ಸಾರಾಂಶ
ಕೊಪ್ಪಳ: ಜನವಿರೋಧಿಯಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ. ಕೃಷ್ಣಮೂರ್ತಿ ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಚುನಾವಣೆಯ ಬಿಎಸ್‌ಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಸಹ ಆಳ್ವಿಕೆ ನಡೆಸಿವೆ. ಆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಇಂಥ ಕೆಟ್ಟ ಆಡಳಿತವನ್ನು ಕಿತ್ತೊಗೆಯಬೇಕಾಗಿದೆ ಎಂದರು.ಕೊಪ್ಪಳ ಜಿಲ್ಲೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿ ಆಯ್ಕೆಯಾದವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆಯೇ ಹೊರತು ಜನರ ದಾಹ ನೀಗಿಸುವ ಪ್ರಯತ್ನ ಮಾಡಿಲ್ಲ ಎಂದರು.ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ ಜನಪ್ರತಿನಿಧಿಗಳೂ ಭಾಗಿಯಾಗಿದ್ದಾರೆ. ಇಲ್ಲಿಯ ಕೈಗಾರಿಕೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ. ಸ್ಥಳೀಯರಿಗೆ ಉದ್ಯೋಗ ಕೊಡಿಸುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದರು.
ಬಗರಹುಕಂ ಸಾಗುವಳಿ ಭೂಮಿಯನ್ನು ರೈತರಿಗೆ ನೀಡದೆ ಕಾರ್ಖಾನೆಯವರಿಗೆ ನೀಡಿದ್ದಾರೆ. ಇದು ರೈತರಿಗೆ ಮಾಡಿದ ಮೋಸವಾಗಿದೆ. ಇಲ್ಲಿ ಕುಡಿಯೋಕೆ ನೀರು ನೀಡುತ್ತಿಲ್ಲ. ಆದರೆ ಉದ್ಯಮಿಗಳಿಗೆ, ಉದ್ಯಮಗಳಿಗೆ ನೀರು ನೀಡುತ್ತಿದ್ದಾರೆ. ಇಲ್ಲಿಯ ಜನಪ್ರತಿನಿಧಿಗಳಿಗೆ ಪಾಠ ಕಲಿಸಲು ಬಿಎಸ್‌ಪಿ ಬೆಂಬಲಿಸಬೇಕು ಎಂದು ಹೇಳಿದರು.ಕಠಿಣ ಕ್ರಮಕ್ಕೆ ಆಗ್ರಹ: ರಾಜ್ಯದಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಪ್ರಜ್ವಲ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ವೀಡಿಯೋ ಬಿಡುಗಡೆ ಮಾಡಿದ್ದರಿಂದ ಮಹಿಳೆಯರ ಮಾನಕ್ಕೆ ಧಕ್ಕೆಯಾಗಿದೆ. ಇದನ್ನು ಗೌಪ್ಯವಾಗಿಟ್ಟು, ಆರೋಪಿಗಳನ್ನು ಕೂಡಲೇ ಬಂಧಿಸಿ, ಕ್ರಮವಹಿಸಬೇಕು ಎಂದರು.
ಪ್ರಜ್ವಲ್ ರೇವಣ್ಣ ಪರವಾಗಿ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಮೌನವಹಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು. ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನೊಳಗೊಂಡ ಸಮಿತಿಯಿಂದ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಶಿವಪುತ್ರಪ್ಪ ಗುಮಗೇರಿ, ಮೈಲಾರಪ್ಪ ವಕೀಲರು, ಸಂಜೀವಮೂರ್ತಿ, ಶಂಕರ ಸಿದ್ದಾಪುರ ಇದ್ದರು.