ಕೂಡ್ಲಿಗಿಯಲ್ಲಿ ಶಿಕ್ಷಣ ಇಲಾಖೆ ಅಧೋಗತಿಗೆ: ಶಾಸಕ ಶ್ರೀನಿವಾಸ್

| Published : Nov 17 2024, 01:20 AM IST

ಸಾರಾಂಶ

ಮುಂದಿನ ದಿನಗಳಲ್ಲಿ ನೀವು ತಿದ್ದಿಕೊಳ್ಳದಿದ್ದರೆ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು.

ಕೂಡ್ಲಿಗಿ: ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ, ಬೀಡಿ, ಸಿಗರೇಟ್, ಮದ್ಯಪಾನದಂಥ ಅಶಿಸ್ತು ತೋರುವ ಕುರಿತು ಏನು ಕ್ರಮ ಕೈಗೊಂಡಿದ್ದೀರಿ? ಎಂದು ಬಿಇಒ ಪದ್ಮನಾಭ ಕರಣಂಗೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತೀವ್ರ ತರಾಟೆಗೆ ತೆಗೆದುಕೊಂಡರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕೂಡ್ಲಿಗಿ ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಅಧೋಗತಿಗೆ ಬಂದಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹತ್ತು ಹಲವು ನಿದರ್ಶನಗಳು ಇವೆ. ಮುಂದಿನ ದಿನಗಳಲ್ಲಿ ನೀವು ತಿದ್ದಿಕೊಳ್ಳದಿದ್ದರೆ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಬಿಇಒಗೆ ಎಚ್ಚರಿಸಿದರು. ಎಲ್ಲ ಶಾಲೆಗಳಲ್ಲೂ ಮಕ್ಕಳ ಸುರಕ್ಷತಾ ಸಮಿತಿ ರಚಿಸಲು ಸೂಚಿಸಲಾಗಿದೆ. ಯಾವುದೇ ಪ್ರಕರಣ ಬಂದರೂ ತುರ್ತು ಕ್ರಮಕೈಗೊಳ್ಳಲಾಗುವುದು ಎಂದರು.

ತಾಲೂಕಿಗೆ ಬೇರೆ ಕಡೆಯಿಂದ ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದು, ಪಟ್ಟಣ ಸೇರಿ ನಾನಾ ಕಡೆ ಕನಿಷ್ಠ ಸೌಲಭ್ಯವೂ ಇಲ್ಲವೆಂಬ ಆರೋಪವನ್ನು ಅಳಿಸಿ ಹಾಕಿ ಅಭಿವೃದ್ಧಿ ಮಾಡಬೇಕೆಂಬ ವಿಷಯದಲ್ಲಿ ಅಧಿಕಾರಿಗಳ ಅಸಡ್ಡೆ ಮನೋಭಾವ ಮುಂದುವರಿದಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವ ಮೊಟ್ಟೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಿದೆ ಎಂದು ಬಿಇಒ ಪದ್ಮನಾಭ ಕರಣಂ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಕೆ.ಜಿ.ಆಂಜನೇಯ ತಿಳಿಸಿದರು.

ತಾಲೂಕಿನಲ್ಲಿ ಕೆಲವೆಡೆ ನೀರು ಶುದ್ಧೀಕರಣ ಘಟಕಗಳ ದುರಸ್ತಿಯಾಗಿಲ್ಲ. ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಮುಗಿದಿಲ್ಲ ಎಂದು ಶಾಸಕರು ಕೇಳಿದ್ದಕ್ಕೆ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪ್ರಸನ್ನ ಉತ್ತರಿಸಿ, ಕೆಲ ಶುದ್ಧ ಕುಡಿವ ನೀರಿನ ಘಟಕಗಳ ದುರಸ್ತಿ ಆಗಬೇಕಿದೆ. 56 ಘಟಕಗಳನ್ನು ಗ್ರಾಪಂಗಳು ನಿರ್ವಹಿಸುತ್ತಿವೆ. ಜೆಜೆಎಂನಡಿ 212 ಕಾಮಗಾರಿಗಳಿದ್ದು, 54 ಊರುಗಳಲ್ಲಿ ಕಾಮಗಾರಿ ಮುಗಿದಿದ್ದು, 67 ಪ್ರಗತಿಯಲ್ಲಿವೆ. ಅನುದಾನ ಬಿಡುಗಡೆ ವಿಳಂಬದಿಂದ ಕೆಲವೆಡೆ ಕಾಮಗಾರಿ ನಿಂತಿವೆ ಎಂದು ಎಇಇ ಪ್ರಸನ್ನ ಉತ್ತರಿಸಿದರು. ಪಾವಗಡ ಮಾರ್ಗದ ಕುಡಿಯುವ ನೀರಿನ ಯೋಜನೆ ತಾಲೂಕಿನಲ್ಲಿ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

ಚಿಕ್ಕಜೋಗಿಹಳ್ಳಿ ತಾಂಡಾ ಬಳಿಯ ಕೆರೆ ನಿರ್ಮಾಣದಿಂದ ಕುಡಿವ ನೀರು ಸರಬರಾಜಿನ 6 ಬೋರ್‌ವೆಲ್‌, ಎರಡು ವಿದ್ಯುತ್ ಪರಿವರ್ತಕಗಳು ತೊಂದರೆಯಾಗಿದೆ. ಚೌಡಾಪುರದಲ್ಲಿ ಕುಡಿವ ನೀರಿನ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕವಾಗಿಲ್ಲ ಎಂದು ಗ್ರಾಪಂ ಪಿಡಿಒಗಳು ಶಾಸಕರ ಗಮನಕ್ಕೆ ತಂದರು. ಈ ಕುರಿತು ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ಎಇಇ ಪ್ರಸನ್ನ, ಜೆಸ್ಕಾಂ ಎಇಇ ಏಕಾಂತರೆಡ್ಡಿ ಅವರಿಗೆ ಶಾಸಕರು ಸೂಚಿಸಿದರು.

ಅಕ್ಟೋಬರ್‌ನಲ್ಲಿ ಸುರಿದ ನಿರಂತರ ಮಳೆಯಿಂದ 144 ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿಯಾಗಿರುವುದು ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ಧೇಶಕರಾದ ವಾಮದೇವ ಕೊಳ್ಳಿ ತಿಳಿಸಿದರೆ, 21 ಹೆಕ್ಟೇರ್‌ಗೂ ಹೆಚ್ಚು ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಎಡಿಎಚ್ ತೋಟಯ್ಯ ಅವರು ಶಾಸಕರಿಗೆ ವರದಿ ಸಲ್ಲಿಸಿದರು.

ಕೆಕೆಆರ್‌ಡಿಬಿ ಯೋಜನೆಯಡಿ ತಾಲೂಕಿನಲ್ಲಿ ಶೀತಲೀಕರಣ ಘಟಕವನ್ನು ನಿರ್ಮಿಸಲು ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಶಾಸಕರು ತಿಳಿಸಿದರು. ಇದಲ್ಲದೆ, ಪಿಡಬ್ಲುಡಿ, ಸಮಾಜ ಕಲ್ಯಾಣ, ಆಹಾರ ಸೇರಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ, ತಾಪಂ ಇಒ ನರಸಪ್ಪ, ತಹಸೀಲ್ದಾರ್ ಎಂ.ರೇಣುಕಾ, ಕೊಟ್ಟೂರು ತಹಸೀಲ್ದಾರ್ ಜಿ.ಕೆ.ಅಮರೇಶ್, ಕೊಟ್ಟೂರು ತಾಪಂ ಇಒ ಕುಮಾರ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.