ಸಾರಾಂಶ
ಗಂಗಾವತಿ ವಾಲ್ಮೀಕಿ ವೃತ್ತದಿಂದ ಜಯನಗರ ಬಡಾವಣೆ ಸಂಪರ್ಕಿಸುವ ರಸ್ತೆ ವಿಸ್ತರಿಸಲಾಗಿದೆ. ಗಂಗಾವತಿ ಕಲ್ಮಠದ 21 ಗುಂಟೆ ಹಾಗೂ ವಿರೂಪಾಕ್ಷಪ್ಪ ಎಂಬುವರ 11 ಗುಂಟೆ ಜಾಗವನ್ನು ನಗರಸಭೆ ಭೂ ಮಾಲೀಕರಿಗೆ ನೋಟಿಸ್ ನೀಡದೆ ಒತ್ತುವರಿ ಮಾಡಿದೆ.
ಗಂಗಾವತಿ:
ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಗಂಗಾವತಿ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕಾರು ಜಪ್ತಿ ಮಾಡಲು ಹೋಗಿದ್ದ ವೇಳೆ ಜಿಲ್ಲಾಧಿಕಾರಿ ಕೀ ನೀಡದೆ ಇರುವುದರಿಂದ ವಾಪಸ್ ಬಂದಿದ್ದಾರೆ.ಇಲ್ಲಿಯ ನಗರಸಭೆ ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡದ ಕಾರಣ ಜಿಲ್ಲಾಧಿಕಾರಿ ಕಾರು ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು.
ಆಗಿದ್ದೇನು?:ಗಂಗಾವತಿ ವಾಲ್ಮೀಕಿ ವೃತ್ತದಿಂದ ಜಯನಗರ ಬಡಾವಣೆ ಸಂಪರ್ಕಿಸುವ ರಸ್ತೆ ವಿಸ್ತರಿಸಲಾಗಿದೆ. ಗಂಗಾವತಿ ಕಲ್ಮಠದ 21 ಗುಂಟೆ ಹಾಗೂ ವಿರೂಪಾಕ್ಷಪ್ಪ ಎಂಬುವರ 11 ಗುಂಟೆ ಜಾಗವನ್ನು ನಗರಸಭೆ ಭೂ ಮಾಲೀಕರಿಗೆ ನೋಟಿಸ್ ನೀಡದೆ ಒತ್ತುವರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂ ಮಾಲೀಕರು ತಮಗೆ ಅನ್ಯಾಯವಾಗಿದ್ದು ಪರಿಹಾರ ನೀಡಬೇಕೆಂದು ನ್ಯಾಯಾಲಯ ಮೆಟ್ಟಿಲೇರಿದ್ದರು. ಇದಕ್ಕೆ ನ್ಯಾಯಾಲಯವು ಕಲ್ಮಠ ಸಂಸ್ಥೆಗೆ ₹ 7,94,204 ಮತ್ತು ವಿರೂಪಾಕ್ಷಪ್ಪ ಅವರಿಗೆ ₹ 5,45,904 ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿತ್ತು. ಆದರೆ, ಸಕಾಲಕ್ಕೆ ಪರಿಹಾರ ನೀಡದ ಕಾರಣ ಚರಾಸ್ತಿ ಜಪ್ತಿಗೆ ನ್ಯಾಯಾಧೀಶ ರಮೇಶ ಗಾಣಿಗೇರ್ ಆದೇಶಿದ್ದಾರೆ.
ಆದೇಶದ ಮೇರೆಗೆ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಕಾರು ಜಪ್ತಿ ಮಾಡಲು ಹೋಗಿದ್ದ ವೇಳೆ ಜಿಲ್ಲಾಧಿಕಾರಿ ಕೀ ನೀಡದೆ ವಾಪಸ್ ಕಳಿಸಿದ್ದಾರೆ. ಅಲ್ಲದೇ ಎಸ್‌ಪಿ ಸಹ ಸಹಕಾರ ನೀಡದೇ ನ್ಯಾಯಾಂಗ ನಿಂದನೆ ಮಾಡಿದ್ದಾರೆಂದು ವಕೀಲ ಸಂಜಯ್ ಬಿ. ಚಾನಲ್ ಅರೋಪಿಸಿದ್ದಾರೆ.