ಕೋಮುವಾದಿ ಬಿಜೆಪಿಯನ್ನು ಸೋಲಿಸಿ: ಡಿ.ಎಚ್.ಪೂಜಾರ್‌

| Published : Apr 18 2024, 02:23 AM IST

ಸಾರಾಂಶ

ಅಚ್ಛೇ ದಿನ ಯಾರಿಗೆ ಬಂದಿದೆ ಎಂದು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಅಂಚಾಲಕ ಡಿ.ಎಸ್.ಪೂಜಾರ್‌ ಪ್ರಶ್ನಿಸಿದರು. ಸಿಂಧನೂರಿನಲ್ಲಿ ಬಿಜೆಪಿ ಸೋಲಿಸಿ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಜನರಲ್ಲಿ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಪರಸ್ಪರ ಒಡೆದಾಳುವ ಮೂಲಕ, ದೇಶದ ನೆಲ, ಜಲ, ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಲೂಟಿ ಹೊಡೆಯಲು ಮುಕ್ತ ಅವಕಾಶ ನೀಡಿರುವ ಕಾರ್ಪೊರೇಟ್ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದು ಎಲ್ಲರ ಹೊಣೆ ಎಂದು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಸಂಚಾಲಕ ಡಿ.ಎಚ್.ಪೂಜಾರ್ ಹೇಳಿದರು.

ನಗರದ ಪಿಎಲ್ಡಿ ಬ್ಯಾಂಕ್ ಬಳಿ ಇರುವ ಗಡಿಯಾರ ಚೌಕ್‌ನಲ್ಲಿ ಬುಧವಾರ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ಚುನಾವಣಾ ಜಾಗೃತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ‘ಕೋಮುವಾದಿ ಬಿಜೆಪಿ ಸೋಲಿಸಿ, ಸಂವಿಧಾನ, ಸಾಮರಸ್ಯ, ಸಾಮಾಜಿಕ ನ್ಯಾಯವನ್ನು ರಕ್ಷಿಸಿ’ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮೋದಿ ಮತ್ತು ಬಿಜೆಪಿ ಸರ್ಕಾರ ಬಡವರ ಬದುಕನ್ನು ಕಿತ್ತಿ ತಿನ್ನಲು ಮತ್ತೆ ಹೊಂಚು ಹಾಕಿದೆ. ಹತ್ತು ವರ್ಷಗಳ ಹಿಂದೆ ಭರವಸೆಗಳ ಗೋಪುರಗಳನ್ನೇ ತೋರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳಂತೆ ನಡೆದುಕೊಂಡಿದೆಯೇ ? ಅಚ್ಛೇ ದಿನಗಳು ಯಾರಿಗೆ ಬಂದವು ಎಂದು ಪ್ರಶ್ನಿಸಿದರು.

ಮಾತು ಮಾತಿಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುವ ಪ್ರಧಾನಿಯವರು ಅದಾನಿ, ಅಂಬಾನಿ ಕಾ ವಿಕಾಸ ಮಾಡಿ, ಬಡವರನ್ನು ವಿನಾಶದ ಅಂಚಿಗೆ ತಂದಿದ್ದಾರೆ. ನೋಟ್ ಬ್ಯಾನ್, ಅವೈಜ್ಞಾನಿಕ ಜಿಎಸ್ಟಿ ಜಾರಿಗೆ ತಂದು ಶ್ರೀಸಾಮಾನ್ಯನ ತಲೆಯ ಮೇಲೆ ಬಿಜೆಪಿ ಕಲ್ಲು ಚಪ್ಪಡಿ ಎಳೆದಿದೆ. ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆ ಶೇ.30ರಿಂದ ಶೇ.22ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೇ ಕಂಪನಿಗಳ ಮಾಲೀಕರ 14.50 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಭ್ರಷ್ಟಾಚಾರ ಮುಕ್ತ ಮಾಡುವುದಾಗಿ ಆಡಳಿತಕ್ಕೆ ಬಂದ ಬಿಜೆಪಿ ಇಡಿ, ಐಟಿ, ಸಿಬಿಐಗಳನ್ನು ಕಂಪನಿಗಳ ಮೇಲೆ ಛೂಬಿಟ್ಟು ಚುನಾವಣಾ ಬಾಂಡ್ ಮೂಲಕ 8,532 ಕೋಟಿ ಹಫ್ತಾ ವಸೂಲಿ ಮಾಡಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾಲಕರಾದ ಡಿ.ಎಚ್.ಕಂಬಳಿ, ದೇವೇಂದ್ರಗೌಡ, ಚಂದ್ರಶೇಖರ ಗೊರಬಾಳ, ಬಿ.ಎನ್.ಯರದಿಹಾಳ, ನಾಗರಾಜ ಪೂಜಾರ್, ಹುಸೇನ್ಸಾಬ್, ವೆಂಕನಗೌಡ ಗದ್ರಟಗಿ, ಗೋಪಾಲಕೃಷ್ಣ, ಮುದ್ದನಗೌಡ ಮುದ್ದಾಪುರ, ಬಸವರಾಜ ಕೊಂಡೆ, ಅಮೀನ್ಸಾಬ್, ಜಗದೀಶ್, ಬಸವರಾಜ ಬಾದರ್ಲಿ, ಸಮ್ಮದ್ ಚೌದ್ರಿ, ರಮೇಶ ಪಾಟೀಲ್ ಬರ್ಗಿ ಸೇರಿದಂತೆ ಇನ್ನಿತರರು ಇದ್ದರು.