ಲಕ್ಷ್ಮೇಶ್ವರ: ಸಮೀಪದ ಆದರಳ್ಳಿ ಗ್ರಾಮದಲ್ಲಿನ ದಂಡಿನ ಮರಿಯಮ್ಮ ದೇವಿಯ ದೇವಸ್ಥಾನದ ಮರಿಯಮ್ಮ ದೇವಿಯ ಮುಖಭಾಗವನ್ನು ದುಷ್ಕರ್ಮಿಗಳು ವಿರೂಪಗೊಳಿಸಿ ವಿಕೃತಿ ಮರೆದಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ಮುಂಡರಗಿ ಸಮೀಪದ ಸಿಂಗಟಾಲೂರು ಗ್ರಾಮದಲ್ಲಿನ ದೇವಸ್ಥಾನದಲ್ಲಿನ ಬಸವಣ್ಣನ ಮೂರ್ತಿಯನ್ನು ಶಿವರಾತ್ರಿಯ ದಿನವೇ ವಿರೂಪಗೊಳಿಸಿರುವ ಘಟನೆ ಮಾಸಿಲ್ಲ. ಅದರ ಬೆನ್ನಲ್ಲೆ ಆದರಳ್ಳಿ ಗ್ರಾಮದ ಘಟನೆ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.

ಆದರಳ್ಳಿ ಗ್ರಾಮಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಪ್ರಯತ್ನ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಪದೇ ಪದೇ ಈ ರೀತಿಯ ಘಟನೆ ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಬೇಸರ ಉಂಟುಮಾಡಿದೆ. ಪೊಲೀಸ್ ಇಲಾಖೆಯು ಕಳೆದ ವಾರ ಮೂರ್ತಿ ಭಂಜಕರ ಪತ್ತೆ ಹಚ್ಚಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೊಂಡಿದ್ದರೆ ಈ ರೀತಿಯ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ ಎಂದು ವಕೀಲ ಬಸವರಾಜ ಬಾಳೇಶ್ವರಮಠ ಬೇಸರ ವ್ಯಕ್ತಪಡಿಸಿದರು. ಈಶ್ವರ ಮೂರ್ತಿ ಭಗ್ನ

ಮುಂಡರಗಿ: ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಬಾಗೇವಾಡಿ ಗ್ರಾಮದ ಮಧ್ಯೆ ಇರುವ ಕಣಿವೆ ಗೋಣಿಬಸವೇಶ್ವರ ದೇವಸ್ಥಾನದ ಈಶ್ವರ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.ಕಣಿವೆ ಗೋಣಿಬಸವೇಶ್ವರ ದೇವಸ್ಥಾನದಲ್ಲಿಯೂ ಈಶ್ವರ ಹಾಗೂ ನಂದಿ ಮೂರ್ತಿಗಳಿದ್ದು, ಈಶ್ವರ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. ಗ್ರಾಮದಲ್ಲಿ ಮಳೆಯಾಗದೇ ಬರ ಬಂದಾಗ ಗ್ರಾಮಸ್ಥರೆಲ್ಲರೂ ಸೇರಿ ಈ ದೇವಸ್ಥಾನಕ್ಕೆ ತೆರಳಿ ಪೂಜೆ ಹಾಗೂ ಅನ್ನಸಂತರ್ಪಣೆ ಮಾಡುತ್ತಾರೆ.ಮಹಾಶಿವರಾತ್ರಿಯ ದಿನವೇ ತಾಲೂಕಿನ ವಿವಿಧೆಡೆ ಹಿಂದೂ ದೇವಸ್ಥಾನಗಳನ್ನೇ ಗುರಿಯಾಗಿಟ್ಟುಕೊಂಡು ಈಶ್ವರ ಹಾಗೂ ನಂದಿ ಮೂರ್ತಿಗಳನ್ನು ಭಗ್ನಗೊಳಿಸುತ್ತಿರುವ ದುರ್ಘಟನೆ ಒಳ್ಳೆಯದಲ್ಲ. ಇವು ಹಿಂದುಗಳ ಭಾವೈಕ್ಯತೆಗೆ ಧಕ್ಕೆ ತರುವಂತಹ ಕಾರ್ಯವಾಗಿದ್ದು, ಪೊಲೀಸರು ಈ ಕುರಿತು ಸೂಕ್ತ ತನಿಖೆ ನಡೆಸಿ ಇಂತಹ ಘಟನೆ ಜರುಗದಂತೆ ಕ್ರಮ ವಹಿಸಬೇಕೆಂದು ಬಿಜೆಪಿ ಮುಖಂಡ, ಮಲ್ಲಿಕಾರ್ಜುನಪುರ ಗ್ರಾಮಸ್ಥ ಕುಮಾರಸ್ವಾಮಿ ಹಿರೇಮಠ ಒತ್ತಾಯಿಸಿದ್ದಾರೆ.