ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್ ವಲಯದಂಚಿನಲ್ಲಿ ಜಿಂಕೆ ಸತ್ತ ಪ್ರಕರಣದಲ್ಲಿ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಅಮಾನತ್ತುಗೊಂಡಿದ್ದು, ಈ ಪ್ರಕರಣದಲ್ಲಿ ಡಿಆರ್‌ಎಫ್‌ಒ ಕರ್ತವ್ಯ ನಿರ್ಲಕ್ಷ್ಯ, ಬೇಜವಬ್ದಾರಿತನ ತೋರಿದ ಮೇಲಾಧಿಕಾರಿಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ! ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಎಸಿಎಫ್ ಜಿ. ರವೀಂದ್ರ ವರದಿಯಾಧರಿಸಿ ಫೆ.೧೫ ರಂದು ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ರಾಮಲಿಂಗಪ್ಪ ಎಸ್‌ರನ್ನು ಕತ್ಯವ್ಯ ನಿರ್ಲಕ್ಷ್ಯ ಬೇಜವಬ್ದಾರಿ ತನದ ಆರೋಪದ ಮೇಲೆ ಅಮಾನತ್ತುಪಡಿಸಿ ಆದೇಶ ಹೊರಡಿಸಿದ್ದಾರೆ.ಹಲವು ಅನುಮಾನ?:ಜ.೨೯ ರಂದು ಬಫರ್ ಜೋನ್ ವಲಯದಂಚಿನ ತೆರಕಣಾಂಬಿ ಬಳಿ ಜಿಂಕೆ ಸಾವನ್ನಪ್ಪಿತ್ತು. ತೆರಕಣಾಂಬಿ ಹೋಬಳಿಯ ಉಪವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಹಾಗೂ ಮೋಜಣಿದಾರ ರಾಮಲಿಂಗಪ್ಪ ಎಸ್ ಅವರು ಮೃತ ಜಿಂಕೆ ನೈಸರ್ಗಿಕವಾಗಿ ಸಾವನ್ನಪ್ಪಿದೆ ಎಂದು ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಮಂಜುನಾಥ್‌ಗೆ ಮಾಹಿತಿ ನೀಡಿದ್ದಾರೆ. ಆರ್‌ಎಫ್‌ಒ ಮಂಜುನಾಥ್ ನೈಸರ್ಗಿಕವಾಗಿ ಸಾವನ್ನಪ್ಪಿದೆ ಎಂದರೆ ಡಿಸ್ಫೊಸ್ ಮಾಡು ಎಂದು ಮೌಖಿಕವಾಗಿ ಡಿಆರ್‌ಎಫ್‌ಒ ರಾಮಲಿಂಗಪ್ಪ ಎಸ್‌ಗೆ ಹೇಳಿದ್ದಾರೆ. ಆದರೆ ಜಿಂಕೆ ಸತ್ತ ಸ್ಥಳಕ್ಕೆ ಆರ್‌ಎಫ್‌ಒ, ಎಸಿಎಫ್ ಹೋಗಿಲ್ಲ.ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಅರಣ್ಯ ಇಲಾಖೆಯ ಸಿಬ್ಬಂದಿ ಇಲಾಖೆಯ ಜೀಪಿನಲ್ಲಿ ಬಂದು ಸತ್ತ ಜಿಂಕೆಯನ್ನು ಸುಟ್ಟು ಹಾಕಿದ್ದಾರೆ. ಇದರ ವಿಡೀಯೋ ಚಿತ್ರ ಕೂಡ ಮೇಲಾಧಿಕಾರಿಗಳಿಗೆ ಕಳುಹಿಸಿದ್ದಾರೆ. ಜಿಂಕೆ ಸತ್ತ ವಿಚಾರ ಬಂಡೀಪುರ ಸಿಎಫ್, ಗುಂಡ್ಲುಪೇಟೆ ಎಸಿಎಫ್‌ಗೆ ಮರು ದಿನ ಬೆಳಗ್ಗೆ ಮಾಹಿತಿ ಬೇರೆ ಮೂಲಗಳಿಂದ ಸಿಕ್ಕಿದೆ. ಆರ್‌ಎಫ್‌ಒ ಮಂಜುನಾಥ್‌ಗೆ ಜಿಂಕೆ ಸತ್ತ ವಿಚಾರ ಗೊತ್ತಾದ ಬಳಿಕ ಮೇಲಾಧಿಕಾರಿಗಳಿಗೇಕೆ ಮಾಹಿತಿ ನೀಡಲಿಲ್ಲ ಎಂಬ ಪ್ರಶ್ನೆ ಎದ್ದಿದೆ.ಜಿಂಕೆ ಸತ್ತ ವಿಚಾರ ತಿಳಿದ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಡಾ.ಪಿ. ರಮೇಶ್ ಕುಮಾರ್ ಎಸಿಎಫ್ ರವೀಂದ್ರ, ಆರ್‌ಎಫ್‌ಒ ಮಂಜುನಾಥ್ ನೋಟಿಸ್ ಕೊಟ್ಟಿದ್ದಾರೆ. ಎಸಿಎಫ್ ರವೀಂದ್ರ ತನಿಖೆಯ ವರದಿಯಲ್ಲಿ ಡಿಆರ್ ಎಫ್‌ಒ, ಆರ್‌ಎಫ್‌ಒ ಇಬ್ಬರದ್ದು ಕರ್ತವ್ಯ ಲೋಪ ಇದೆ ಎಂದು ಹೇಳಿದ್ದಕ್ಕೆ ಬಂಡೀಪುರ ಸಿಎಫ್ ಡಾ. ರಮೇಶ್ ಕುಮಾರ್ ಎಸಿಎಫ್ ರವೀಂದ್ರಾಗೆ ಮತ್ತೊಂದು ನೋಟೀಸ್ ಕೂಡ ನೀಡಿದ್ದಾರೆ. ಇದಾದ ಬಳಿಕ ತನಿಖೆ ನಡೆಸಿದ ಗುಂಡ್ಲುಪೇಟೆ ಎಸಿಎಫ್ ರವೀಂದ್ರ ಆರ್‌ಎಫ್‌ಒ ಮಂಜುನಾಥ್, ಡಿಆರ್‌ಎಫ್‌ಒ ರಾಮಲಿಂಗಪ್ಪ ಎಸ್ ತಪ್ಪು ಮಾಡಿದ್ದಾರೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೆ ಜಿಂಕೆ ಸತ್ತ ವಿಷಯ ಡಿಆರ್‌ಎಫ್‌ಒ ರಾಮಲಿಂಗಪ್ಪ ಎಸ್ ಅವರು ಬಫರ್ ಜೋನ್ ಆರ್‌ಎಫ್ ಒ ಮಂಜುನಾಥ್ ತಿಳಿಸಿದಾಗ ಜಿಂಕೆ ಸತ್ತ ಸ್ಥಳಕ್ಕೆ ಬಂದಿಲ್ಲ ಜೊತೆಗೆ ಡಿಆರ್‌ಎಫ್‌ಒ ಮರಣೋತ್ತರ ಪರೀಕ್ಷೆ ನಡೆಸದೆ ಜಿಂಕೆ ಸುಟ್ಟು ಹಾಕಿದ್ದಾರೆಂಬ ಕಾರಣಕ್ಕೆ ಅಮಾನತುಪಡಿಸಲಾಗಿದೆ. ಆದರೆ ಜಿಂಕೆ ಸತ್ತ ಬಳಿಕ ಸ್ಥಳಕ್ಕೆ ಆರ್‌ಎಫ್‌ಒ ಭೇಟಿ ನೀಡಬೇಕು, ಬಳಿಕ ವೈದ್ಯಾಧಿಕಾರಿಗೆ ಮರಣೋತ್ತರ ಪರೀಕ್ಷೆಗೆ ಪತ್ರ ಬರೆಯಬೇಕಿತ್ತು ಅದು ಬರೆದಿಲ್ಲ. ಆರ್‌ಎಫ್ ಒಗೆ ಮಾತ್ರ ಮರಣೋತ್ತರ ಪರೀಕ್ಷೆ ಮಾಡಿಸಿ ಎಂದು ವೈದ್ಯರಿಗೆ ಪತ್ರ ಬರೆಯೋ ಅಧಿಕಾರ ಇರುವಾಗ ಡಿಆರ್‌ಎಫ್ ಒ ರಾಮಲಿಂಗಪ್ಪ ಎಸ್‌ಗೆ ಅಮಾನತ್ತಿನ ಶಿಕ್ಷೆ ವಿಧಿಸಿದ್ದು ಯಾಕೆ? ಆರ್‌ಎಫ್‌ಒ ಮರಣೋತ್ತರ ಪರೀಕ್ಷೆಗೆ ಪತ್ರ ಬರೆದಿದ್ದರೂ ಮರಣೋತ್ತರ ಪರೀಕ್ಷೆ ಮಾಡಿಸದೆ ಡಿಆರ್‌ಎಫ್‌ಒ ಜಿಂಕೆ ಸುಟ್ಟು ಹಾಕಿದ್ದರೆ ಕರ್ತವ್ಯ ಲೋಪವಾಗುತ್ತಿತ್ತಲ್ಲವೇ? ಎಸಿಎಫ್ ಹಾಗೂ ಆರ್‌ಎಫ್‌ಒ ಕರ್ತವ್ಯ ಲೋಪ ಮುಚ್ಚಿಕೊಳ್ಳಲು ಡಿಆರ್‌ಎಫ್‌ಒ ಅಮಾನತುಪಡಿಸಿದ್ದಾರೆ? ಅಲ್ಲದೆ ಡಿಆರ್ ಎಫ್‌ಒ ಮೇಲಿನ ವೈಯಕ್ತಿಕ ದ್ವೇಷಕ್ಕೆ ಬಂಡೀಪುರ ಅರಣ್ಯ ಇಲಾಖೆ ಮುಂದಾಗಿದೆಯೇ ಎಂಬ ಅನುಮಾನ ಎದ್ದಿದೆ.
೧೪ ತಿಂಗಳಲ್ಲಿ 4 ಸಲ ನಿಯೋಜನೆ! ೧೪ ತಿಂಗಳಲ್ಲಿ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ರಾಮಲಿಂಗಪ್ಪ ಎಸ್ ಬಂಡೀಪುರ ಅರಣ್ಯ ವಿಭಾಗದಲ್ಲಿ ನಾಲ್ಕು ಬಾರಿ ಅನಗತ್ಯವಾಗಿ ನಿಯೋಜನೆ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆಂಬ ಅನುಮಾನ ಕೇಳಿ ಬಂದಿದೆ. ಉಪ ವಲಯ ಅರಣ್ಯಾಧಿಕಾರಿ ರಾಮಲಿಂಗಪ್ಪ ಎಸ್ ಮದ್ದೂರು ವಲಯದಿಂದ ಬಂಡೀಪುರ ವಿಭಾಗಕ್ಕೆ, ಬಂಡೀಪುರ ವಿಭಾಗದಿಂದ ಮೂಲೆಹೊಳೆ ವಲಯಕ್ಕೆ, ಮೂಲೆಹೊಳೆಯಿಂದ ಎಸ್‌ಟಿಪಿಎಫ್‌ಗೆ, ಎಸ್‌ಟಿಪಿಎಫ್‌ನಿಂದ ಗುಂಡ್ಲುಪೇಟೆ ಬಫರ್ ಜೋನ್ ವಲಯಕ್ಕೆ ನಿಯೋಜನೆ ಮಾಡಿದ್ದಾರೆ.