಧೆಯಲ್ಲಿ ಕೈಜೋಡಿಸಿದೆ ಎಂದು ಆರೋಪಿಸಿದ್ದರು. ಬಿಜೆಪಿ ಪಕ್ಷದ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಪಕ್ಷದಿಂದ ಅಮಾನತಗೊಳಿಸಿ, ಮಂಡಲಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಪಕ್ಷದ ಶಿಸ್ತಿಗೆ ವಿರೋಧವಾಗಿ ನಡೆದುಕೊಂಡ ಕಾರಣಕ್ಕೆ ಪಕ್ಷದ ಜಿಲ್ಲಾಧ್ಯಕ್ಷರು ಅವರನ್ನು ಅಮಾನತು ಮಾಡಿದ್ದಾರೆ, ಇದು ಪಕ್ಷದ ತೀರ್ಮಾನ ಎಂದು ಬೈಂದೂರು ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಹೇಳಿದ್ದಾರೆ.ಪ್ರತಿಕ್ರಿಯಿಸಿರುವ ದೀಪಕ್ ಕುಮಾರ್ ಶೆಟ್ಟಿ, ತಮ್ಮನ್ನು ಅಮಾನತು ಮಾಡುವ ಅಧಿಕಾರ ಮಂಡಲ ಅಧ್ಯಕ್ಷರಿಗಿಲ್ಲ, ಶಾಸಕರ ಕುಮ್ಮಕ್ಕಿನಿಂದ ತನ್ನನ್ನು ಅಮಾನತುಗೊಳಿಸಲಾಗಿದೆ, ಈ ಅಮಾನತಿಗೆ ಬೆಲ ಇಲ್ಲ ಎಂದು ಹೇಳಿದ್ದಾರೆ.