ಬಜೆಟ್‌ ಮಂಡನೆಯಲ್ಲಿ ವಿಳಂಬ: ಕೆಎಂಸಿ ಕಾಯ್ದೆ ಉಲ್ಲಂಘನೆ ಭೀತಿ!

| Published : Mar 27 2025, 01:05 AM IST

ಸಾರಾಂಶ

Delay in budget presentation: Fear of violation of KMC Act!

-ಫೆಬ್ರವರಿಯಲ್ಲೇ ಬಜೆಟ್‌ ಸಿದ್ಧಗೊಂಡು ಮಂಡನೆಯಾಗಬೇಕು, ಮಾರ್ಚ್‌ ಮುಗಿದ್ರು ಸುದ್ದಿ ಇಲ್ಲ

-ವೇಳಾಪಟ್ಟಿಯಂತೆ ಕೆಲಸವಿಲ್ಲ, ಈಗ ಸಮಸ್ಯೆ ಕಾಡುವ ಆತಂಕ

----

ಕನ್ನಡಪ್ರಭ ವಾರ್ತೆ, ಕಲಬುರಗಿ

ತನ್ನ ವಾರ್ಷಿಕ ಆದಾಯ ಹಾಗೂ ವೆಚ್ಚದ ಮಾಹಿತಿ, ಯೋಜನೆಗಳ ನೋಟವಿರುವಂತಹ ಆಯವ್ಯಯ ಪತ್ರ ಮಂಡಿಸದೆ ಮಹಾನಗರ ಪಾಲಿಕೆ ತೋರಿರುವ ವಿಳಂಬ ನೀತಿಯಿಂದಾಗಿ ಪಾಲಿಕೆಯಲ್ಲಿ ಹೊಸ ಬಿಕ್ಕಟ್ಟು ಹುಟ್ಟಿಕೊಳ್ಳುವ ಆತಂಕ ಮೂಡಿಸಿದೆ.

ಪೌರಾಡಳಿತ ಕಾಯ್ದೆ-1976ರ ಅನ್ವಯ ಫೆಬ್ರುವರಿ ಮೊದಲ ವಾರ ಬಜೆಟ್‌ ಸಿದ್ಧಗೊಂಡು ಕೌನ್ಸಿಲರ್‌ಗಳ ಕೈ ಸೇರಬೇಕು, ಫೆಬ್ರುವರಿ 15ರೊಳಗಾಗಿ ಬಜೆಟ್‌ ಸಾಮಾನ್ಯ ಸಭೆಯೊಳಗೆ ಮಂಡನೆಯಾಗಬೇಕು.

ಆದರೆ, ವಾಸ್ತವದಲ್ಲಿ ಕಾಯಿದೆಯಂತೆ ಯಾವುದೂ ಆಗಿಲ್ಲ, ಮಾರ್ಚ್‌ ಮುಗೀತ ಬಂದರೂ ಬಜೆಟ್ ಸಿದ್ಧಗೊಂಡು ಕೌನ್ಸಿಲರ್‌ ಕೈ ಸೇರಿಲ್ಲ, ಅಷ್ಟೇ ಯಾಕೆ ಪಾಲಿಕೆಯ ಕರ, ಹಣಕಾಸು ಸ್ಥಾಯಿ ಸಮಿತಿ ಮುಂದೆಯೂ ಸಿದ್ಧಗೊಂಡ ಬಜೆಟ್‌ ಪ್ರತಿಯೂ ಚರ್ಚೆಯಾಗಿಲ್ಲ.

ಹೀಗಾಗಿ ಈ ಬಜೆಟ್‌ ತುಂಬ ವಿಳಂಬವಾಗಿರೋದರಿಂದ ಏಪ್ರಿಲ್‌ ನಿಂದಲೇ ಪಾಲಿಕೆಯಲ್ಲಿ ಆರ್ಥಿಕವಾಗಿ ಖರ್ಚು, ವೆಚ್ಚದ ವಿಚಾರದಲ್ಲಿ ಹಲವು ಕಾನೂನಾತ್ಮಕ ತೊಂದರೆಗಳು ಕಾಡುವ ಆತಂಕ ಹೆಚ್ಚುವಂತೆ ಮಾಡಿದೆ.

ವಿಳಂಬಕ್ಕೇನು ಕಾರಣ?: ಪಾಲಿಕೆ ಬಜೆಟ್‌ ಸಿದ್ದಪಡಿಸಿ ಮಂಡಿಸಲು ಯಾಕೆ ವಿಳಂಬವಾಗಬೇಕು ವಾರ್ಷಿಕ ಪ್ರಕ್ರಿಯೆ ಇದಾಗಿರೋದರಿಂದ ಅದನ್ನು ಏಕೆ ವಿಳಂಬವಾಗಲು ಬಿಡಬೇಕು? ಎಂಬ ಪ್ರಶ್ನೆಗಳಿಗೆ ಪಾಲಿಕೆಯ ಬಳಿ ನಿಖರ ಉತ್ತರವಿಲ್ಲ.

ಇಲ್ಲಿ ಮೊದಲಿದ್ದ ಆಯುಕ್ತರ ವರ್ಗವಾಯ್ತು, ನಂತರ ಇಲ್ಲೇ ಇದ್ದ ಉಪ ಆಯುಕ್ತರೇ ಆಯುಕ್ತರಾಗಿ ಬಂದರು. ಈ ವರ್ಗಾವಣೆಯೇ ವಿಳಂಬಕ್ಕೆ ಕಾರಣ ಎಂಬುದು ಹಲವರು ಹೇಳುತ್ತಿದ್ದಾರೆ. ಆದರೆ, ಇಲ್ಲಿದ್ದವರೇ ಆಯುಕ್ತರಾಗಿ ಬಂದಿರುವುದರಿಂದ ಪಾಲಿಕೆಯ ವ್ಯವಹಾರಗಳನ್ನೆಲ್ಲ ಬಲ್ಲವರೇ ಆಯುಕ್ತರಾಗಿದ್ದರೂ ವಿಳಂಬ ಯಾಕೆ? ಎಂಬ ಪ್ರಶ್ನೆಗೆ ಉತ್ತರವಿಲ್ಲ.

----------

ಡಿಸೆಂಬರ್‌ನಲ್ಲೇ ಸಲಹೆ ಆಲಿಸಬೇಕು: ಪಾಲಿಕೆ ಬಜೆಟ್ ಸಿದ್ಧಪಡಿಸುವಾಗ ಸಾರ್ವಜನಿಕರು, ಸಂಘ- ಸಂಸ್ಥೆಗಳಿಂದ ಅಹವಾಲು ಆಲಿಸಬೇಕು, ಈ ಅಹವಾಲು ಆಲಿಸುವ ಪ್ರಕ್ರಿಯೆ ಡಿಸೆಂಬರ್‌ನಲ್ಲೇ ಮಾಡಿ ಮುಗಿಸಬೇಕು, ನಂತರ ಸಲಹೆ, ಸೂಚನೆಗಳಂತೆಯೇ ಬಜೆಟ್‌ ಸಿದ್ಧಪಡಿಸಿ ಆಯುಕ್ತರಾದವರು ಹಣಕಾಸು ಸ್ಥಾಯಿ ಸಮಿತಿ ಮಂದೆ ತಂದು ಅನುಮೋದನೆ ಪಡೆದು ಅದನ್ನು ಅಚ್ಚು ಹಾಕಿ ಕೌನ್ಸಿಲರ್‌ಗೆ ಓದಲು ನೀಡಬೇಕು. ನಂತರ ಸಭೆಯಲ್ಲಿ ಮಂಡಿಸಬೇಕು

ಆದರೆ, ಇಲ್ಲಿ ಬಜೆಟ್‌ ಪ್ರಕ್ರಿಯೆಯ ಈ ಮೇಲಿನ ಸಂಗತಿಗಳಲ್ಲಿ ಯಾವುದೂ ಕೆಎಂಸಿ ಕಾನೂನಿನಂತೆ ನೆಡದಿಲ್ಲ. ಎಲ್ಲವೂ ಆಯೋಮಮಯ. ಹೀಗಾಗಿ ಕಲಬುರಗಿ ಪಾಲಿಕೆ ಬಜೆಟ್‌ ಸಿದ್ಧಪಡಿಸುವ ಒಟ್ಟಾರೆ ಪ್ರಕ್ರಿಯೆ ಹಳಿ ಬಿಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪಾಲಿಕೆಯ ಆದಾಯ, ವೆಚ್ಚದ ಲೆಕ್ಕ ಮಾಡುವ ಹಾಗೂ ಆ ಮೂಲಕ ನಗರ ಯೋಜನೆಗೆ ಭದ್ರ ಬುನಾದಿ ಹಾಕಬೇಕಿರುವ ಪಾಲಿಕೆಯ ಬಜೆಟ್‌ ಸಿದ್ಧಪಡಿಸುವ ಕೆಲಸವೇ ಹೀಗೆ ಅಲಕ್ಷಕ್ಕೊಳಗಾದರೆ ಹೇಗೆ? ಎಂಬ ಪ್ರಶ್ನೆಗಳು ಮೂಡಿವೆ. ಇದಕ್ಕೆಲ್ಲ ಪಾಲಿಕೆಯೇ ಉತ್ತರಿಸಬೇಕಿದೆ.

.....ಕೋಟ್‌....

ಬಜೆಟ್‌ ಫೆ.15ರೊಳಗೆ ಮಂಡಿಸಬೇಕಿತ್ತು. ವಿಳಂಬವಾಗಿದೆ. ಹೊಸ ಕಮಿಷನರ್‌ ಬಂದಿದ್ದಾರೆ. ಈ ಬಗ್ಗೆ ಸರ್ಕಾರದಿಂದಲೂ ಪಾಲಿಕೆಗೆ ಪತ್ರ ಬಂದಿದೆ. ಇದೀಗ ಬಜೆಟ್ ಸಿದ್ಧವಾಗಿದ್ದು ಹಣಕಾಸು ಸ್ಥಾಯಿ ಸಮಿತಿ ಮುಂದಿದೆ. ಆದಷ್ಟು ಬೇಗ ಮಂಡಿಸುತ್ತೇವೆ.

- ಯಲ್ಲಪ್ಪ ನಾಯಿಕೋಡಿ, ಮೇಯರ್‌, ಕಲಬುರಗಿ ಮಹಾನಗರ ಪಾಲಿಕೆ

-------------

....ಕೋಟ್‌.....

ಕಲಬುರಗಿ ಮಹಾನಗರದ ಪ್ರಗತಿಗೆ ಬಜೆಟ್‌ ದಾಖಲೆ ಮುಖ್ಯವಾಗಿರುತ್ತದೆ. ಪಾಲಿಕೆಯ ಖರ್ಚು, ವೆಚ್ಚ ಇವೆಲ್ಲವೂ ಬಜೆಟ್‌ ದಾಖಲೆ ಹೊಂದಿರುತ್ತದೆ. ಇದರಿಂದ ಪಾಲಿಕೆಯ ಕೆಲಸಗಳ ಬಗ್ಗೆ ಜನ ಅರಿಯಲಾಗುತ್ತದೆ. ಆದರಿಲ್ಲಿ ಬಜೆಟ್‌ ಮಂಡನೆಗೆ ಈ ಹಣಕಾಸು ವರ್ಷದಲ್ಲಿ ಕಸರತ್ತೇ ನಡೆದಿಲ್ಲ ಎಂಬುದು ದುರಂತ. ಹೀಗಾದರೆ ಪಾಲಿಕೆಯಿಂದ ಇನ್ನೇನು ನಿರೀಕ್ಷೆ ಮಾಡಬೇಕು ಹೇಳಿ?

-ದೀಪಕ ಗಾಲಾ, ಸಾಮಾಜಿಕ ಕಾರ್ಯಕರ್ತರು, ಕಲಬುರಗಿ.

----------

ಫೋಟೋ- ಕಲಬುರಗಿ ಸಿಟಿ ಕಾರ್ಪೋರೇಷನ್‌

---