ಸುಜ್ಞಾನದ ಬೆಳಕು ನೀಡುವುದೇ ದೀಪೋತ್ಸವ

| Published : Nov 28 2024, 12:31 AM IST

ಸಾರಾಂಶ

ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯ

ಶಿರಹಟ್ಟಿ: ಅಜ್ಞಾನವೆಂಬ ಅಂಧಕಾರ ಅಳಿಸಿ ಸುಜ್ಞಾನದ ಬೆಳಕನ್ನು ನೀಡುವುದೇ ದೀಪೋತ್ಸವವಾಗಿದೆ. ಜ್ಯೋತಿ ಬೆಳಗುವುದರಿಂದ ಬೆಳಕಿನ ಜತೆಗೆ ಜ್ಞಾನ ಪಸರಿಸುವ ಕಾರ್ಯ ಮಾಡುತ್ತದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಮಂಗಳವಾರ ಸಂಜೆ ಶಿರಹಟ್ಟಿ ಪೇಟೆಯ ೪೨ನೇ ವರ್ಷದ ಶ್ರೀ ವೀರಭದ್ರೇಶ್ವರ ಕಾರ್ತಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬೆಳಕು ಇದು ಬರಿ ಬೆಳಕಲ್ಲ ಜ್ಞಾನ ಬೆಳಗಿಸುವ ದಿವ್ಯ ಬೆಳಕು ಎಂದು ನುಡಿದ ಅವರು, ಧರ್ಮ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಇದನ್ನು ಅರಿತು ನಡೆದರೆ ಜೀವನ ಪಾವನವಾಗಲಿದೆ ಎಂದು ಬೋಧಿಸಿದರು. ಧಾರ್ಮಿಕ ಕಾರ್ಯಕ್ರಮಗಳಿಂದ ಜನತೆಗೆ ಸನ್ಮಾರ್ಗದತ್ತ ನಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ತಿಕ ಮಾಸದಲ್ಲಿ ದೀಪ ಬೆಳಗುವುದರ ಉದ್ದೇಶ ನಮಗೆಲ್ಲರಿಗೂ ಜ್ಞಾನವೆಂಬ ಬೆಳಕು ದೊರೆತು ನಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ. ಲೋಕ ಕಲ್ಯಾಣಕ್ಕಾಗಿ ಆಚರಿಸುವ ಈ ಬೆಳಕಿನ ಉತ್ಸವದಿಂದ ನಮ್ಮಲ್ಲಿ ನಮ್ಮ ದೇಶದಲ್ಲಿ ಇಡೀ ಜಗತ್ತಿನಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲಿ. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ದೀಪ ಪ್ರಜ್ವಲಿಸಿದ ನಿಮಗೆಲ್ಲರಿಗೂ ಆಯೂರಾರೋಗ್ಯ ಧನ ಸಂಪತ್ತು ಪ್ರಾಪ್ತಿಯಾಗಲಿ. ಶತೃಭಯ ನಿವಾರಣೆಯಾಗಲಿ. ದೇಶದಲ್ಲಿ ಸುಭಿಕ್ಷೆ ನೆಲೆಸಲಿ ಎಂದು ಹರಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಪುರವಂತರು ಹಾಗೂ ಸಮಾಜದ ಮುಖಂಡ ಎಲ್.ವಿ. ಕುಸ್ಲಾಪೂರ ಮಾತನಾಡಿ, ಕಾರ್ತಿಕ ಮಾಸದಲ್ಲಿ ದೀಪ ಬೆಳಗುವುದರ ಹಿಂದೆ ಸಂಸ್ಕೃತಿಯ ಸಮುದಾಯದ ಸೌಖ್ಯ ಅಡಗಿದ್ದು, ಪರಂಪರೆ ಮುಂದುವರೆಸಿಕೊಂಡು ಹೋಗುವ ಉದಾತ್ತ ಚಿಂತನೆಗಳಿವೆ. ದೇವರು ಮತ್ತು ಧಾರ್ಮಿಕ ಆಚರಣೆಗಳು ಮನಸ್ಸಿಗೆ ಮುದ ನೀಡುತ್ತವೆ ಎಂದು ತಿಳಿಸಿದರು.

ಸಮಾಜ, ದೇಶದಲ್ಲಿ ಪ್ರತಿನಿತ್ಯ ಹಲವು ಹೊಸ ಪ್ರಕ್ರಿಯೆಗಳು, ಬದಲಾವಣೆಗಳು ನಡೆಯುತ್ತಿವೆ. ಇವೆಲ್ಲವುಗಳನ್ನು ತಿಳಿದುಕೊಳ್ಳಲು ಇಂದಿನ ಯುವ ಪೀಳಿಗೆ ಉತ್ತಮ ಶಿಕ್ಷಣ,ಜ್ಞಾನ ಪಡೆದು ವಿಚಾರವಂತರಾಗಬೇಕು. ಶಿಕ್ಷಣದ ಮೂಲಕ ಪ್ರಗತಿ ಸಾಧ್ಯವಾಗಿದ್ದು, ಆ ನಿಟ್ಟಿನಲ್ಲಿ ಸಮಾಜದ ಗುರು ಹಿರಿಯರು ತಮ್ಮ ಮಕ್ಕಳನ್ನು ತಪ್ಪದೇ ಓದಿಸಬೇಕು ಎಂದು ಕರೆ ನೀಡಿದರು.

ಅಜ್ಞಾನದ ಅಂಧಕಾರ ದೂರಮಾಡುವುದೇ ದೀಪ. ಬೆಳಕು ಜ್ಞಾನದ ಸಂಕೇತವೂ ಹೌದು. ಕಾರ್ತಿಕ ಮಾಸ ಪವಿತ್ರ ಎಂಬ ನಂಬಿಕೆಯಿಂದ ವಿವಿಧೆಡೆ ಈ ಸಂದರ್ಭದಲ್ಲಿ ದೀಪೋತ್ಸವ ಆಯೋಜಿಸಲಾಗುತ್ತಿದೆ. ಸಮಾಜದ ಐಕ್ಯತೆಗೆ ಪೂರಕವಾದ ದೀಪಾರಾಧನೆ ಅರಿವಿನ ಸಂಕೇತ. ಬೆಳಕು ಎಲ್ಲರಿಗೂ ಸಂತೋಷ ತರುತ್ತದೆ ಎಂದು ತಿಳಿಸಿದರು.

ಗಣ್ಯ ವ್ಯಾಪಾರಸ್ಥ ಈರಣ್ಣ ಶಿವಪ್ಪ ಬಳಿಗೇರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಉಪನ್ಯಾಸ ನೀಡಿದರು. ಚಂದ್ರಕಾಂತ ನೂರಶೆಟ್ಟರ್‌, ಮುತ್ತು ಮಜ್ಜಗಿ, ಎಸ್.ಬಿ. ಹೊಸೂರ, ಶಿದ್ದು, ಹೊಸೂರ, ಬಿ.ಎಂ. ಭೋರಶೆಟ್ಟರ್‌, ಕೆ.ಎ. ಬಳಿಗೇರ, ಶಿವು ಪಟ್ಟಣಶೆಟ್ಟಿ, ಬಸವರಾಜ ರಾಜಮನಿ ಸೇರಿ ಅನೇಕರು ಇದ್ದರು.