ಭದ್ರಾವತಿ: ಜಿಂಕೆ ಮಾಂಸ ಮಾರಾಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿ, ಅವರಿಂದ ಸುಮಾರು ೨೦ ಕೆ.ಜಿ ಜಿಂಕೆ ಮಾಂಸ ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಅಂತರಗಂಗೆ ವಿಭಾಗ, ಬೊಮ್ಮನಕಟ್ಟೆ ಬೀಟ್ ವ್ಯಾಪ್ತಿಯ ನಗರದ ಬಿ.ಎಚ್ ರಸ್ತೆ, ಹುತ್ತಾ ಬಸ್ ನಿಲ್ದಾಣದ ಬಳಿ ಹಾಗೂ ೨೦೬ ರಾಷ್ಟ್ರೀಯ ಹೆದ್ದಾರಿ, ಮೂರ್ತಿ ಹೋಟೆಲ್ ಮುಂಭಾಗ ಮಾಂಸ ಮಾರಾಟದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ನಗರಸಭೆ ವ್ಯಾಪ್ತಿಯ ಸೀಗೆಬಾಗಿ, ಸೈಯದ್ ಕಾಲೋನಿ ನಿವಾಸಿ ಮುನ್ನ(೪೫), ಸುರಗಿತೋಪು ೨ನೇ ಕ್ರಾಸ್ ನಿವಾಸಿ ಚಂದ್ರಶೇಖರ್(೪೯) ಮತ್ತು ಹೊಸ ಸಿದ್ದಾಪುರ, ೫ನೇ ಕ್ರಾಸ್ ಮಿಲ್ಕ್ ಡೈರಿ ಬಳಿ ನಿವಾಸಿ ಮೂರ್ತಿ(೫೦) ಬಂಧಿತರಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಕಾಚಗೊಂಡನಹಳ್ಳಿ ಗ್ರಾಮದ ಆರ್ಮುಗಂ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ಕಾಡಿನಲ್ಲಿ ಜಿಂಕೆಯನ್ನು ಭೇಟೆಯಾಡಿ ಕೊಂದು ಅದರ ಮಾಂಸವನ್ನು ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಆರ್ಮುಗಂ ಬಂಧನದ ನಂತರ ನಿಖರ ಮಾಹಿತಿ ತಿಳಿದು ಬರಲಿದೆ.

ವಲಯ ಅರಣ್ಯಾಧಿಕಾರಿ ಕೆ.ಆರ್ ರಾಜೇಶ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿಗಳಾದ ಪಥಕೋಠಿ ಕೃಷ್ಣ ರೆಡ್ಡಿ, ಹನುಮಂತನಾಯ್ಕ, ಕರಿಯಪ್ಪ, ತಳ್ಳಿಕಟ್ಟೆ ಬೀಟ್ ಅರಣ್ಯಪಾಲಕ ಕಾಂತೇಶ್, ಸಿದ್ದಾಪುರ ಬೀಟ್ ಅರಣ್ಯಪಾಲಕ ಎಸ್. ಶಶಿಕುಮಾರ್ ಮತ್ತು ಬೊಮ್ಮನಕಟ್ಟೆ ಬೀಟ್ ಅರಣ್ಯಪಾಲಕ ಸಿ.ಆರ್ ಹರೀಶ್ ಕುಮಾರ್ ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.