ಬಿಜೆಪಿ ಸೋಲಿಸಿ, ದೇಶ ಉಳಿಸಿ: ಡಾ.ರಮೇಶ್

| Published : Apr 04 2024, 01:02 AM IST

ಸಾರಾಂಶ

ಈ ಲೋಕಸಭಾ ಚುನಾವಣೆಯಲ್ಲಿ ದೇಶದ ಹಿತಕೋಸ್ಕರ, ಸಂವಿಧಾನ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸಿ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಸಮಾಜ ಸೇವಕ ಡಾ.ರಮೇಶ್ ಹೇಳಿದರು.

ಚಾಮರಾಜನಗರ: ಈ ಲೋಕಸಭಾ ಚುನಾವಣೆಯಲ್ಲಿ ದೇಶದ ಹಿತಕೋಸ್ಕರ, ಸಂವಿಧಾನ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸಿ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಸಮಾಜ ಸೇವಕ ಡಾ. ರಮೇಶ್ ಹೇಳಿದರು. ನಗರದ ವರ್ತಕರ ಭವನದಲ್ಲಿ ರಾಜ್ಯದ ಪ್ರಗತಿಪರ ಸಂಘಟನೆಗಳು ಏ.1ರಿಂದ ಏ.8ರವರೆಗೆ ಹಮ್ಮಿಕೊಂಡಿರುವ ದೇಶ ಉಳಿಸಿ ಸಂಕಲ್ಪ ಯಾತ್ರೆಯ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸುಳ್ಳಿನ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರನ್ನು ವಂಚಿಸಿ, ಮೌಢ್ಯತೆಯನ್ನು ಬಿತ್ತಿ, ಸಂವಿಧಾನದ ಆಶಯಗಳನ್ನು ಬದಿಗೊತ್ತಿ, ಮನು ಸ್ಮೃತಿಯನ್ನು ಹೇರುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು. ಪ್ರಭುತ್ವದ ವಿವಿಧ ಅಂಗಗಳನ್ನೂ ದೊಡ್ಡ ಮಟ್ಟದಲ್ಲಿ ತಮ್ಮ ವಶಕ್ಕೆ ತೆಗೆದುಕೊಂಡಿವೆ. ಬೆಲೆಗಳನ್ನು ಏರಿಸಿ ಸುಲಿಗೆ ನಡೆಸುತ್ತಾ, ಕಾರ್ಪೋರೇಟ್ ಕಂಪನಿಗಳ ಬೆಳೆಸಿ, ಪ್ರಶ್ನೆ ಮಾಡುವ ಹೋರಾಟಗಾರರು, ಚಿಂತಕರನ್ನು, ಬೇರೆ ಪಕ್ಷದ ರಾಜಕಾರಣಿಗಳನ್ನು ಜೈಲಿಗೆ ತಳ್ಳುತ್ತಿದ್ದಾರೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾ ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ ಎಂದರು.

ಧರ್ಮವನ್ನು ಮನುವಾದಿಕರಿಸುವ, ಒಕ್ಕಲುತನ ಮಾಡಿದ ಸಮುದಾಯಗಳಿಗೆ ವಿಷ ಪಾಷಣ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅಲ್ಪಸಂಖ್ಯಾತರ ಬದುಕು ನವ ಅಸ್ಪೃಶ್ಯರ ಬದುಕಾಗಿ ಬಿಟ್ಟಿದೆ. ಕೂಡಿ ಬಾಳಿದ ಕುಲಗಳ ನಡುವೆ ದ್ವೇಷದ ಗೋಡೆಕಟ್ಟಲು ನಿತ್ಯ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಸಂವಿಧಾನವನ್ನೇ ಬದಲಾಯಿಸುವ ಘೋಷಣೆಗಳನ್ನು ಗಟ್ಟಿ ದನಿಯಲ್ಲಿ ಹೇಳುವ ಮಟ್ಟಕ್ಕೆ ಜೀವ ವಿರೋಧಿ ಶಕ್ತಿಗಳು ಬೆಳೆದು ಬಿಟ್ಟವೆ. ಸಂಸತ್ತನ್ನು ಬದಲಾಯಿಸಲಾಗಿದೆ, ಸಂವಿಧಾನ ಬದಲಾಯಿಸಲು ಕಾಯುತ್ತಿದ್ದಾರೆ. ಪ್ರಜಾತಂತ್ರದ ಕೊಲೆಗೆ ನಮ್ಮಿಂದಲೇ ಸಮ್ಮತಿ ಕೇಳುತ್ತಿದ್ದಾರೆ ಎಂದರು. ಈ ಬಾರಿ ಚುನಾವಣೆ ಮುಂದಿನ 5 ವರ್ಷ ನಮ್ಮನ್ನು ಯಾರು ಆಳುತ್ತಾರೆ ಎಂದು ತೀರ್ಮಾನಿಸುವ ಚುನಾವಣೆ ಅಲ್ಲ, ಬದಲಿಗೆ ನಮ್ಮ ದೇಶ ಸಂವಿಧಾನಿಕ ಪ್ರಜಾತಂತ್ರವಾಗಿ ಉಳಿಯಬೇಕಾ ಅಥವಾ ಮತಾಂಧ ಸರ್ವಾಧಿಕಾರಿ ದೇಶವಾಗಿ ಪರಿವರ್ತನೆಯಾಗಬೇಕಾ ಎಂಬ ಜನಾಭಿಪ್ರಾಯ ಸಂಗ್ರಹ ಆಗಿದೆ. ಈ ಯಾತ್ರೆಯು ರಾಜ್ಯಾದ್ಯಂತ 3 ವಿಭಾಗಗಳಲ್ಲಿ ಹೊರಟು ಏ.8 ರಂದು ಬೆಳಗಾವಿಯಲ್ಲಿ ಸಮಾವೇಶಗೊಳ್ಳಲಿದೆ ಎಂದರು.ರೈತ ಸಂಘದ ರಾಜ್ಯಉಪಾಧ್ಯಕ್ಷ ಮಹೇಶ್ ಪ್ರಭು ಮಾತನಾಡಿ, ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ. ಬೆಳೆಗಳಿಗೆಗೆ ಎಂಎಸ್‌ಪಿ ನಿಗದಿಪಡಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಈ ಕೇಂದ್ರ ಸರ್ಕಾರ ಕಳೆದ 10 ವರ್ಷದಿಂದ ರೈತರನ್ನು ಶೋಷಿಸುತ್ತಾ, ರೈತ ಚಳವಳಿಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಈಗಾಗಲೇ ರೈತ ಸಂಘಟನೆಗಳು ದೇಶಾದ್ಯಂತ ಎನ್‌ಡಿಎಯನ್ನು ಸೋಲಿಸಬೇಕೆಂದು ನಿರ್ಣಯ ಮಾಡಿದ್ದಾರೆ ಎಂದರು. ಆರ್. ನಾಗೇಶ್, ಅಬ್ರಾಹಂ ಡಿ. ಸಿಲ್ಪ ಮಾತನಾಡಿದರು.