ಕನ್ನಡಪ್ರಭ ವಾರ್ತೆ, ಬೆಂಗಳೂರು

ವಿದ್ಯಾರ್ಥಿಗಳ ಪದವಿ, ಜ್ಞಾನ ಉದ್ಯೋಗಕ್ಕೆ ಮಾತ್ರ ಸೀಮಿತವಾಗಬಾರದು. ಅಸಮಾನತೆ ಹೋಗಲಾಡಿಸಿ ಸಮ ಸಮಾಜ ನಿರ್ಮಾಣ, ದೇಶದ ಪ್ರಗತಿಗೆ ಬಳಕೆಯಾಗಬೇಕು ಎಂದು ರಾಜ್ಯಪಾಲ ಥಾವರ್ ಚಂದ್‌ ಗೆಹಲೋತ್‌ ಸಲಹೆ ನೀಡಿದರು.

ನಗರದ ಜ್ಞಾನಭಾರತಿ ಕ್ಯಾಂಪಸ್‌ನ ಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯದಲ್ಲಿ(ಬೇಸ್‌) ನಡೆದ ಎರಡನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪದವೀಧರರಾಗುವುದು ಮುಖ್ಯವಲ್ಲ. ತಾವು ಕಲಿತ ವಿದ್ಯೆ, ಜ್ಞಾನವನ್ನು ಉದ್ಯೋಗಕ್ಕೆ ಅಥವಾ ಉದ್ಯಮ ನಡೆಸಲು ಬಳಸಿದರೆ ಸಾಲದು. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು, ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆ, ಮೇಲು ಕೀಳೆಂಬ ತಾರತಮ್ಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಸಮಾನತೆಗಳನ್ನು ಹೋಗಲಾಡಿಸಿ ಎಲ್ಲರೂ ಸಮಾನರು ಎಂಬ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಆಗ ಮಾತ್ರ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಆಶಯ ಈಡೇರಿದಂತಾಗುತ್ತದೆ ಎಂದರು.

ಭಾರತ ಯೋಜನಾ ಆಯೋಗದ ಮಾಜಿ ಸದಸ್ಯ ಪ್ರೊ. ಬಾಲಚಂದ್ರ ಮುಂಗೇಕರ್ ಮಾತನಾಡಿ, ಇಂದಿನ ಜಾಗತಿಕ ಉದ್ಯೋಗ ಮಾರುಕಟ್ಟೆಯ ಬದಲಾವಣೆಗಳಿಗೆ ಹೊಂದಿಕೊಂಡು ಶಿಕ್ಷಣ ವ್ಯವಸ್ಥೆ ರೂಪಾಂತರಗೊಳ್ಳಬೇಕಿದೆ. ಕೃತಕ ಬುದ್ಧಿಮತ್ತೆ, ಡೇಟಾ ವಿಶ್ಲೇಷಣೆ ಹಾಗೂ ಡಿಜಿಟಲ್ ಸಾಧನಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವ ಪಡೆದುಕೊಳ್ಳುತ್ತಿವೆ. ತಂತ್ರಜ್ಞಾನವು ಸಾಮಾಜಿಕ ಬದಲಾವಣೆಯ ಪ್ರಮುಖ ಚಾಲಕವಾಗಿದ್ದು, ವಿದ್ಯಾರ್ಥಿಗಳು ಅದನ್ನು ಅರ್ಥಮಾಡಿಕೊಳ್ಳಬೇಕು. ಪದವಿ ಪಡೆದ ವಿದ್ಯಾರ್ಥಿಗಳು ಉದ್ಯೋಗಕ್ಕೆ ತಕ್ಕ ಕೌಶಲ್ಯಗಳನ್ನು ಹೊಂದಿರಬೇಕು. ಸರ್ಕಾರಗಳಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗ ಒದಗಿಸುವುದು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಉದ್ಯಮಶೀಲತೆ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಯಂ ಉದ್ಯೋಗ ಹಾಗೂ ಸ್ಟಾರ್ಟ್‌ಅಪ್ ಸಂಸ್ಕೃತಿ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ಬೇಸ್‌ ಕುಲಪತಿ ಪ್ರೊ. ವಿಶ್ವನಾಥ್, ಕುಲಸಚಿವೆ ಮಮತಾ ದೇವಿ ಜಿ.ಎಸ್., ಪರೀಕ್ಷಾ ನಿಯಂತ್ರಕ ಡಾ. ಮುಹಮ್ಮದ್ ಶಮೀರ್ ಕೆ., ಹಣಕಾಸು ಅಧಿಕಾರಿ ಪ್ರಶಾಂತ್ ಕುಮಾರ್ ಎಂ.ವಿ.ಹಾಜರಿದ್ದರು.


ಘಟಿಕೋತ್ಸವದಲ್ಲಿ 6 ಮಂದಿಗೆ ಚಿನ್ನ 17 ವಿದ್ಯಾರ್ಥಿಗಳಿಗೆ ರ್‍ಯಾಂಕ್ ಪತ್ರಡಾ.ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಮೇಘನಾ ಬಿ.ಪ್ರಶೀದ್, ಪಾರ್ವತಿ ಜಿ.,ಗೌರಿ ಅಗರ್‌ವಾಲ್, ದಿವ್ಯಾ ಯು.,ನೇಹಾ ಎಂ., ಪ್ರಿಯಾಂಶು ಶೇಖರ್ ಸೇರಿದಂತೆ 6 ಮಂದಿಗೆ ಚಿನ್ನದ ಪದಕಗಳು ನೀಡಲಾಯಿತು. 17 ವಿದ್ಯಾರ್ಥಿಗಳಿಗೆ ರ್‍ಯಾಂಕ್ ಪ್ರಮಾಣ ಪತ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.ಪ್ರಕಸ್ತ ಸಾಲಿನಿಂದ 6 ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ 3 ವರ್ಷದ ಬಿಎಸ್‌ಸಿ ಡೇಟಾ ಅನಾಲಿಟಿಕ್ಸ್, 2 ವರ್ಷದ ಎಂಎಸ್‌ಸಿ ಡೇಟಾ ಅನಾಲಿಟಿಕ್ಸ್, 5 ವರ್ಷದ ಸಂಯೋಜಿತ ಎಂಎ ಅರ್ಥಶಾಸ್ತ್ರ, 2 ವರ್ಷದ ಎಂಎ ಅರ್ಥಶಾಸ್ತ್ರ, ಎಂಎಸ್‌ಸಿ ಅಭಿವೃದ್ಧಿ ಅರ್ಥಶಾಸ್ತ್ರ ಹಾಗೂ ಎಂಎಸ್‌ಸಿ ಸಾರ್ವಜನಿಕ ನೀತಿ ಸೇರಿವೆ. ಅಂತಾರಾಷ್ಟ್ರೀಯ ಸಹಕಾರ ವಿಸ್ತರಿಸುವ ಉದ್ದೇಶದಿಂದ ದೇಶೀಯ ಮತ್ತು ವಿದೇಶಿಯ 15ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

- ಪ್ರೊ. ವಿಶ್ವನಾಥ್, ಬೇಸ್‌ ಕುಲಪತಿ